ಸೋಮವಾರ, ಆಗಸ್ಟ್ 8, 2022
21 °C

ಕಲಬುರ್ಗಿ | ಬಟ್ಟೆ ಅಂಗಡಿ; ವ್ಯಾಪಾರಕ್ಕೆ ಹಾತೊರೆಯುತ್ತಿರುವ ವರ್ತಕರು

ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೊರೊನಾ ಸೋಂಕು ಕಡಿಮೆಯಾದ ಮೇಲೆ ಬಹಳಷ್ಟು ವಾಣಿಜ್ಯ ಚುಟುವಟಿಕೆಗಳಿಗೆ ಅನುಮತಿ ನೀಡಿದ್ದಾರೆ. ಆದರೆ, ಬಟ್ಟೆ ವ್ಯಾಪಾರಕ್ಕೆ ಇನ್ನೂ ನಿರ್ಬಂಧ ಹೇರಿದ್ದು ಸರಿಯಲ್ಲ. ಕನಿಷ್ಠ ಸಮಯವಾದರೂ ಅವಕಾಶ ನೀಡಲಿ...’

ನಗರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡ ಬಹುಪಾಲು ವ್ಯಾಪಾರಿಗಳ ಒತ್ತಾಸೆ ಇದು. ವಾರದಲ್ಲಿ ಮೂರು ದಿನ ಅಥವಾ ಬೆಳಿಗ್ಗೆ 6ರಿಂದ ಬೆಳಿಗ್ಗೆ 10ರವರೆಗೆ ಅಥವಾ ಒಂದುದಿನ ಬಿಟ್ಟು ಒಂದು ದಿನ... ಹೀಗೆ ಯಾವುದಾದರೂ ಪರೋಕ್ಷ ಮಾರ್ಗ ಕಂಡುಕೊಂಡು ಅವಕಾಶ ನೀಡಬೇಕು ಎನ್ನುತ್ತಾರೆ ಅವರು.

ಜಿಲ್ಲೆಯ ಬಟ್ಟೆ ಅಂಗಡಿಗಳಿಗೆ ಬಾಗಿಲು ಹಾಕಿ ಎರಡು ತಿಂಗಳು ಕಳೆದಿದೆ. ಕೋವಿಡ್‌ ನಿಯಂತ್ರಣಕ್ಕೆ ಬಂದ ಮೇಲೂ ಬಾಗಿಲು ತೆರೆಯಲು ಅವಕಾಶ ನೀಡಿಲ್ಲ ಎನ್ನುವುದು ಅವರ ಗೋಳು.

‘ಅಂಗಡಿಗಳ ಮುಂದೆ ಮಾರ್ಕಿಂಗ್‌ ಮಾಡಿ, ಬ್ಯಾರಿಕೇಡ್‌ ಹಾಕಿಕೊಂಡು ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಲು ಸಾಧ್ಯವಿದೆ. ಆದರೂ ಇದೂವರೆಗೆ ಅಧಿಕಾರಿಗಳು ಮನವಿ ಪರಿಗಣಿಸಿಲ್ಲ. ಬಟ್ಟೆ ಕೂಡ ಅತ್ಯಗತ್ಯ ವಸ್ತು ಎಂದು ಪರಿಗಣಿಸಬೇಕಾಗಿದೆ’ ಎಂಬುದು ವರ್ತಕರು ಹೇಳಿಕೆ.

ಪ್ರತಿ ವರ್ಷ ರಂಜಾನ್‌ ತಿಂಗಳಲ್ಲೇ ಹೆಚ್ಚು ವ್ಯಾಪಾರ ನಡೆಯುತ್ತಿತ್ತು. ಕಳೆದ ಎರಡು ವರ್ಷಗಳಿಂದಲೂ ರಂಜಾನ್‌ನಲ್ಲಿ ವ್ಯಾಪಾರವೇ ನಡೆದಿಲ್ಲ. ಮಾರ್ಚ್, ಏಪ್ರಿಲ್‌, ಮೇ ತಿಂಗಳಲ್ಲಿ ಮದುವೆ, ಉತ್ಸವ, ಜಾತ್ರೆ, ಹಬ್ಬ, ಉರುಸ್‌ ಮುಂತಾದ ಮಹೋತ್ಸವಗಳು ಬರುತ್ತದೆ. ಹೀಗಾಗಿ, ಈ ಮೂರೇ ತಿಂಗಳ ವ್ಯಾಪಾರವು ಉಳಿದ ಒಂಬತ್ತು ತಿಂಗಳ ವ್ಯಾಪಾರಕ್ಕೆ ಸಮ. ಸೀಜನ್‌ ಇದ್ದ ಸಂದರ್ಭದಲ್ಲೇ ಕೈಕಟ್ಟಿ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ ಎಂಬುದು ಅವರ ಸಮಸ್ಯೆ.

ಮೂರು ಮುಖ್ಯ ಸಮಸ್ಯೆ: ಬಟ್ಟೆ ವರ್ಷದಿಂದ ವರ್ಷಕ್ಕೆ ಹಳತಾಗುತ್ತದೆ. ಸರಬರಾಜು ಕಂಪನಿಗಳಿಂದ ಒತ್ತಡ ಹೆಚ್ಚುತ್ತದೆ. ಸಾಲ ಪಡೆದವರ ಮೇಲೆ ಬ್ಯಾಂಕಿನ ಒತ್ತಡ ಹೆಚ್ಚುತ್ತದೆ... ಈ ಮೂರು ಮುಖ್ಯ ಸಮಸ್ಯೆಗಳನ್ನು ಹೆಚ್ಚು ಬಟ್ಟೆಯ ವ್ಯಾಪಾರಿಗಳು ಎದರಿಸುತ್ತಿದ್ದಾರೆ.‌

ಮೇಲಾಗಿ, ಬಟ್ಟೆ ಖರೀದಿ ಇಲ್ಲದ ಕಾರಣ ನೇರವಾಗಿ ಇದು ಟೇಲರಿಂಗ್ ಉದ್ಯಮದ ಮೇಲೂ ಹೊಡೆತ ನೀಡಿದೆ.

‘ಮಾಲೀಕರಿಗೆ ಪ್ರತಿ ತಿಂಗಳು ಬಾಡಿಗೆ ಕೊಡಬೇಕು. ಕಾಂಪ್ಲೆಕ್ಸ್‌ನವರಿಗೆ ನಿರ್ವಹಣೆ ಚಾರ್ಜ್‌ ಕೊಡಬೇಕು. ಕಾರ್ಮಿಕರಿಗೆ ಸಂಬಳ, ವಿದ್ಯುತ್‌ ಬಿಲ್‌, ತೆರಿಗೆ... ಹೀಗೆ ಎಲ್ಲವೂ ನಮಗೆ ಅನಿವಾರ್ಯ. ಕೋವಿಡ್‌ ಹೆಚ್ಚಾದಾಗ ನಾವು ಎಲ್ಲದಕ್ಕೂ ಸಹಕರಿಸಿದ್ದೇವೆ. ಈಗ ನಮಗೆ ಜಿಲ್ಲಾಡಳಿತ ಸಹಕರಿಸಬೇಕು’ ಎನ್ನುವುದು ಎಸ್‌ವಿಪಿ ಸರ್ಕಲ್‌ನಲ್ಲಿ ಸೀರೆ ವ್ಯಾಪಾರ ಮಾಡುವ ನಿಲೀಮಾ ಅವರ ಆಗ್ರಹ.

ವ್ಯಾಪಾರಿಗಳ ಕೊರತೆ, ಕೋರಿಕೆ ಏನು?

ಗ್ರಾಹಕರೂ ಪರದಾಡುತ್ತಿದ್ದಾರೆ
ಈಗ ವ್ಯಾಪಾರ ನೆಲ ಕಚ್ಚಿದೆ. ನಮ್ಮ ಕಷ್ಟಗಳನ್ನೂ ಜಿಲ್ಲಾಡಳಿ ಮನಗಾಣಬೇಕು. ಬಟ್ಟೆ ಸಿಗದೇ ಗ್ರಾಹಕರೂ ಪರದಾಡುತ್ತಿದ್ದಾರೆ. ಕನಿಷ್ಠ ವಾರದಲ್ಲಿ ಎರಡು ದಿನ ವ್ಯಾಪಾರಕ್ಕೆ ಅವಕಾಶ ನೀಡಿದರೆ ನಮ್ಮ ಬಾಡಿಗೆಯ ಹಣವಾದರೂ ಬರುತ್ತದೆ.
–ಬೃಂದಾವನ್‌ ಸಾರಡಾ, ಎಸ್‌ವಿಪಿ ಸರ್ಕಲ್‌

*
₹ 15 ಸಾವಿರ ವಹಿವಾಟು
ಇದು ವ್ಯಾಪಾರದ ಹಂಗಾಮಿನ ಸಮಯ. ಈ ವೇಳೆ ಪ್ರತಿ ದಿನ ಕನಿಷ್ಠ ₹ 10 ಸಾವಿರದಿಂದ ₹ 15 ಸಾವಿರದಷ್ಟು ಬಟ್ಟೆ ವ್ಯಾಪಾರ ನಡೆಯುತ್ತಿತ್ತು. ಲಾಕ್‌ಡೌನ್‌ ಕಾರಣ ಅಪಾರ ನಷ್ಟ ಅನುಭವಿಸುವಂತಾಗಿದೆ.
–ರಮೇಶ ಬೀದಿಮನಿ, ಬಟ್ಟೆ ವ್ಯಾಪಾರಿ

*
ಬಂಡವಾಳವೂ ಬರುತ್ತಿಲ್ಲ
ನಮ್ಮ ಅಂಗಡಿಯಲ್ಲಿ ಪುರುಷ, ಮಹಿಳೆಯರ ಹಾಗೂ ಮಕ್ಕಳ ಜೀನ್ಸ್‌ ಬಟ್ಟೆಗಳೇ ಇವೆ. ಈ ವರ್ಷ ರಂಜಾನ್‌ಗಾಗಿ ಹೆಚ್ಚು ಬಟ್ಟೆ ಖರೀದಿಸಿದ್ದೇವು. ಎಲ್ಲವೂ ಗೋಡೌನ್‌ನಲ್ಲಿ ಬಿದ್ದುಕೊಂಡಿವೆ. ಬಟ್ಟೆ ಕೆಡದಂತೆ ಹಾಗೂ ಇಲಿಗಳ ಕಾಟದಿಂದ ಕಾಪಾಡಲು ಕಾರ್ಮಿಕರು ಬೇಕು. ಈಗ ಹಾಕಿದ ಬಂಡವಾಳವೇ ಬರುತ್ತಿಲ್ಲ. ಇನ್ನು ಲಾಭ ಎಲ್ಲಿಯ ಮಾತು.
–ಪುರುಷೋತ್ತಮ, ಕಪಡಾ ಬಜಾರ್‌ ವ್ಯಾಪಾರಿ

*
ಎಲ್ಲೆಲ್ಲಿಂದ ಬರುತ್ತದೆ ಬಟ್ಟೆ?
ಕಲಬುರ್ಗಿ ನಗರಕ್ಕೆ ಹೆಚ್ಚು ಸಿದ್ಧ ಉಡುಪು ಹಾಗೂ ಸೀರೆಗಳು ಬರುವುದು ಮುಂಬೈ, ಪುಣೆಯಿಂದ. ಫ್ಯಾನ್ಸಿ ಬಟ್ಟೆಗಳು, ಒಳ ಉಡುಪುಗಳು ಗುಜರಾತ್‌, ಕೇರಳದ ತಿರುವಾಂಕೂರು, ಮಧ್ಯಪ್ರದೇಶದ ಇಂದೋರ್‌, ಕೋಲ್ಕತ್ತಾ ನಗರಗಳಿಂದ ಹೆಚ್ಚಾಗಿ ಬರುತ್ತವೆ.

ಬಿಡಿಯಾದ ಬಟ್ಟೆ, ಸೀರೆ, ಚೂಡಿದಾರ, ಮಕ್ಕಳ ಸಿದ್ಧ ಉಡುಪುಗಳ ಮಾರ್ಕೆಟ್‌ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲೇ ಹೆಚ್ಚಾಗಿದೆ. ಹಾಗಾಗಿ, ನಗರದಲ್ಲಿ ಮಾರಾಟವಾಗುವ ಬಟ್ಟೆಗಳನ್ನು ಅಲ್ಲಿಂದಲೇ ತರಿಸಿಕೊಳ್ಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು