ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನುಡಿ, ನಿಷ್ಠುರತೆಯ ಆದರ್ಶ ಹೇರೂರ; ಸಿ.ಎಂ ಬೊಮ್ಮಾಯಿ

Last Updated 25 ಜನವರಿ 2023, 5:09 IST
ಅಕ್ಷರ ಗಾತ್ರ

ಕಲಬುರಗಿ: ‘ವಿಠ್ಠಲ ಹೇರೂರ ಅವರು ದಿಟ್ಟ, ಧೀಮಂತ, ನೇರ ನುಡಿಯ ಬದ್ಧತೆ ಮತ್ತು ಪ್ರಾಮಾಣಿಕತೆಯೊಂದಿಗೆ ಸತ್ಯವನ್ನೇ ನುಡಿಯುತ್ತಿದ್ದ ನಾಯಕ. ಸಾರ್ವಜನಿಕ ಮತ್ತು ಸಾಮಾಜಿಕ ಜೀವನದಲ್ಲಿ ಅಂತಹ ವ್ಯಕ್ತಿತ್ವ ಸಿಗುವುದು ಅಪರೂಪ. ನೇರ ನುಡಿಗೆ ಸಾಕಷ್ಟು ವಿರೋಧಿಗಳು ಇದ್ದರೂ ಅವರಲ್ಲಿನ ಬದ್ಧತೆ ಮತ್ತು ವಿಚಾರಗಳಿಂದ ಅವರನ್ನು ಪ್ರಶ್ನಿಸಲು ಹಿಂಜರಿಯುತ್ತಿದ್ದರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಮಂಗಳವಾರ ಹೇರೂರ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಠ್ಠಲ ಹೇರೂರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಹೇರೂರರು ಕಣ್ಮರೆಯಾದರೂ ಅವರ ಹೋರಾಟ ಮತ್ತು ಚಿಂತನೆಗಳು ನಮ್ಮ ನಡುವೆ ಇವೆ. 80ರ ದಶಕದಲ್ಲಿ ಕಲ್ಯಾಣ ಕರ್ನಾಟಕ ಹಲವು ಹೋರಾಟಗಳನ್ನು ಕಂಡಿದೆ. ಅವುಗಳಲ್ಲಿ ವಿಠ್ಠಲ ಹೇರೂರ ಹೋರಾಟ ಎದ್ದು ಕಾಣುತ್ತದೆ’ ಎಂದರು.

‘ವಿವಿಧೆಡೆ ಹಂಚಿ ಹೋಗಿದ್ದ 30ಕ್ಕೂ ಹೆಚ್ಚು ಸಮುದಾಯಗಳನ್ನು ಒಗ್ಗೂಡಿಸಿ, ಒಂದು ಸ್ವರೂಪ ಕೊಟ್ಟರು. ನಾಡಿನ ಆಡಳಿತಗಾರರ, ಸಾಹಿತಿಗಳ ಗಮನ ಸೆಳೆದು ಸಮುದಾಯಕ್ಕೆ ಒಂದು ಮನ್ನಣೆ ತಂದುಕೊಟ್ಟು, ಮೀಸಲಾತಿ ಪಡೆಯುವ ಹಂತಕ್ಕೆ ಕರೆತಂದ ಶ್ರೇಯಸ್ಸು ಹೇರೂರರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಸಾಮಾಜಿಕ ಚಿಂತನೆಗಳೊಂದಿಗೆ ಆರಂಭವಾದ ಹೇರೂರ ಬದುಕು, ಅಂಬಿಗರ ಚೌಡಯ್ಯ ಅವರಂತೆ ನೇರ, ನಿಷ್ಠುರ ಗುಣ ಅಳವಡಿಸಿಕೊಂಡಿದ್ದರು. ಚೌಡಯ್ಯನ ವಚನಗಳಂತೆ ನಡೆದರು. ಹಿಂದುಳಿದ ಭಾಗದ ಬಡವರ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಮಾಜವನ್ನು ಕಟ್ಟಿ, ಅವರಲ್ಲಿ ಜಾಗೃತಿ ಮೂಡಿಸಿದರು’ ಎಂದರು.

‘ಹಾವೇರಿಯ ನರಸೀಪುರ ಗ್ರಾಮದ ಅಂಬಿಗರ ಚೌಡಯ್ಯ ಗುರುಪೀಠದ ಸ್ವಾಮೀಜಿ ಸಮಾಜ ಕಟ್ಟುವ ಕೆಲಸದಲ್ಲಿ ನಿರತವಾಗಲಿ. ನಾವೂ ಚೌಡಯ್ಯ ಗುರುಪೀಠದ ಅಭಿವೃದ್ಧಿಗೆ ಅಗತ್ಯ ಸಹಕಾರ ಕೊಡುತ್ತೇವೆ. ಸಮುದಾಯದ ಯುವಕರ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕಾಗಿ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು’ ಎಂದು ಬೊಮ್ಮಾಯಿ ಭರವಸೆ ನೀಡಿದರು.

ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ರಮೇಶ ದಾದಾ ಪಾಟೀಲ ಮಾತನಾಡಿ, ‘ಹೇರೂರ ಹೆಸರು ದೇಶದಾದ್ಯಂತ ಪ್ರಸಿದ್ಧಿ ಹೊಂದಿದೆ. ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶದಲ್ಲಿ ಕೋಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೂರು–ನಾಲ್ಕು ಮಂತ್ರಿಗಳು ಇದ್ದಾರೆ. ಆದರೆ, ಕರ್ನಾಟಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಇದ್ದರೂ ಒಬ್ಬರೂ ಮಂತ್ರಿಗಳಿಲ್ಲ. ಚುನಾವಣೆಯಲ್ಲಿ ನಮ್ಮ ಮತ ಪಡೆದವರು ಎಸ್‌ಟಿ ಸೇರ್ಪಡೆ ಏಕೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಈ ವೇಳೆ ಗುರುನಾಥ ಹೇರೂರ ಬರೆದ ‘ಸಾಮಾಜಿಕ ನ್ಯಾಯದ ಹರಿಕಾರ ವಿಠ್ಠಲ ಹೇರೂರ’ ಪುಸ್ತಕ, ಹೇರೂರ ಕುರಿತ ಹಾಡುಗಳ ಧ್ವನಿಸುರುಳಿ, ಹೊಂಗಿರಣ ಸ್ಮರಣ ಸಂಚಿಕೆ, ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಧ್ವಜಾರೋಹಣ ನೆರವೇರಿಸಿದರು.

ಪ್ರತಿಮೆ ನಿರ್ಮಾಣಕ್ಕೆ ₹11 ಲಕ್ಷ ನೀಡಿದ ಕನಕಪುರ ಪಾಲಿಕೆಯ ಮಾಜಿ ಸದಸ್ಯ ಚಿನ್ನಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಿಜಶರಣ ಅಂಬಿಗರ ಚೌಡಯ್ಯ ಧಾರ್ಮಿಕ ನಾಟಕ ಪ್ರದರ್ಶಿಸಲಾಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ಎಸ್‌ಪಿ ಇಶಾ ಪಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.

‘ತಡಿರೀ...ನಾನು ಸಿ.ಎಂ, ನನಗೆ ಗೊತ್ತಿದೆ’

‘ತಡಿರೀ ಸ್ವಲ್ಪ. ನಾನು ಮುಖ್ಯಮಂತ್ರಿ. ನನಗೆ ಗೊತ್ತಿದೆ, ಎಲ್ಲಿ ಏನಾಗಿದೆ ಅಂತ. ನೀನಾದ್ರು ಹೇಳು, ನಾನು ಹೋಗಿ ಸುಮ್ಮನೆ ಕೂರುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಬುರಾವ ಚಿಂಚನಸೂರ ಅವರನ್ನು ಗದರಿಸಿದರು.

ಭಾಷಣದಲ್ಲಿ ಎಸ್‌ಟಿ ಸೇರ್ಪಡೆಯ ಪ್ರಸ್ತಾವ ಕರಿತು ಮಾತನಾಡುವಾಗ ಚಿಂಚನಸೂರ ಮಧ್ಯಪ್ರವೇಶಿಸಿದ ಕಾರಣ ಮುಖ್ಯಮಂತ್ರಿ ಸಿಟ್ಟಿಗೆದ್ದರು.

‘ಬಸವರಾಜ ಬೊಮ್ಮಾಯಿ ಎರಡನೇ ಬಸವಣ್ಣ’

‘ಬಸವರಾಜ ಬೊಮ್ಮಯಿ ಅವರು ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ್ದಾರೆ. ನಿಮ್ಮಂತಹ ಮುಖ್ಯಮಂತ್ರಿಯವರು ರಾಜ್ಯಕ್ಕೆ ಬೇಕು. ಎರಡನೇ ಬಸವಣ್ಣ ನೀವೇ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

‘ಸಮುದಾಯಕ್ಕೆ ಸಹಾಯ ಮಾಡುತ್ತೇವೆ ಎಂದು ಎಷ್ಟೋ ನಾಯಕರು ಬಂದು ಹೋದರೂ ನಮಗೆ ಸಾಮಾಜಿಕ ನ್ಯಾಯ ಸಿಗಲಿಲ್ಲ. ಸಹನ, ತಾಳ್ಮೆ, ನಗುಮುಖದಿಂದ ರಥ ಹೋದಂತೆ ಹೋಗುತ್ತೀರಾ? ನಿಮಗೆ ಒಳ್ಳೆಯ ಭವಿಷ್ಯವಿದೆ. ಕೋಲಿ, ಕಬ್ಬಲಿಗ ಸಮುದಾಯವನ್ನು ಎಸ್‌ಟಿ ಸೇರ್ಪಡೆ ಮಾಡಿ’ ಎಂದರು.

ಯಾರ ಏನಂದರು?

ಅಂಬಿಗರ ಚೌಡಯ್ಯನಂತೆ ಹೇರೂರ

‘ಮೌಢ್ಯತೆ, ಕಂದಾಚಾರವನ್ನು ಹೇರೂರ ಅವರು ವಿರೋಧಿಸುತ್ತಿದ್ದರು. ನಮ್ಮ ಸಮುದಾಯ ಹಿಂದುಳಿದಿದೆ, ಅಕ್ಷರ ಜ್ಞಾನ ಇಲ್ಲ, ಸಾಮಾಜಿಕ ಚಿಂತನೆ ಇಲ್ಲ. ಅವರಿಗೆ ಶಿಕ್ಷಣ ಕೊಡಬೇಕು ಎಂದು ಹೇಳುತ್ತಿದ್ದರು. ಅಂಬಿಗರ ಚೌಡಯ್ಯನಂತೆ ಹೇರೂರ ಸಹ ನಿಷ್ಠುರವಿದ್ದರು. ಅವರ ಆಶಯಗಳನ್ನು ಈಡೇರಿಸಬೇಕು.

– ಎಂ.ವೈ.ಪಾಟೀಲ, ‌ಶಾಸಕ

***

ಯುದ್ಧ ಇನ್ನು ನಿಂತಿಲ್ಲ

ಸಮಾಜದ ಚಿಂತನೆಗೆ ಹೇರೂರರು ತಮ್ಮ ಜೀವನ ಮುಡಿಪಾಗಿ ಇರಿಸಿದ್ದರು. ಅಫಜಲಪುರದಲ್ಲಿನ ಶಾಲೆಗೆ ನನ್ನ ತಾಯಿ ಹೆಸರಿಟ್ಟು ಹೃದಯ ಶ್ರೀಮಂತಿಕೆ ಮೆರೆದರು. ಎಸ್‌ಟಿ ಸೇರ್ಪಡೆಗೆ ಹೇರೂರ ಅವರು ಆರಂಭಿಸಿದ್ದ ಯುದ್ಧ ಇನ್ನು ನಿಂತಿಲ್ಲ. ಗೆಲವು ಸಿಗುವವರೆಗೆ ಒಗ್ಗೂಡಿ ಹೋರಾಡಬೇಕು.

– ಪ್ರಮೋದ ಮದ್ವರಾಜ, ಮಾಜಿ ಸಚಿವ

***

ಪಕ್ಷಾತೀತ ಹೋರಾಟ ಅಗತ್ಯ

ಅಂಬಿಗರ ಚೌಡಯ್ಯ ಅವರ ವಿಚಾರಗಳನ್ನು ಹೇರೂರ ಅವರು ಎಲ್ಲೆಡೆ ಪ್ರಚಾರ ಮಾಡಿ, ಎಲ್ಲರಿಗೂ ತಲುಪಿಸಿದರು. ಎಲ್ಲರನ್ನೂ ಒಗ್ಗೂಡಿಸಿದರು. ಎಸ್‌ಟಿ ಸೇರ್ಪಡೆಗೆ ಸಮಾಜದ ಒಗ್ಗೂಡುವಿಕೆ, ಜನರ ಬೆಂಬಲ ಬೇಕಿದೆ. ಪಕ್ಷಾತೀತವಾಗಿ ಹೋರಾಟ ಮಾಡಿ, ಸರ್ಕಾರಕ್ಕೆ ಮನವರಿಕೆ ಮಾಡಬೇಕು.

– ಸಾಬಣ್ಣ ತಳವಾರ, ವಿಧಾನ ಪರಿಷತ್ ಸದಸ್ಯ

ಎಸ್‌ಟಿ ಪ್ರಾತಿನಿಧ್ಯ ನೀಡಿ

ನಮ್ಮನ್ನು ಎಸ್‌ಟಿಗೆ ಸೇರ್ಪಡೆ ಮಾಡಿದರೆ ಬಸವರಾಜ ಬೊಮ್ಮಾಯಿ ಅವರನ್ನು ಸೂರ್ಯ, ಚಂದ್ರ ಇರುವವರೆಗೂ ಸಮುದಾಯ ಸ್ಮರಿಸುತ್ತದೆ. ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ ಕೊಟ್ಟಂತೆ ನಮ್ಮ ಸಮುದಾಯಕ್ಕೂ ನೀಡಿ. ಎಸ್‌ಟಿ ಸೌಲಭ್ಯ ಘೋಷಿಸಿದರೆ ಹೇರೂರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಬಾಬುರಾವ ಚಿಂಚನಸೂರ, ‌ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ

***

ಎಸ್‌ಟಿ ಕೊಟ್ಟರೆ ಸದಾ ಸ್ಮರಣೆ

ಸಮಾಜದಲ್ಲಿ ಕೋಲಿ, ಕೋಳಿ ಸಮುದಾಯಕ್ಕೆ ಸಮಾನ ಅವಕಾಶ ಸಿಗಬೇಕಿದ್ದರೆ ಎಸ್‌ಟಿ ಸ್ಥಾನ ನೀಡಿ, ಹೇರೂರ ಕನಸು ಈಡೇರಿಸಿ. ತಳವಾರ ಸೇರ್ಪಡೆಯಾಗಿ ಎರಡು ವರ್ಷಗಳ ನಂತರ ಆದೇಶ ಪತ್ರ ತಂದು ಕೊಟ್ಟಿದ್ದಿರಾ. ಎಸ್‌ಟಿಗೆ ಸೇರ್ಪಡೆ ಮಾಡಿದರೆ, ಯಾವತ್ತು ಸ್ಮರಿಸುತ್ತೇವೆ.

– ಲಚ್ಚಪ್ಪ ಜಮಾದಾರ್, ಸಮುದಾಯದ ಮುಖಂಡ

***

ದತ್ತನ ಪಾದುಕೆಗಳಿಗೆ ಸಿ.ಎಂ ಪೂಜೆ

ಕಾರ್ಯಕ್ರಮಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ದತ್ತ ಮಹಾರಾಜರ ದೇವಸ್ಥಾನಕ್ಕೆ ಭೇಟಿ ನೀಡಿದರು. ಭೀಮಾ, ಅಮರ್ಜಾ ನದಿಗಳ ಸಂಗಮ ಸ್ಥಳದಲ್ಲಿ ವಿಶೇಷ ಪೂಜೆ ನೆರವೇರಿಸಿ, ದತ್ತನ ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮಾಡಿ, ದತ್ತನ ಪಾದುಕೆಗಳ‌ ದರ್ಶನ ಪಡೆದರು.

‘ಅತಿ ಭಕ್ತಿಭಾವದಿಂದ ಗಾಣಗಾಪುರಕ್ಕೆ ಬಂದಿದ್ದು, ದತ್ತಾತ್ರೇಯರ ಆಶೀರ್ವಾದ ಮತ್ತು ಪ್ರೇರಣೆ ಸಿಕ್ಕಿದೆ. ರಾಜ್ಯದ ಅಭಿವೃದ್ದಿ, ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರು:

ಹಾವೇರಿಯ ನರಸೀಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ, ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ, ಚಿಣಮಗೇರಿ ಸಿದ್ಧರಾಮ ಶಿವಾಚಾರ್ಯರು, ಹೈದರಾಬಾದ್ ಮುದಿರಾಜ ಕಾಸಾನಿ ಜ್ಞಾನೇಶ್ವರ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಡಾ. ಅಜಯ್ ಸಿಂಗ್, ಶಶೀಲ ಜಿ.ನಮೋಶಿ, ಕ್ರೆಡೆಲ್‌ ಅಧ್ಯಕ್ಷ ಚಂದು ಪಾಟೀಲ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮಾದಾರ, ಕರ್ನಾಟಕ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ, ಮುಖಂಡ ರಾಜಗೋಪಾಲ ರೆಡ್ಡಿ, ರಮೇಶ ನಾಟೀಕಾರ, ಲಕ್ಷ್ಮಣ ಅವಂಟಿ, ನಿವೃತ್ತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ಅವ್ವಣ್ಣ ಮ್ಯಾಕೇರಿ, ಸರದಾರ ರಾಯಪ್ಪ, ಹೇರೂರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭಗವಂತಪ್ಪ ಹೇರೂರ, ನಿರ್ದೇಶಕ ಗುರುನಾಥ ಹೇರೂರ, ಪ್ರಾಂಶುಪಾಲ ರಾಜಶೇಖರ ಎಸ್‌.ತಲಾರಿ, ಕಾರ್ಯದರ್ಶಿ ಲಕ್ಷ್ಮಣ ಹೇರೂರ, ದೊಡ್ಡಪ್ಪಗೌಡ ಪಾಟೀಲ, ಶರಣಪ್ಪ ಮಾನೇಗಾರ, ಶಿವಾಜಿ ಮೆಟ್ಟಗಾರ, ಮಹಿಳಾ ಮುಖಂಡರಾದ ಸುನಿತಾ ತಳವಾರ, ಶೋಭಾ ಬಾಣಿ ಸೇರಿ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT