ಶನಿವಾರ, ಡಿಸೆಂಬರ್ 7, 2019
21 °C
ಕಲ್ಯಾಣ ಕರ್ನಾಟಕ ಪ್ರದೇಶ ಉದ್ಘೋಷಣಾ ಭಾಷಣದಲ್ಲಿ ಮುಖ್ಯಮಂತ್ರಿ ಭರವಸೆ

ಶರಣ ಸಂಸ್ಕೃತಿ ಚಿರಸ್ಥಾಯಿ ಮಾಡಲು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ ಬೆನ್ನಲ್ಲೇ, ಶರಣ ಸಂಸ್ಕೃತಿಯನ್ನು ಚಿರಸ್ಥಾಯಿ ಮಾಡಲು ಬೇಕಾದ ಎಲ್ಲ ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಇಲ್ಲಿನ ಎನ್‌.ವಿ. ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ಉದ್ಘೋಷಣೆ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಸೇರಿದ್ದ ಆರೂ ಜಿಲ್ಲೆಗಳ ಸಾವಿರಾರು ಜನರನ್ನು ಉದ್ದೇಶಿಸಿ ‘ಕಲ್ಯಾಣ ಕರ್ನಾಟಕ ಉದ್ಘೋಷಣಾ ಭಾಷಣ’ ಮಾಡಿದ ಅವರು, ‘ನಿಜಾಮರ ಗುಲಾಮಗಿರಿಯನ್ನು ಭಾವನಾತ್ಮವಾಗಿಯೂ ಕಿತ್ತೆಸೆಯಲು ಈ ಬದಲಾವಣೆ ಮಾಡಿದ್ದೇವೆ’ ಎಂದರು.

‘ದಾಸ್ಯದ ವಿಮೋಚನೆಗಾಗಿ ಹೋರಾಡಿದ ಈ ಭಾಗದ ಎಲ್ಲ ಹೋರಾಟಗಾರರನ್ನೂ ಶ್ರದ್ಧಾಪೂರ್ವಕವಾಗಿ ನೆನೆಯುತ್ತೇನೆ. ಆರೂ ಜಿಲ್ಲೆಗಳ ಜನರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ. ಹಿಂದುಳಿದ ಜನ, ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನೇ ಕಿತ್ತೆಸೆಯುತ್ತೇನೆ. ಯಾವ ಕಾರಣಕ್ಕೂ ನಿಮ್ಮ ನಂಬಿಕೆಗೆ ಧಕ್ಕೆಯಾಗಲು ಬಿಡುವುದಿಲ್ಲ’ ಎಂದು ಮಾತುಕೊಟ್ಟರು.

‘ಸೆ. 17ರಂದೇ ಈ ಭಾಗ ವಿಮೋಚನೆಯಾಗಿದೆ. ಇದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಆಗಿದೆ. ಹಾಗಾಗಿ, ಈ ದಿನ ನಮಗೆ ಹೆಚ್ಚು ಸಂತಸ ತಂದಿದೆ’ ಎಂದರು.

ರೈತರಿಗೆ ₹ 4000 ಸಮ್ಮಾನ್‌ ಧನ: 

‘ಪ್ರಧಾನ ಮಂತ್ರಿ ರೈತ ಸಮ್ಮಾನ್‌ ಯೋಜನೆ ಅಡಿ ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ತಲಾ ₹ 2000 ನೀಡುತ್ತದೆ. ಇದರ ಜತೆಗೆ ರಾಜ್ಯ ಸರ್ಕಾರದಿಂದಲೂ ₹ 4000 ಸೇರಿಸಿ ನೀಡಲಾಗುತ್ತಿದೆ. ಈಗಾಗಲೇ ಲಕ್ಷಾಂತರ ರೈತರು ಇದರ ಪ್ರಯೋಜನೆ ಪಡೆದುಕೊಂಡಿದ್ದಾರೆ’ ಎಂದು ಯಡಿಯೂರಪ್ಪ ತಿಳಿಸಿದರು.

‘ಬಹುಪಾಲು ಕಡೆ ನಿರುದ್ಯೋಗ ಹಾಗೂ ವಲಸೆ ಸಮಸ್ಯೆ ಇನ್ನೂ ಹಾಗೇ ಇವೆ. ವಲಸೆ ನಿಲ್ಲಿಸಲು ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವುದು ಅಗತ್ಯವಾಗಿದೆ. ಅತಿವೃಷ್ಟಿಯಿಂದ ಬಹುಪಾಲು ಜಿಲ್ಲೆಗಳು ಸಂಕಷ್ಟಕ್ಕೀಡಾಗಿದ್ದು, ಅಲ್ಲಿ ಜೀವನ ಕ್ರಮವನ್ನು ಮತ್ತೆ ಉತ್ತೇಜನಗೊಳಿಸಬೇಕಿದೆ. ಇದಕ್ಕೆ ರಾಜ್ಯ ಸರ್ಕಾರ ಪೂರ್ಣ ಸಿದ್ಧವಾಗಿದೆ’ ಎಂದು ಅಭಯ ನೀಡಿದರು.

ಆಶಯ ಭಾಷಣ ಮಾಡಿದ ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ, ‘ಭಾರತದ ಒಕ್ಕೂಟ ಸೇರುವಲ್ಲಿ ಜಮ್ಮು– ಕಾಶ್ಮೀರ ಹಾಗೂ ಹೈದರಾಬಾದ್‌ ರಾಜ್ಯಗಳಿಂದ ಏಕಕಾಲಕ್ಕೆ ವಿರೋಧ ವ್ಯಕ್ತವಾಗಿತ್ತು. 370ನೇ ವಿಧಿ ಹಿಂದಕ್ಕೆ ಪಡೆಯುವ ಮೂಲಕ ಪ್ರಧಾನಿ ಮೋದಿ ಅವರು ಜಮ್ಮು– ಕಾಶ್ಮೀರವನ್ನು ಪೂರ್ಣ ಪ್ರಮಾಣದಲ್ಲಿ ಭಾರತ ಒಕ್ಕೂಟಕ್ಕೆ ತೆಗೆದುಕೊಂಡರು. ಈಗ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ಹೈದಾರಾಬಾದ್‌ನ ದಾಸ್ಯ ಭಾವವನ್ನು ಪೂರ್ಣವಾಗಿ ಅಳಿಸಿದ್ದಾರೆ. ಈ ಎರಡೂ ಘಟನೆಗಳು ಏಕಕಾಲಕ್ಕೆ ಸಂಭವಿಸಿದ್ದು ಹಮ್ಮೆಯ ಸಂಗತಿ’ ಎಂದರು.

‘ನಿಜಾಮ ದೌರ್ಜನ್ಯದಿಂದ ಬಳಲಿದ ಜನರ ಭಾವನೆಗೆ ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ. ಜನರ ಸ್ವಾಭಿಮಾನಕ್ಕೆ ಗೌರವ ಕೊಟ್ಟಿದ್ದಾರೆ. ಇನ್ನು ಮುಂದೆ ಪ್ರತಿ ಹಳ್ಳಿಯನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದೂ ಅವರು ಭರವಸೆ ನೀಡಿದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಎಂ.ವೈ. ಪಾಟೀಲ, ಡಾ.ಅವಿನಾಶ ಜಾಧವ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ ತೆಲ್ಕೂರ, ರಾಜುಗೌಡ, ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ, ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಶಿರಸಗಿ, ಮುಖಂಡರಾದ ಶಶೀಲ್‌ ನಮೋಶಿ, ಬಾಬುರಾವ್‌ ಚಿಂಚನಸೂರ, ಸುನೀಲ ವಲ್ಯಾಪುರೆ, ಮಾಲೀಕಯ್ಯ ಗುತ್ತೇದಾರ, ಸಾಂಖಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ, ಐಜಿಪಿ ಮನೀಷ್‌ ಖರ್ಬೀಕರ್‌,  ಜಿಲ್ಲಾಧಿಕಾರಿ ಬಿ.ಶರತ್‌, ಪೊಲೀಸ್‌ ಆಯುಕ್ತ ಡಾ.ಎಂ.ಎನ್‌. ನಾಗರಾಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಪಿ.ರಾಜಾ ಇದ್ದರು.

ಪ್ರತಿಕ್ರಿಯಿಸಿ (+)