ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಮಿಷಕ್ಕೆ ಒಳಗಾಗಿ ತತ್ವ ಸೋಲಿಸಬೇಡಿ’

ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಪರ ಪ್ರಚಾರ ಭಾಷಣ ಮಾಡಿದ ಮಲ್ಲಿಕಾರ್ಜುನ ಖರ್ಗೆ
Last Updated 4 ಡಿಸೆಂಬರ್ 2021, 2:46 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಸಕ್ತ ವಿಧಾನ ಪರಿಷತ್‌ ಚುನಾವಣೆಯನ್ನು ನೀವು ಅಭಿವೃದ್ಧಿ ಹಾಗೂ ತತ್ವದ ಆಧಾರದ ಮೇಲೆ ಪರಿಗಣಿಸಬೇಕು. ನಮಗೆ ಸೋಲಾದರೂ ನಮ್ಮ ಪಕ್ಷ ಉಳಿಸಿಕೊಂಡು ಬಂದ ತತ್ವಕ್ಕೆ ಸೋಲಾಗಬಾರದು. ಯಾರೋ ನೀಡುವ ಆಮಿಷಕ್ಕೆ ನೀವು ನಂಬಿಕೊಂಡ ತತ್ವಕ್ಕೆ ಸೋಲಾಗಲು ಬಿಡಬೇಡಿ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ಕಲಬುರಗಿ–ಯಾದಗಿರಿ ವಿಧಾನ ಪರಿಷತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಪರನಗರದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಜೆಪಿಯವರ ತತ್ವ ಹಾಗೂ ಕಾಂಗ್ರೆಸ್‌ ತತ್ವ ನಿಮಗೆ ಮೇಲ್ನೋಟಕ್ಕೇ ಗೊತ್ತಾಗುತ್ತದೆ. ನಾವು ಮಾಡಿದ ಅಭಿವೃದ್ಧಿ ಮತ್ತು ಅವರ ಎಡಬಿಡಂಗಿ ಕೆಲಸಗಳನ್ನೂ ನೀವು ತೂಗಿ ನೋಡಿ. ವಿನಾಕಾರಣ ಯಾರಿಗೋ ಮತ ಹಾಕಿ ಅಂಬೇಡ್ಕರ್‌ ಅವರು ನೀಡಿದ ಮತದ ಮೌಲ್ಯ ಹಾಳು ಮಾಡಬೇಡಿ’ ಎಂದೂ ಸಲಹೆ
ನೀಡಿದರು.

‘ಉದ್ಯೋಗ ಭದ್ರತೆ, ಆಹಾರ ಭದ್ರತೆ, ಉಚಿತ ಶಿಕ್ಷಣದಂಥ ಗಮನಾರ್ಹ‌ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ನೀಡಿದೆ. ಮೋದಿ ಅವರು ಪ್ರಧಾನಿಯಾದ ದಿನದಿಂದಲೇ ಈ ಎಲ್ಲ ಯೋಜನೆಗಳನ್ನೂ ಮಣ್ಣುಪಾಲು ಮಾಡುತ್ತ ಸಾಗಿದ್ದಾರೆ. ಬರೀ ಹೊಟ್ಟೆತುಂಬ ಮಾತನಾಡುವವರನ್ನು ಬಿಟ್ಟು, ನಿಮ್ಮ ಹೊಟ್ಟೆ ತುಂಬಿಸುವಂಥ ಕೆಲಸ ಮಾಡಿದವರನ್ನು ಗೆಲ್ಲಿಸಿ’ ಎಂದರು.

‘ಲಾಲ್‌ಕೃಷ್ಣ ಅಡ್ವಾನಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾಗ 371–ಜೆ ಜಾರಿಗೊಳುಸುವಂತೆ ನಾನೇ ಅವರ ಬಳಿ ಮನವಿ ಮಾಡಿದ್ದೆ. ಇದು ಯಾವ ಕಾರಣಕ್ಕೂ ಸಾಧ್ಯವಿಲ್ಲ ಎಂದು ಅಲ್ಲಗಳೆದಿದ್ದರು. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಸಂಸತ್‌ನಲ್ಲಿ ಪೂರ್ಣ ಬೆಂಬಲದೊಂದಿಗೆ ಈ ವಿಧಿ ಜಾರಿಗೊಳಿಸಿದೆವು. ಪರಿಣಾಮ ಈ ಭಾಗದ ಬಡವರ ಮಕ್ಕಳಿಗೂ ಇಂದು ವೈದ್ಯರಾಗುವ, ಉನ್ನತ ಶಿಕ್ಷಣ, ಉನ್ನತ ಹುದ್ದೆ ಪಡೆಯುವ ಮಾರ್ಗ ಸಿಕ್ಕಿದೆ. ಇಂಥದ್ದನ್ನೆಲ್ಲ ನೀವು ಹೇಗೆ ಮರೆಯುತ್ತೀರಿ?’ ಎಂದೂ ಅವರು ಪ್ರಶ್ನಿಸಿದರು.

‘ನಮ್ಮ ಸರ್ಕಾರವಿದ್ದಾಗ ಪೆಟ್ರೋಲ್‌ ದರ ಕೇವಲ 10 ಪೈಸೆ ಹೆಚ್ಚಾದಾಗ ಇದೇ ಮೋದಿ, ಶಾ ಝೇಂಡಾ ಹಿಡಿದುಕೊಂಡು ಬೀದಿಗಿಳಿದಿದ್ದರು. ಈಗ ಆ ಝೇಂಡಾಗಳೆಲ್ಲ ಎಲ್ಲಿ ಹೋದವು. ಸುಳ್ಳಿನ ಸರದಾರನನ್ನು ಮೇಲೇರಿಸುವ ಸಲುವಾಗಿ ಇಡೀ ಸರ್ಕಾರ ಸುಳ್ಳು ಹೇಳುತ್ತಲೇ ಇದೆ. ನಾವು ಏನಾದರೂ ಪ್ರಶ್ನಿಸಿದರೆ ನೆಹರೂ, ಗಾಂಧಿ, ಅಂಬೇಡ್ಕರ್, ಸಂವಿಧಾನವನ್ನೇ ಟೀಕಿಸುವ ಹೇಳಿಕೆ ನೀಡುತ್ತಾರೆ. ನಾಚಿಕೆಯಾಗಬೇಕು ಇವರಿಗೆ’ ಎಂದು ಖರ್ಗೆ ಆಕ್ರೋಶ
ಹೊರಹಾಕಿದರು.‌

ಶಾಸಕರಾದ ಡಾ.ಅಜಯಸಿಂಗ್‌, ಖನೀಜ್‌ ಫಾತಿಮಾ, ಎಂ.ವೈ. ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಡಾ.ಶರಣಪ್ರಕಾಶ ಪಾಟೀಲ, ಬಿ.ಆರ್. ಪಾಟೀಲ, ವಿಜಯಕುಮಾರ ರಾಮಕೃಷ್ಣ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಠೋಡ, ಸುಭಾಷ ರಾಠೋಡ, ಆಲಂಖಾನ್, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠರಾವ್ ಮೂಲಗೆ, ಬಾಬು ಬಂಡಿ, ಶರಣಬಸಪ್ಪ ಗೋಗಿ, ಲಾಲ್‌ ಅಹ್ಮದ್‌, ಸೋಮಸೇಖರ ಗೋನಾಯಕ ಹಲವರು ವೇದಿಕೆ ಮೇಲಿದ್ದರು.

*

‘ಮಾತೆಂಬ ಬಾರಕೋಲಿನಿಂದ ಹೊಡೆಯಿರಿ’

‘ಬಿಜೆಪಿಯ ಕೆಲವು ನಾಯಕರು ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಿದಾಗೆಲ್ಲ ನೀವು ನನ್ನ ಬಳಿ ಬಂದು ದೂರು ಹೇಳಬೇಡಿ. ಮಾತನಾಡಿದ ಜಾಗದಲ್ಲೇ ಅವರಿಗೆ ಮಾತಿನ ಮೂಲಕವೇ ಬಾರಕೋಲಿನ ಏಟು ಕೊಡಿ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದರು.

‘ಕೇಂದ್ರದಲ್ಲಿ ಯಾರು ಏನು ತಪ್ಪು ಮಾಡುತ್ತಾರೋ ಅವರನ್ನು ನಾನು ಪ್ರಶ್ನಿಸುತ್ತೇನೆ. ಯಾರಾದರೂ ಏನು ಪ್ರಶ್ನೆ ಮಾಡಿದರೆ ಅಲ್ಲೇ ಉತ್ತರಿಸುತ್ತೇನೆ. ಸ್ಥಳೀಯವಾಗಿ ಯಾರಾದರೂ ತೇಜೋವಧೆ ಮಾಡಲು ಬಂದರೆ ನನ್ನ ಪ್ರತಿಕ್ರಿಯೆಗೆ ಕಾಯಬೇಡಿ. ಅಂಥವರಿಗೆ ಛಡಿ ಏಟೇ ಉತ್ತರವಾಗಲಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT