ಸಂಬಂಧಿಗಳನ್ನು ಬಿಟ್ಟು ಗೂಂಡಾಗಿರಿ ಮಾಡಿಸುತ್ತಿರುವ ಜಾಧವ

ಶನಿವಾರ, ಏಪ್ರಿಲ್ 20, 2019
31 °C
ಕಾಂಗ್ರೆಸ್‌ ಪಕ್ಷದ ಬಂಜಾರ ಮುಖಂಡರ ಆರೋಪ; ಉಮೇಶ ಜಾಧವ ವಿರುದ್ಧವೂ ದೂರಿಗೆ ನಿರ್ಧಾರ

ಸಂಬಂಧಿಗಳನ್ನು ಬಿಟ್ಟು ಗೂಂಡಾಗಿರಿ ಮಾಡಿಸುತ್ತಿರುವ ಜಾಧವ

Published:
Updated:

ಕಲಬುರ್ಗಿ: ‘ಚಿತ್ತಾಪುರ ತಾಲ್ಲೂಕಿನ ತಾಂಡಾಗಳಲ್ಲಿ ಪ್ರಚಾರ ಮುಗಿಸಿಕೊಂಡು ಬರುವಾಗ ನಮ್ಮ ಕಾರು ಅಡ್ಡಗಟ್ಟಿ ಕೊಲೆ ಬೆದರಿಕೆ ಒಡ್ಡಲಾಯಿತು. ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರ ಕುಮ್ಮಕ್ಕಿನಿಂದ ಅವರ ಸಂಬಂಧಿಗಳು ಹಾಗೂ ಕೆಲ ಬಾಡಿಗೆ ಗೂಂಡಾಗಳು ಈ ಕೃತ್ಯವೆಸಗಿದರು’ ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯಕ ಹಾಗೂ ಕಾಂಗ್ರೆಸ್‌ ಪಕ್ಷದ ಬಂಜಾರ ಸಮಾಜದ ಮುಖಂಡರು ದೂರಿದರು.

‘ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಸಮಾಜದ ಸಾಮರಸ್ಯ ಹಾಳು ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ’ ಎಂದೂ ಅವರು ಗುರುವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಲಂಬಾಣಿ ತಾಂಡಾಗಳಲ್ಲಿ ಪ್ರಚಾರಕ್ಕೆ ಹೋದಾಗ ಜನರು ನಮಗೆ ವಿರೋಧ ಮಾಡುತ್ತಿಲ್ಲ. ಖರ್ಗೆ ಅವರಿಗೇ ಮತ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ನಾವು ಪ್ರಚಾರ ಮುಗಿಸಿ ಬರುವಾಗ ಉಮೇಶ ಜಾಧವ ಅವರ ಸಂಬಂಧಿಗಳು ಹಾಗೂ ಅವರು ನೇಮಿಸಿಕೊಂಡಿರುವ ಬಾಡಿಗೆ ಗೂಂಡಾಗಳು ದರೋಡೆಕೋರರಂತೆ ದಾರಿ ಮಧ್ಯೆ ನಮ್ಮ ಕಾರುಗಳನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆಗೆ ಯತ್ನಿಸುತ್ತಿದ್ದಾರೆ’ ಎಂದು ಮಾಜಿ ಸಚಿವರಾದ ರೇವೂ ನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಮುಖಂಡ ಸುಭಾಷ ರಾಠೋಡ ಆಪಾದಿಸಿದರು.

‘ಬುಧವಾರ ಮುಗಳನಾಗಾವದಲ್ಲಿ ಸಭೆ ಮುಗಿಸಿ ಬರುವಾಗ ನಾಲವಾರ ಮುಖ್ಯರಸ್ತೆಯಲ್ಲಿ ಉಮೇಶ ಜಾಧವ ಅವರ ಸಂಬಂಧಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಲ್ಮೀಕಿ ರಾಠೋಡ ಹಾಗೂ ಇತರ 10–12 ಜನರು ಕಾರು ಅಡ್ಡಗಟ್ಟಿದರು. ಅಮಲಿನಲ್ಲಿದ್ದ ಅವರೆಲ್ಲ ಸಚಿವರು ಮತ್ತು ನನ್ನನ್ನು ಅವಾಚ್ಯವಾಗಿ ನಿಂದಿಸಿದರು. ಡೀಸೆಲ್‌–ಪೆಟ್ರೋಲ್‌ಹಾಕಿ ಸುಟ್ಟುಬಿಡೋಣ ಎಂದು ಹೇಳಿ ಕೊಲೆಗೂ ಯತ್ನಿಸಿದರು’ ಎಂದು ಸುಭಾಷ ದೂರಿದರು.

‘ನನ್ನ ಕಾರು ಅಡ್ಡಗಟ್ಟಿ ಕಾರಿನಲ್ಲಿದ್ದ ಸುಭಾಷ ರಾಠೋಡ ಅವರನ್ನು ಎಳೆದಾಡಿ ಅಂಗಿ ಹರಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ರವಿ ರಾಠೋಡ ಅವರ ಮೇಲೆ ದೌರ್ಜನ್ಯವೆಸಗಿದರು. ಪ್ರಶ್ನಿಸಿದ್ದಕ್ಕೆ ನನಗೂ ಅವಾಚ್ಯವಾಗಿ ನಿಂದಿಸಿದರು’ ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ಪಕ್ಷದ ಪ್ರಮುಖರಾದ ಕಾಂತಾ ನಾಯಕ, ಜಗದೇವ ಗುತ್ತೇದಾರ, ತಲಾ ರಾಠೋಡ, ಮಾರುತಿರಾವ ಮಾಲೆ, ಅಲ್ಲಮಪ್ರಭು ಪಾಟೀಲ, ನಾಮದೇವ ರಾಠೋಡ, ರವಿ ರಾಠೋಡ ಪತ್ರಿಕಾಗೋಷ್ಠಿಯಲ್ಲಿದ್ದರು.  

ಚುನಾವಣಾ ಆಯೋಗದಿಂದ ಜಿಲ್ಲಾ ಆಡಳಿತದ ಮೇಲೆ ಒತ್ತಡ

‘ಚುನಾವಣಾ ಆಯುಕ್ತರು ಬಿಜೆಪಿ ಕೈಗೊಂಬೆಯಾಗಿ, ಜಿಲ್ಲಾ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿಯು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದರೂ ಕ್ರಮವಾಗುತ್ತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ದೂರಿದರು.

‘ಸಂಪುಟ ಸಚಿವ ಪರಮೇಶ್ವರ ನಾಯ್ಕ್‌ ಅವರ ಮೇಲೆ ಹಲ್ಲೆ ನಡೆಯುತ್ತದೆ ಎಂದರೆ ಹೇಗೆ? ದಾಳಿ ಮಾಡಿದವರು ಪೆಟ್ರೋಲ್‌ ಹಾಕಿ ಕಾರು ಸುಡೋಣ ಎನ್ನುವುದು ವಿಡಿಯೋದಲ್ಲಿ ದಾಖಲಾಗಿದೆ. ಕಾರಿನಲ್ಲಿ ಇದ್ದ ಸಚಿವರು ಸೇರಿ ಐದು ಜನರನ್ನೂ ಕೊಲೆ ಮಾಡಲು ಅವರು ಹೊರಟಿದ್ದರಾ? ರಸ್ತೆಯಲ್ಲಿ ಹೀಗೆ ಮಾಡಿಸಿ ಉಮೇಶ ಜಾಧವ ಅವರ ಅಣ್ಣ ಮತ್ತು ಅವರ ಮಗ ಪೊಲೀಸ್‌ ಠಾಣೆಯಲ್ಲಿ ಸಂಧಾನಕ್ಕೆ ಬಂದಿದ್ದು ಏಕೆ?’ ಎಂದು ಅವರು ಪ್ರಶ್ನಿಸಿದರು.

‘ಇದಕ್ಕೆಲ್ಲ ರವಿಕುಮಾರ್‌ ಕಾರಣ’

‘ಗುಲಬರ್ಗಾ ಕ್ಷೇತ್ರದಲ್ಲಿ ಜಾತಿ ಮಧ್ಯೆ ವಿಷಬೀಜ ಬಿತ್ತುವ ಯತ್ನದ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರೇ ಇದರ ನಿರ್ದೇಶಕರು’ ಎಂದು ಪ್ರಿಯಾಂಕ್ ಖರ್ಗೆ ಮತ್ತು  ಸುಭಾಷ ರಾಠೋಡ ದೂರಿದರು.

‘ನಮ್ಮ ಬಗ್ಗೆ ಮಾತನಾಡಲು ಅವರಿಗೆ ವಿಷಯಗಳೇ ಇಲ್ಲ. ಹೀಗಾಗಿ ವೈಯಕ್ತಿಕ ತೇಜೋವಧೆಯಲ್ಲಿ ತೊಡಗಿದ್ದಾರೆ. ಬಿಜೆಪಿಗೆ ಮುಖ್ಯ ಅಜೆಂಡಾ ಅಂದರೆ ಪ್ರಿಯಾಂಕ್‌ ಖರ್ಗೆ. ರವಿಕುಮಾರ್ ಇಲ್ಲಿಗೆ ಬಂದ ನಂತರ ಇವೆಲ್ಲವೂ ಆಗುತ್ತಿವೆ’ ಎಂದು ಪ್ರಿಯಾಂಕ್‌ ಆಪಾದಿಸಿದರು.

‘ರವಿಕುಮಾರ್‌ ಅಂತಹ 10 ಜನ ಬಂದರೂ ನಾವು ಹೆದರುವುದಿಲ್ಲ. ಒಂದು ಚುನಾವಣೆಗಾಗಿ ಸಮಾಜ ಹಾಳುಮಾಡಬೇಡಿ. ಜನಪ್ರಿಯತೆ ಕಡಿಮೆಯಾಗಿದ್ದಕ್ಕೇ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಮನೆಗೆ ಹೋಗಿದ್ದಾರೆ. ಖರ್ಗೆ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬೇಡಿ’ ಎಂದು ಅವರು ತಾಕೀತು ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !