ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ.ಕ. ಭಾಗದ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ’

ಕೆಪಿಸಿಸಿ ಕಾನೂನು, ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ ಭೀಮನಗೌಡ ಟೀಕೆ
Last Updated 18 ಆಗಸ್ಟ್ 2022, 16:08 IST
ಅಕ್ಷರ ಗಾತ್ರ

ಕಲಬುರಗಿ: ಸಂವಿಧಾನದ 118ನೇ ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಕಲಂನಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ತಂದಿದ್ದರೂ ಈ ಭಾಗದಲ್ಲಿನ ಖಾಲಿ ಹುದ್ದೆಗಳ ಭರ್ತಿ ಮಾಡುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕೆಪಿಸಿಸಿ ಕಾನೂನು, ಮಾಹಿತಿ ಹಕ್ಕು ಹಾಗೂ ಮಾನವ ಹಕ್ಕುಗಳ ವಿಭಾಗದ ಕಾರ್ಯದರ್ಶಿ ಹಾಗೂ ವಕೀಲ ಭೀಮನಗೌಡ ಪರಗೊಂಡ ಟೀಕಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘44 ಇಲಾಖೆಗಳಲ್ಲಿ ಕ.ಕ. ವ್ಯಾಪ್ತಿಯಲ್ಲಿ ನೇರ ಮುಂಬಡ್ತಿಯಿಂದ ತುಂಬಬೇಕಾಗಿರುವ ಹುದ್ದೆಗಳ ಸಂಖ್ಯೆ 24,131. ಆದರೆ, ಕೇವಲ 14,334 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ನೇರ ನೇಮಕಾತಿಯ ಮೂಲಕ ರಾಜ್ಯದ 44 ಇಲಾಖೆಗಳಲ್ಲಿ ಭರ್ತಿ ಮಾಡಬೇಕಿರುವ ಎ, ಬಿ, ಸಿ ಹುದ್ದೆಗಳ ಸಂಖ್ಯೆ 34,639. ಆದರೆ, 14,809 ಹುದ್ದೆಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಕೆಪಿಎಸ್ಸಿ, ಕೆಇಎ ಇತರೆ ಸಂಸ್ಥೆಗಳ ಮೂಲಕ 5129 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ ಹೊಸದಾಗಿ 12,366 ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಬೇಕಾಗಿದೆ’ ಎಂದರು.

‘2012ರ ಏಪ್ರಿಲ್ 1ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಈ ಭಾಗದ ಯುವಕರ ನಿರುದ್ಯೋಗ ನಿವಾರಣೆಗಾಗಿ ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಯುವಂತೆ ನಿಯಮಗಳನ್ನು ರೂಪಿಸಿಲ್ಲ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಭಾಗದ ಕಲ್ಯಾಣಕ್ಕಾಗಿ 371 (ಜೆ) ಕಲಂ ಅನ್ವಯ ಹೆಚ್ಚಿನ ಅನುದಾನ ನೀಡಿದೆ. ನೇಮಕಾತಿ ಪ್ರಕ್ರಿಯೆಯನ್ನೂ ತ್ವರಿತಗೊಳಿಸಿದೆ. ಆದರೆ, 2018ರ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರ ಮತ್ತು ಆನಂತರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಯುವಜನರ ಹಿತಾಸಕ್ತಿಯನ್ನು ಕಡೆಗಣಿಸಿದೆ’ ಎಂದು ಟೀಕಿಸಿದರು.

ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಭಾಗದ ಯುವಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ 371 (ಜೆ) ಅನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಭಾಗದ ಯುವಜನರ ಕೈಗೆ ಉದ್ಯೋಗಗಳನ್ನು ಕೊಡಬೇಕು. ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಯುವ ಮುಖಂಡ ಮಲ್ಲಿನಾಥ ಖಣದಾಳ, ಕಾರ್ಮಿಕ ಮುಖಂಡ ರಾಜಕುಮಾರ ಮಂಗಲಗಿ, ಎಂ.ಡಿ. ಅಮನ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT