ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಹೋರಾಟ: ಎಸ್‌.ಆರ್‌. ಪಾಟೀಲ

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಪತ್ರಿಕಾಗೋಷ್ಠಿ
Last Updated 12 ಆಗಸ್ಟ್ 2021, 7:41 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಬಿಜೆಪಿ ಸರ್ಕಾರವು ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಎಡವಿದೆ. ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿವೆ. ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಕಾಂಗ್ರೆಸ್ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ತಿಳಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿದ್ದರೂ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಪರೋಪಕಾರಿ ಎನಿಸಿಕೊಂಡರು. ಆದರೆ, ದೇಶ ಹಾಗೂ ರಾಜ್ಯದಲ್ಲಿ ಎರಡು ಡೋಸ್ ಲಸಿಕೆ ಪಡೆದವರ ಪ್ರಮಾಣ ಇನ್ನೂ ಶೇ 10ರಷ್ಟೂ ದಾಟಿಲ್ಲ. ಕಲಬುರ್ಗಿ ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಅರ್ಹರಿರುವವರ ಸಂಖ್ಯೆ 19 ಲಕ್ಷ ಇದೆ. ಆದರೆ, ಎರಡು ಡೋಸ್ ಲಸಿಕೆ ಪಡೆದವರ ಸಂಖ್ಯೆ 1.74 ಲಕ್ಷ ಇದೆ. ಉಳಿದವರಿಗೆ ಲಸಿಕೆ ಕೊಡುವುದು ಯಾವಾಗ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಕೋವಿಡ್‌ ನಂತರ ಬರುವ ಕಪ್ಪು ಶಿಲೀಂಧ್ರ ರೋಗದಿಂದ 35 ಜನ ಸಾವಿಗೀಡಾಗಿದ್ದಾರೆ. ಈ ರೋಗಕ್ಕೆ ನೀಡುವ ಚುಚ್ಚುಮದ್ದನ್ನು ಸರ್ಕಾರ ಸಕಾಲಕ್ಕೆ ಪೂರೈಸದೇ ಇದ್ದುದರಿಂದ ಅಮಾಯಕರು ಸಾವಿಗೀಡಾಗಬೇಕಾಯಿತು. ಅಲ್ಲದೇ, ನರೇಂದ್ರ ಮೋದಿ ಸರ್ಕಾರ ಆಮ್ಲಜನಕದ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದೆ. ಇದಕ್ಕಿಂತ ಆಘಾತಕಾರಿ ವಿಚಾರ ಮತ್ತೊಂದಿಲ್ಲ. ಏಕೆಂದರೆ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಆಮ್ಲಜನಕ ಪೂರೈಕೆಯಾಗದ್ದರಿಂದ ನಮ್ಮ ಊರು, ನಮ್ಮ ಓಣಿಗಳಲ್ಲಿನ ಕೋವಿಡ್‌ ಪೀಡಿತ ಜನರೇ ತೀರಿಕೊಂಡಿದ್ದನ್ನು ನೋಡಿದ್ದೇವೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕೇ’ ಎಂದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಮುಂಬೈಗೆ ಓಡಿಸಿಕೊಂಡು ಹೋಗಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿಯವರು ಸರ್ಕಾರ ರಚನೆ ಮಾಡಿದ್ದಾರೆ. ಹಾಗಾಗಿ ಇದೊಂದು ಎಲ್ಲ ರೀತಿ ರಿವಾಜುಗಳನ್ನು ಮೀರಿ ರಚನೆಯಾದ ಸರ್ಕಾರ’ ಎಂದು ಜರಿದರು.

ಕೊಟ್ಟ ಖಾತೆ ಪಡೆಯಬೇಕು: ಬಿಜೆ‍ಪಿಯಲ್ಲಿ ಖಾತೆ ಹಂಚಿಕೆ ಕುರಿತು ವ್ಯಕ್ತವಾದ ಅಸಮಾಧಾನಗಳ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಎಸ್‌.ಆರ್‌. ಪಾಟೀಲ, ‘ಖಾತೆ ಹಂಚಿಕೆಯೂ ಮುಖ್ಯಮಂತ್ರಿ ಅವರ ಪರಮಾಧಿಕಾರಿ. ನಾನೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮೂರು ವರ್ಷ ಸಚಿವನಾಗಿದ್ದೆ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ ಮುಖ್ಯಮಂತ್ರಿ ಅವರು ಐಟಿ, ಬಿಟಿ ಖಾತೆಯನ್ನು ವಹಿಸಿದ್ದರು. ಕೊಟ್ಟ ಖಾತೆಯನ್ನು ನಿಭಾಯಿಸಿದೆ. ಉತ್ತಮ ಖಾತೆ ಎಂದು ಈಗಿನ ಸರ್ಕಾರದಲ್ಲಿರುವ ಸಚಿವರು ಕೇಳುತ್ತಿದ್ದಾರೆ. ಉತ್ತಮ ಖಾತೆ ಎಂದರೆ ಹೆಚ್ಚು ದುಡ್ಡು ಬರುವ ಖಾತೆಯೇ?’ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಪಕ್ಷದ ದಕ್ಷಿಣ ಬ್ಲಾಕ್ ಅಧ್ಯಕ್ಷ ನೀಲಕಂಠರಾವ ಮೂಲಗೆ ಗೋಷ್ಠಿಯಲ್ಲಿದ್ದರು.

‘ಶಾಸಕರಿಂದಲೇ ಸಿಎಂ ಆಯ್ಕೆ’

‘ರಾಜ್ಯದಲ್ಲಿ ಮುಂದಿನ ಬಾರಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕೇಂದ್ರದ ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಪಕ್ಷದ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಎಸ್‌.ಆರ್‌. ಪಾಟೀಲ ತಿಳಿಸಿದರು.

ಕೆ‍ಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿಯಾಗುವ ಸಂಪ್ರದಾಯ ಇದೆಯಲ್ಲ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, ‘ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಪಕ್ಷದ ನಾಯಕರು, ಶಾಸಕರ ತೀರ್ಮಾನವೇ ಅಂತಿಮವಾಗಿ ಮುಖ್ಯಮಂತ್ರಿ ಆಯ್ಕೆಗೆ ಮಾನದಂಡವಾಗಲಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳ ಬಗ್ಗೆ ಹೆಚ್ಚು ಚರ್ಚೆ ಮಾಡದಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದೆ. ಅದನ್ನು ಎಲ್ಲ ಕಾರ್ಯಕರ್ತರೂ ಪಾಲಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT