ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗತ್‌ ಸಿಂಗ್‌ ಪಠ್ಯ ಮರಳಿ ಹಾಕಿಸಿದವರು ದೇಶದ್ರೋಹಿಗಳೇ? –ಸಿದ್ದರಾಮಯ್ಯ

Last Updated 20 ಮೇ 2022, 10:01 IST
ಅಕ್ಷರ ಗಾತ್ರ

ಕಲಬುರಗಿ:‘ಪಠ್ಯದಿಂದ ಭಗತ್‌ಸಿಂಗ್‌ ಅಧ್ಯಾಯ ತೆಗೆದಿದ್ದು ಹಾಗೂ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಭಾಷಣ ಸೇರ್ಪಡೆ ಮಾಡಿದ್ದು ಎರಡೂ ತಪ್ಪು ಎಂದು ನಾನು ಹೇಳಿದೆ. ಇಷ್ಟಕ್ಕೇ ಬಿಜೆಪಿಯವರು ನನ್ನನ್ನು ದೇಶದ್ರೋಹಿ ಎನ್ನುತ್ತಾರೆ. ಭಗತ್‌ ಸಿಂಗ್‌ ಅವರಂಥ ಹುತಾತ್ಮರ ಪಠ್ಯ ಕೈಬಿಟ್ಟವರು ದೇಶದ್ರೋಹಿಗಳೋ, ಅದನ್ನು ಮರಳಿ ಹಾಕಿಸಿದವರು ದೇಶದ್ರೋಹಿಗಳೋ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಯಮ್ಮ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹೆಡಗೇವಾರ್ ಆರ್‌ಎಸ್‌ಎಸ್‌ ಸ್ಥಾಪನೆ ಮಾಡಿದ್ದಕ್ಕೆ ಅವರಿಗೆ ಈಗ ಗೌರವ ಕೊಡುತ್ತಿದ್ದಾರೆ. ಇದೇ ಆರ್‌ಎಸ್‌ಎಸ್‌ನಲ್ಲಿ ನಾತುರಾಮ್‌ ಗೋಡ್ಸೆ ಅವರಂಥ ಅಪರಾಧಿಗಳು ಹುಟ್ಟಿಕೊಂಡರು. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಬಿಟ್ಟು ಹೆಡಗೇವಾರ್‌ ಅವರನ್ನು ಮಕ್ಕಳಿಗೆ ಪರಿಚಯಿಸುವುದು ದೇಶದ್ರೋಹವೇ ಸರಿ’ ಎಂದು ತಿರುಗೇಟು ನೀಡಿದರು.

‘ಹೆಡಗೇವಾರ್ ಯಾವತ್ತಾದರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದೀರಾ? ದೇಶಕ್ಕಾಗಿ ಜೈಲಿಗೆ ಹೋಗಿದ್ದಾರಾ? ದೇಶಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಭಗತ್‌ಸಿಂಗ್‌ ಬೇಕೋ, ಆರ್‌ಎಸ್‌ಎಸ್‌ ಕಟ್ಟಿದವರು ಬೇಕೋ? ಯಾರು ದೇಶದ್ರೋಹಿಗಳುಎಂದು ಜನ ನಿರ್ಧರಿಸುತ್ತಾರೆ. ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಕಲಿಸುವುದನ್ನು ಬಿಟ್ಟು ಆರ್‌ಎಸ್‌ಎಸ್‌ ಹುಳಗಳನ್ನು ಬಿಡಬೇಡಿ’ ಎಂದೂ ಅವರು ದೂರಿದರು.

ಪಂಥಕ್ಕಿಂತ ದೇಶ ಮುಖ್ಯ:‘ಇಷ್ಟು ವರ್ಷ ದೇಶ ಯಡಪಂಥೀಯರ ಕೈಯಲ್ಲಿತ್ತು, ಇನ್ನು ಮುಂದೆ ಬಲಪಂಥೀಯರ ಕೈಯಲ್ಲಿರುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಸರಿಯಾದುದಲ್ಲ. ಯಾವುದೇ ಪಂಥಕ್ಕಿಂತ ದೇಶವೇ ಮುಖ್ಯ’ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿದ್ದರಾಮಯ್ಯ ಪರಿಶಿಷ್ಟರ ವಿರೋಧಿ ಎಂದು ಬಿಜೆಪಿಯವರು ಟ್ವೀಟ್‌ ಮಾಡುತ್ತಿದ್ದಾರೆ. ಇದು ರಾಜಕೀಯ ತಂತ್ರ. ಹಿಂದುಳಿದವರಿಗೆ, ಪರಿಶಿಷ್ಟರಿಗೆ ನಾನು ಮಾಡಿದಂಥ ಒಂದು ಕೆಲಸವನ್ನಾದರೂ ಬಿಜೆಪಿಯವರು ಮಾಡಿದ್ದಾರೆಯೇ? ಪರಿಶಿಷ್ಟ ಗುತ್ತಿಗೆದಾರರಿಗೂ ಮೀಸಲಾತಿ ನೀಡಿದ್ದು ಸಿದ್ದರಾಮಯ್ಯ. ಎಸ್‌ಸಿಪಿ– ಟಿಎಸ್‌ಪಿ ಜಾರಿಗೆ ತಂದಿದ್ದು ಇದೇ ಸಿದ್ದರಾಮಯ್ಯ. ನನ್ನ ಅಧಿಕಾರದ ಐದು ವರ್ಷಗಳಲ್ಲಿ ₹ 88 ಸಾವಿರ ಕೋಟಿಯನ್ನು ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗಿಸಿದ್ದೇನೆ. ಯಡಿಯೂರಪ್ಪ, ಜಗದೀಶ ಶೆಟ್ಟರ, ಬೊಮ್ಮಾಯಿ ಸೇರಿದಂತೆ ಬಿಜೆಪಿ ಎಲ್ಲ ಮುಖ್ಯಮಂತ್ರಿಗಳೂ ಸೇರಿಕೊಂಡು ಕೇವಲ ₹ 22 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ. ನಿಜ ಬಣ್ಣ ಬಯಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT