ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟಿಂಗ್ ನಿಲ್ಲಿಸಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಮುಖ ಆರೋಪಿಗಳ ಬಂಧನಕ್ಕೆ ಆಗ್ರಹ, ಅಕ್ರಮ ದಂಧೆಗೆ ಪೊಲೀಸರ ಸಾಥ್‌: ಆರೋಪ
Last Updated 22 ನವೆಂಬರ್ 2020, 16:31 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಮಿತಿಮೀರಿ ಬೆಳೆದ ಬೆಟ್ಟಿಂಗ್‌ ದಂಧೆ ಮಟ್ಟಹಾಕುವ ಜತೆಗೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡುತ್ತ, ಘೋಷಣೆಯೊಂದಿಗೆ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಅಲ್ಲಿಂದ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಕೆಲಹೊತ್ತು ಧರಣಿ ನಡೆಸಿದರು. ಡಿಸಿಪಿ ಕಿಶೋರಬಾಬು ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಪೊಲೀಸ್‌ ಕಮಿಷನರ್‌ ಕಚೇರಿ ಮುಂದೆ ಸೇರಿದ ಮುಖಂಡರು, ’ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಬೆಟ್ಟಿಂಗ್‌ ದಂಧೆಯನ್ನು ನಿರ್ಮೂಲನೆ ಮಾಡಬೇಕು. ಪ್ರಮುಖ ಆರೋಪಿಗಳನ್ನು ಬಂಧಿಸಬೇಕು‘ ಒತ್ತಾಯಿಸಿದರು.

ಬೆಟ್ಟಿಂಗ್ ಹಾವಳಿ ಹೆಚ್ಚಿದ್ದರಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಅನೇಕರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಿರುವಾಗ ಪೊಲೀಸರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

’ಕಾನ್‌ಸ್ಟೆಬಲ್‌ನಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ಎಲ್ಲರೂ ಮಾಮೂಲು ಫಿಕ್ಸ್‌ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಹೊರ ಜಿಲ್ಲೆ, ಹೊರ ರಾಜ್ಯದ ಪೊಲೀಸರು ಇಲ್ಲಿಗೆ ಬಂದು ದಾಳಿ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸರ ಗಮನಕ್ಕೂ ತರುತ್ತಿಲ್ಲ. ಈಚೆಗೆ ನಗರದಲ್ಲಿ ನಡೆದ ದೊಡ್ಡ ಪ್ರಮಾಣದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿಯಂತೆ ಸೋಲ್ಲಾಪುರ ಪೊಲೀಸರು ನಗರದಲ್ಲಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿ ₹ 38 ಲಕ್ಷ ನಗದು, ಜತೆಗೆ ಶಾಸಕರೊಬ್ಬರ ಪತ್ನಿಯ ಕಾರ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಅವರ ಸಂಬಂಧಿಯೊಬ್ಬರು ತಲೆ ಮರೆಸಿಕೊಂಡಿದ್ದಾರೆ. ಇದನ್ನು ನೋಡಿದಾಗ ಅವ್ಯಾಹತವಾಗಿ ಬೆಟ್ಟಿಂಗ್ ನಡೆಯುತ್ತಿದ್ದು ಕಡಿವಾಣ ಹಾಕಬೇಕು‘ ಎಂದು ಆಗ್ರಹಿಸಿದರು.

’ಕ್ರಿಕೆಟ್‌ ಬೆಟ್ಟಿಂಗ್, ಅಕ್ಕಿ ಸಾಗಣೆ, ಮರಳು ದಂಧೆ, ಸಾರಾಯಿ ಅಂಗಡಿ ಸೇರಿದಂತೆ ಎಲ್ಲ ಕಡೆ ಮಾಮೂಲು ಬರುತ್ತಿದೆ. ಬೆಟ್ಟಿಂಗ್ ಹಾವಳಿ ಜತೆಗೆ ನಗರದಲ್ಲಿ ಹೆಚ್ಚಿದೆ. ಇದರಿಂದಾಗಿ ಯುವ ಸಮೂಹವನ್ನು ಹಾಳು ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಕ್ಲಬ್, ಪಬ್, ಬಾರ್‌ಗಳಿಗೆ ಹೆಚ್ಚಿನ ಪರವಾನಗಿ ನೀಡುವ ಮೂಲಕ ಎಲ್ಲರನ್ನೂ ದಾರಿ ತಪ್ಪಿಸುತ್ತಿದೆ‘ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ ಪಾಟೀಲ ಧಣ್ಣೂರ, ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಾಟೀಲ ಝಳಕಿ, ಮುಖಂಡರಾದ ಮಜರ್ ಅಲಂಖಾನ್, ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ರಾಜೀವ್ ಜಾನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT