ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಿನ್ ಕುಮಾರ್ ಕಟೀಲ್‌ಗೆ ಬುದ್ಧಿ ಭ್ರಮಣೆ: ಡಾ. ಶರಣಪ್ರಕಾಶ ಟೀಕೆ

Last Updated 23 ನವೆಂಬರ್ 2021, 7:22 IST
ಅಕ್ಷರ ಗಾತ್ರ

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೂಟಿ ಗ್ಯಾಂಗ್ ‌ಎಂದು ಕರೆದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಕಾಂಗ್ರೆಸ್ ಸರ್ಕಾರ ಕಟ್ಟಿಸಿದ ಯಾವುದಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ವ್ಯಂಗ್ಯವಾಡಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ‌ಖರ್ಗೆ ಅವರು ಇಲ್ಲಿಯವರೆಗೆ 12 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯದ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇಲ್ಲಿಯವರೆಗೆ ಯಾರೊಬ್ಬರೂ ಸದನದಲ್ಲಿಯಾಗಲೀ ಹೊರಗಡೆಯಾಗಲೀ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ‌ ಮಾಡಿಲ್ಲ. ಆದರೂ ಯಾವ ಆಧಾರದಲ್ಲಿ ಕಟೀಲ್ ಅವರು ಖರ್ಗೆ ಕುಟುಂಬದ ವಿರುದ್ಧ ಆರೋಪ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

ಬಿಟ್ ಕಾಯಿನ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹಲವು ಸಚಿವರೇ ಸಿಲುಕಿಕೊಂಡಿದ್ದಾರೆ. ಅದರಿಂದ ‌ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರ ವಿರುದ್ಧ ಬುದ್ದಿ ಭ್ರಮಣೆಯಾದವರಂತೆ ಆರೋಪ ಮಾಡುತ್ತಿದ್ದಾರೆ ‌ಎಂದರು.

ಖರ್ಗೆ ಅವರು ಸಾರ್ವಜನಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಬದುಕುತ್ತಿದ್ದಾರೆ. ಇಷ್ಟಾಗಿಯೂ ಕೆಲವರು ಖರ್ಗೆ ಅವರ ಆಸ್ತಿ ವಿವರ ಬಹಿರಂಗಪಡಿಸಲು ಕೇಳಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಅಲ್ಲಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸರ್ಕಾರ ವಜಾ ಮಾಡಲಿ: ರಾಜ್ಯದಲ್ಲಿ ಕಾಮಗಾರಿಗಳ ಟೆಂಡರ್ ಪಡೆಯಬೇಕು ಎಂದರೆ ಶೇ 40ರಷ್ಟು ಕಮಿಷನ್ ನೀಡಬೇಕಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ. ‌ಈ ಬಗ್ಗೆ ತಕ್ಷಣ ‌ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾ ಮಾಡಬೇಕು. ‌ಸಂವಿಧಾನದ ಅಶಯಗಳಿಗೆ ವಿರುದ್ಧವಾಗಿ ಈ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು.

ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪೂರ, ಕಲಬುರಗಿ ಉತ್ತರ ಶಾಸಕಿ ಖನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಪರಿಷತ್ ‌ಚುನಾವಣೆಗೆ ಸ್ಪರ್ಧಿಸಿರುವ ಶಿವಾನಂದ ಪಾಟೀಲ ಮರತೂರ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ, ಡಾ.ಕಿರಣ ದೇಶಮುಖ, ಶರಣಕುಮಾರ ಮೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT