ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ನೇಮಕಾತಿ ಹಗರಣ: ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿ –ಪ್ರಿಯಾಂಕ್

Last Updated 13 ಮೇ 2022, 7:50 IST
ಅಕ್ಷರ ಗಾತ್ರ

ಕಲಬುರಗಿ: 'ಪಿಎಸ್ಐ ನೇಮಕಾತಿ ಹಗರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಬೇಕು. ಕೇವಲ ಕಲಬುರಗಿಗೆ ಮಾತ್ರ ಸೀಮಿತಗೊಳಿಸಿ ಮುಚ್ಚಿ ಹಾಕಬಾರದು' ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

'ಕಲಬುರಗಿ ಹೊರತುಪಡಿಸಿಯೂ ರಾಜ್ಯದ ಬಹುತೇಕ ಕಡೆ ಹಗರಣ ನಡೆದಿದೆ. ಬೇರೆ ಕಡೆ ಹಗರಣಗಳ ಕುರಿತು ತನಿಖೆ ನಡೆಸುವುದು ಯಾವಾಗ? ತನಿಖೆ ನಡೆದು ಅಕ್ರಮದಲ್ಲಿ ಭಾಗಿಯಾದವರಹೆಸರು ಬಹಿರಂಗಗೊಂಡರೆ ಸರ್ಕಾರ ಬಿದ್ದುಹೋಗುತ್ತಿದೆ ಎನ್ನುವ ಭಯದಿಂದ ತನಿಖೆಯನ್ನು ಕಲಬುರಗಿಗೆ ಸೀಮಿತಗೊಳಿಸುತ್ತಿರಬಹುದು' ಎಂದು ಅವರು ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.

'ಸಿಐಡಿ ನನಗೆ ನೀಡಿದ ನೋಟಿಸಿಗೆ ಈಗಾಗಲೇ ಉತ್ತರ ನೀಡಿದ್ದೇನೆ. ನಾನು ಹಿಟ್ ಅಂಡ್ ರನ್ ಮಾಡುತ್ತಿಲ್ಲ. ನನಗೆ ಮೂರು ನೋಟಿಸು ನೀಡುವ ಸಿಐಡಿ, ಸಚಿವರು ಹಾಗೂ ಇತರ ಅಧಿಕಾರಿಗಳಿಗೆ ಏಕೆ ನೋಟಿಸ್ ನೀಡುತ್ತಿಲ್ಲ' ಎಂದು ಪ್ರಶ್ನಿಸಿದರು.

'ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತಾಂತರ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಆರ್‌ಎಸ್‌ಎಸ್‌ ಬೇಡಿಕೆಗಳನ್ನು ಜಾರಿಗೆ ತರುವುದೇ ಸರ್ಕಾರದ ಉದ್ದೇಶವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಸರ್ಕಾರ, ಇಂತಹ ವಿಚಾರಗಳನ್ನು ಹರಿಬಿಡುತ್ತದೆ' ಎಂದರು.

'ಅಜಾನ್ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಮಸೀದಿ, ಮಂದಿರ ಹಾಗೂ ಚರ್ಚುಗಳಿಗೆ ಅನ್ವಯವಾಗುತ್ತದೆ. ಆದರೆ ಸರ್ಕಾರ ಕೋರ್ಟ್ ಆದೇಶವನ್ನು ಪಾಲನೆ ಮಾಡಲು ಏಕೆ ಕಷ್ಟಪಡುತ್ತಿದೆ?' ಎಂದು ಪ್ರಶ್ನಿಸಿದರು.

'ಸಚಿವ ಅಶ್ವತ್ಥ ನಾರಾಯಣ ಹಾಗೂ ಎಂ.ಬಿ.ಪಾಟೀಲ ಅವರು ಭೇಟಿ ಮಾಡಿದ ಕಾರಣವನ್ನು ಅವರನ್ನೇ ಕೇಳಬೇಕು. ನನಗೆ ಇದರ ಹೆಚ್ಚಿನ ಮಾಹಿತಿ ಇಲ್ಲ. ಈ‌ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ' ಎಂದು ಕೆಪಿಸಿಸಿ ವಕ್ತಾರರೂ ಆದ ಪ್ರಿಯಾಂಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ನಟಿ, ಮಾಜಿ ಸಂಸದೆ ರಮ್ಯಾ ಅವರು ಟ್ವಿಟ್ ಮಾಡಿದ್ದಕ್ಕೆ ಬಿಜೆಪಿಯವರು ಇನ್ನಿಲ್ಲದಂತೆ ರೆಕ್ಕೆಪುಕ್ಕ ಹಚ್ಚುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಅವರವರ ಅಭಿಪ್ರಾಯ ಹೇಳುತ್ತಾರೆ. ಯಾವುದೇ ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ವಿಚಾರಗಳು ಬಂದು ಹೋಗುತ್ತವೆ. ಬಿಜೆಪಿಯವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆಯಲಿ; ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ' ಎಂದು ಪ್ರತಿಕ್ರಿಯಿಸಿದರು.

'ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ₹ 2,500 ಕೋಟಿ ಕೊಡಿ ಎಂದು ಯತ್ನಾಳ್ ಅವರಿಗೆ ಯಾರೋ ಕೇಳಿದ್ದನ್ನು ಅವರೇ ಬಹಿರಂಗಪಡಿಸಿದ್ದಾರೆ. ಅವರ ಮೇಲೆಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಯಾವ ಕ್ರಮ ಕೈಗೊಂಡಿದ್ದಾರೆ? ಈಂಥವರಿಗೆ ರಮ್ಯಾ ಅವರ ಟ್ವೀಟ್ ಬಗ್ಗೆ ಮಾತನಾಡಲು ಮುಖವಿದೆಯೇ?' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT