ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಇ.ಡಿಯಿಂದ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಬಂಧನಕ್ಕೆ ಖಂಡನೆ

ಕಲಬುರ್ಗಿಯಲ್ಲಿ ರಸ್ತೆ ತಡೆ, ಧರಣಿ

Published:
Updated:
Prajavani

ಕಲಬುರ್ಗಿ: ರಾಜಕೀಯ ದ್ವೇಷ ಸಾಧನೆಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್‌ ನಾಯಕ, ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಮೂಲಕ ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪಕ್ಷದ ಕಾರ್ಯಕರ್ತರು ಇಲ್ಲಿನ ಸ್ಟೇಶನ್‌ ರಸ್ತೆಯ ಡಾ.ಬಾಬು ಜಗಜೀವನರಾಂ ಪ್ರತಿಮೆ ಎದುರಿನ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು. ನಂತರ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.‌

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ ಮುಕ್ತ ಮಾಡುವ ಬಗ್ಗೆ ಮಾತನಾಡುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಹಣಿಯುತ್ತಿದೆ. ಭ್ರಷ್ಟಾಚಾರ ಮಾಡಿಯೂ ಬಿಜೆಪಿ ಸೇರ್ಪಡೆಯಾಗಿರುವವರ ವಿರುದ್ಧ ಯಾವ ತನಿಖೆಯನ್ನೂ ಮಾಡುತ್ತಿಲ್ಲ. ಇದು ಬಿಜೆಪಿಯ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಡಿ.ಕೆ.ಶಿವಕುಮಾರ್‌ ಅವರಿಗೆ ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಂಗದಲ್ಲಿ ನಂಬಿಕೆಯಿದ್ದು, ಇ.ಡಿ. ಸಮನ್ಸ್‌ಗೆ ಬೆಲೆಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಅವರ ತಂದೆಯವರ ವಾರ್ಷಿಕ ಕ್ರಿಯಾವಿಧಿಗಳನ್ನು ನೆರವೇರಿಸಲು ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ. ಒಟ್ಟಾರೆಯಾಗಿ ವಿರೋಧಿ ನಾಯಕರನ್ನು ಹಣಿಯುವ ತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ದೇಶದ ಅಭಿವೃದ್ದಿ ಕಡೆಗೆ ಗಮನ ಕೊಡುತ್ತಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿದ್ದು, ಮೇಲಾಗಿ ಕರ್ನಾಟಕ ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಪ್ರವಾಹ ಬಂದು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಪರಿಶೀಲಿಸಿ ಪರಿಹಾರೋಪಾಯ ಕಂಡುಕೊಳ್ಳದೇ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಪಕ್ಷದ ಅನೇಕ ವರಿಷ್ಠ ನಾಯಕರು ಉನ್ನತ ಸ್ಥಾನಗಳನ್ನು ಅಲಂಕರಿಸಿ ಕೀಳು ಮಟ್ಟದ ರಾಜಕಾರಣ ಮಾಡದೇ ದೇಶದ ಒಳಿತಿಗಾಗಿ ಕೆಲಸ ಮಾಡಿದ್ದಾರೆ. ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಅಭಿವೃದ್ದಿ ಕಡೆಗೆ ಗಮನಕೊಡದೇ ಕೀಳು ರಾಜಕಾರಣ ಮಾಡುತ್ತಾ ಸಿ.ಬಿ.ಐ., ಐ.ಟಿ., ಇ.ಡಿ. ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಾ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಎಂದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್‌ ಮುಖಂಡ ಸುಭಾಷ್‌ ರಾಠೋಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Post Comments (+)