ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಸಾವಿರ ಕೋಟಿ ನೆರೆ ಪರಿಹಾರ ನೀಡಲು ಒತ್ತಾಯ

ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ ಪುತ್ಥಳಿ ಎದುರು ಧರಣಿ
Last Updated 13 ಸೆಪ್ಟೆಂಬರ್ 2019, 10:34 IST
ಅಕ್ಷರ ಗಾತ್ರ

ಕಲಬುರ್ಗಿ: ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದಾಗಿ ರಾಜ್ಯದ 22 ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡಿದ್ದು, 88 ಜನ ಸಾವಿಗೀಡಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ₹ 5 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿ ಎದುರು ಗುರುವಾರ ಧರಣಿ ನಡೆಸಿದರು.

ಸ್ವತಃ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಆದರೂ ಇಲ್ಲಿಯವರೆಗೆ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಿ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

2.37 ಲಕ್ಷ ಮನೆಗಳು ಹಾನಿಗೀಡಾಗಿವೆ. ಅವುಗಳ ಪೈಕಿ 1.70 ಲಕ್ಷ ಮನೆಗಳು ಸಂಪೂರ್ಣ ಕುಸಿದಿವೆ. 7.28 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ್ದ ಬೆಳೆ ನಾಶವಾಗಿದೆ. ಭೂಕುಸಿತದಿಂದಾಗಿ 5 ಸಾವಿರ ಹೆಕ್ಟೇರ್‌ ಭೂಮಿ ಸಂಪೂರ್ಣ ಹಾಳಾಗಿದೆ. 35 ಸಾವಿರ ಕಿ.ಮೀ. ರಸ್ತೆಗೆ ಹಾನಿಯಾಗಿದೆ. 2828 ಸೇತುವೆಗಳು ಕುಸಿದಿವೆ, ಭಾಗಶಃ ಹಾನಿಯಾಗಿವೆ. ಸಾವಿರಾರು ಕಾಫಿ ಎಸ್ಟೇಟ್‌ಗಳು ಕುಸಿದಿವೆ ಎಂದರು.

ರಾಜ್ಯವು ಹಿಂದೆಂದೂ ಕಂಡು ಕೇಳರಿಯದಷ್ಟು ಪ್ರಕೃತಿ ವಿಕೋಪದಿಂದಾಗಿ ಹಾನಿ ಸಂಭವಿಸಿದೆ. ಆದರೆ, ಕೇಂದ್ರ ಸರ್ಕಾರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈಚೆಗೆ ಚಂದ್ರಯಾನ–2 ವಿಕ್ರಂ ಚಂದ್ರನ ಕಕ್ಷೆಗೆ ಇಳಿಯುವುದನ್ನು ವೀಕ್ಷಿಸಲು ಬಂದಿದ್ದರು. ಆದರೆ ನೆರೆ ಪರಿಹಾರದ ಬಗ್ಗೆ ಒಂದು ಮಾತೂ ಆಡಿಲ್ಲದಿರುವುದು ರಾಜ್ಯದ ಜನತೆಯ ಬಗ್ಗೆ ಅವರ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ನೆರೆ ಹಾವಳಿಯಿಂದಾಗಿ ಒಟ್ಟಾರೆ ₹ 38 ಸಾವಿರ ಕೋಟಿ ಹಾನಿಯಾದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು ₹ 50 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಹೀಗಾಗಿ, ಮೋದಿ ಅವರು ಪ್ರವಾಹವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಪರಿಗಣಿಸಿ ಹೆಚ್ಚು ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಒತ್ತಾಯಿಸಿದರು.

ಬೆಳಿಗ್ಗೆ ಶುರುವಾದ ಪ್ರತಿಭಟನೆ ಮಧ್ಯಾಹ್ನದವರೆಗೂ ಮುಂದುವರಿಯಿತು.

ಪಕ್ಷದ ಮುಖಂಡರಾದ ಬಸಯ್ಯ ಗುತ್ತೇದಾರ, ಭೀಮರಾವ್‌ ಪಾಟೀಲ ತೇಗಲತಿಪ್ಪಿ, ಶಿವಕುಮಾರ್‌ ಬಾಳಿ, ಲಿಂಗರಾಜ ತಾರಫೈಲ್, ಶಿವಕುಮಾರ್‌, ಅಹ್ಮದ್‌ ಅಸ್ಗರ್‌ ಚುಲ್‌ಬುಲ್‌, ಲಾಲ್‌ ಅಹ್ಮದ್‌ ಬಾಂಬೆಶೇಖ್, ಶರಣಪ್ಪ ಚಿಂಚೋಳಿ, ಯಲ್ಲಪ್ಪ ನಾಯ್ಕೋಡಿ, ಸಂತೋಷ ಪಾಟೀಲ, ಸುಭಾಷ್ ಪಾಂಚಾಳ, ಚಂದ್ರಿಕಾ ಪರಮೇಶ್ವರ, ಲತಾ ರಾಠೋಡ, ಉಮಾ ಕಾಳೆ, ಪ್ರಭಾವತಿ ಪಾಟೀಲ, ಡಾ.ರಾಜಶೇಖರ ಪಾಟೀಲ ಹೆಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT