ಗುರುವಾರ , ಜೂಲೈ 2, 2020
28 °C
ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ

ತೈಲ ಬೆಲೆ ಹೆಚ್ಚಳ ಖಂಡಿಸಿ ಸೈಕಲ್, ಟಾಂಗಾ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ರ‍್ಯಾಲಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಡಾ.ಅಜಯಸಿಂಗ್, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮ ಪ್ರಭು ಪಾಟೀಲ, ಜಗದೇವ ಗುತ್ತೇದಾರ, ನೀಲಕಂಠ ಮೂಲಗೆ ಇದ್ದರು

ಕಲಬುರ್ಗಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿತ್ಯವೂ ಹೆಚ್ಚಳ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಸೈಕಲ್ ಸವಾರಿ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಶಾಸಕಿ ಖನೀಜ್ ಫಾತಿಮಾ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ಪಕ್ಷದ ಕಚೇರಿಯಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಕ್ತಾಯವಾಯಿತು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ತೈಲ ಬೆಲೆ ಹೆಚ್ಚಳವನ್ನು ಹಿಂದಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಜಯ್ ಸಿಂಗ್ ಹಾಗೂ ಡಾ.ಶರಣಪ್ರಕಾಶ ಪಾಟೀಲ, ಪೆಟ್ರೋಲ್ ಮೇಲೆ ಶೇ 200ರಷ್ಟು ಮತ್ತು ಡಿಸೆಲ್ ಮೇಲೆ ಶೇ 800ರಷ್ಟು ಅಬಕಾರಿ ಸುಂಕವನ್ನು ಕಳೆದೊಂದು ತಿಂಗಳಲ್ಲಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ ಎಂದು ಟೀಕಿಸಿದರು.

ಲಾಕ್‍ಡೌನ್ ನೆರವಿಗೆ ಕೇಂದ್ರ ಸರ್ಕಾರ ಆತ್ಮ ನಿರ್ಭರ ಯೋಜನೆಯಡಿ ₹ 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿದೆ. ಆದರೆ, ಅದಕ್ಕೆ ಬೇಕಾಗಿರುವ ₹ 18 ಲಕ್ಷ ಕೋಟಿಯನ್ನು ಕೇವಲ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಈಗಾಗಲೇ ಜನರಿಂದ ವಸೂಲಿ ಮಾಡಿಯಾಗಿದೆ. ಆದರೆ, ಅದರ ಲಾಭ ಮಾತ್ರ ಯಾರೊಬ್ಬರಿಗೂ ಸಿಗುತ್ತಿಲ್ಲ. ಬದಲಿಗೆ ಜನರನ್ನು ಮೋಸದ ಮಾಯಾ ಜಾಲದಲ್ಲಿ ಸಿಲುಕಿಸಲಾಗಿದೆ ಎಂದರು.

2014ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ 108 ಡಾಲರ್ ಇತ್ತು. ಈಗ ಬ್ಯಾರೆಲ್‍ಗೆ 43.15 ಡಾಲರ್‌ಗೆ ಇಳಿದಿದೆ. ಹೀಗಿರುವಾಗ ದೇಶದಲ್ಲಿ ಪೆಟ್ರೋಲ್, ಡಿಸೆಲ್ ಪ್ರತಿ ಲೀಟರ್‌ಗೆ ₹ 25ರಿಂದ ₹ 30 ಕ್ಕೆ ಮಾರಾಟ ಮಾಡಬೇಕಾಗಿತ್ತು. ಆದರೆ, ಅದರ ಲಾಭವನ್ನು ಜನರಿಗೆ ತಲುಪಿಸುವ ಬದಲು ಹಗಲು ದರೋಡೆಗೆ ಇಳಿದಿದೆ ಎಂದು ಹರಿಹಾಯ್ದರು.

ಮಾಜಿ ಸಚಿವ ಕೆ.ಬಿ.ಶಾಣಪ್ಪ, ಶಾಸಕಿ ಖನೀಜ್ ಫಾತಿಮಾ, ಮಾಜಿ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋಧಿ, ದಕ್ಷಿಣ ಬ್ಲಾಕ್ ಅಧ್ಯಕ್ಷ ನೀಲಕಂಠ ಮೂಲಗೆ, ಉತ್ತರ ಅಧ್ಯಕ್ಷ ಸೈಯದ್ ಅಹ್ಮದ್, ಮಹಿಳಾ ಅಧ್ಯಕ್ಷೆ ಲತಾ ರವಿ ರಾಠೋಡ, ಮಾಜಿ ಮೇಯರ್ ಶರಣಕುಮಾರ ಮೋದಿ, ಪ್ರಮುಖರಾದ ನಾರಾಯಣರಾವ ಕಾಳೆ, ಸುಭಾಷ ರಾಠೋಡ, ಬಸವರಾಜ ಬಿರಾದಾರ ಸೊನ್ನ, ಸಂಜೀವ್ ಐರಡ್ಡಿ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು