ಶಹಾಬಾದ್: ಕಲಬುರಗಿ ಜಿಲ್ಲೆಯ ರೈಲ್ವೆ ಇಲಾಖೆ ವಿವಿಧ ಬೇಡಿಕೆ ಈಡೇರಿಸುವಂತೆ ಸಂಸದ ಡಾ.ಉಮೇಶ ಜಾಧವ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದು ಕೇವಲ ಚುನಾವಣೆ ಗಿಮಿಕ್ ಆಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ ಆರೋಪಿಸಿದರು.
ಸುದ್ದಿಗರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಂಸದರು ಕೆಲಸ ಮಾಡಲಿಲ್ಲ. ಐದು ವರ್ಷಗಳ ಅವಧಿಯಲ್ಲಿ ಕೇವಲ ಸುಳ್ಳು ಹೇಳುವುದನ್ನು ಬಿಟ್ಟರೇ ಏನು ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಶಹಾಬಾದ್ ಜನರ ಸಮಸ್ಯೆಗಳನ್ನು ಆಲಿಸದ ಹಾಗೂ ಸಮಸ್ಯೆ ಪರಿಹರಿಸಲಾರದ ಸಂಸದರು, ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಸಮಸ್ಯೆಗಳು ನೆನಪು ಬಂದ ಹಾಗೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಲಬುರಗಿ ರೈಲ್ವೆ ಉಪ ವಿಭಾಗ ಮಾಡಿ, ಸ್ಥಳ ಹಾಗೂ ಯೋಜನೆಗೆ ಬೇಕಾದ ಮೊತ್ತ ತೆಗೆದಿರಸಲಾಗಿತ್ತು. ಅವರಿಗೆ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಆಗಗಲಿಲ್ಲ. ಕೋವಿಡ್-19 ಸಂದರ್ಭದಲ್ಲಿ ತಡೆಹಿಡಿದ ರೈಲುಗಳನ್ನು ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲು ಆಗಲಿಲ್ಲ. ಈಗ ಕೋವಿಡ್-19 ಮುಗಿದು ಎರಡು ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಈ ಮೊದಲು ನಿಲ್ಲುತ್ತಿದ್ದ ರೈಲುಗಳು ಈಗಲೂ ನಿಲ್ಲತ್ತಿಲ್ಲ. ಒಬ್ಬ ಸಂಸದ ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಸರ್ಕಾವಿದ್ದರೂ ರೈಲುಗಳು ನಿಲುಗಡೆಯಾಗದಿರುವುದು ಹಾಸ್ಯಸ್ಪದಾಗಿದೆ. ಈಗ ಕೇಂದ್ರ ರೈಲ್ವೆ ಮಂತ್ರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವುದು ಕೇವಲ ಚುನಾವಣೆ ತಂತ್ರವಾಗಿದೆ. ಸಂಸದರಾಗಿ ಆಯ್ಕೆ ಮಾಡಿರುವುದಕ್ಕೆ ಜನರು ಸ್ವಯಂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಯುವ ಅಧ್ಯಕ್ಷ ಕಿರಣ ಚವ್ಹಾಣ, ಫಜಲ್ ಪಟೇಲ, ಅನ್ವರ್ ಪಾಶಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.