ಜಾಧವ ನಿವಾಸದ ಎದುರು ಪ್ರತಿಭಟನೆ

7
ಕುದುರೆಯೊಂದಿಗೆ ಬಂದ ಯುವ ಕಾಂಗ್ರೆಸ್ ಕಾರ್ಯಕರ್ತರು

ಜಾಧವ ನಿವಾಸದ ಎದುರು ಪ್ರತಿಭಟನೆ

Published:
Updated:
Prajavani

ಕಲಬುರ್ಗಿ: ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ. ಉಮೇಶ ಜಾಧವ ಅವರು ಬಿಜೆಪಿಗೆ ಸೇರ್ಪಡೆಯಾಗಲು ₹50 ಕೋಟಿ ಹಣ ಪಡೆದು ಚಿಂಚೋಳಿಯ ಮತದಾರರಿಗೆ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಾಧವ ಅವರ ಕಲಬುರ್ಗಿ ನಿವಾಸದ ಎದುರು ಬುಧವಾರ ಕುದುರೆಯೊಂದಿಗೆ ಪ್ರತಿಭಟನೆ ಮಾಡಿದರು.

ಚಿಂಚೋಳಿಯಿಂದ ಕ್ರೂಸರ್ ವಾಹನದಲ್ಲಿ ಬಂದ ಮುಖಂಡರು ಹಾಗೂ ಕಾರ್ಯಕರ್ತರು ಕುದುರೆ ವ್ಯಾಪಾರ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಜಾಧವ ಅವರ ಸಹೋದರ ಸಹೋದರ ರಾಮಚಂದ್ರ ಜಾಧವ ಅವರೊಂದಿಗೆ ಕಾರ್ಯಕರ್ತರು ವಾಗ್ವದ ನಡೆಸಿದರು. ‘ಉಮೇಶ ಜಾಧವ ಎಲ್ಲಿದ್ದಾರೆ’ ಎಂದು ಜೋರಾಗಿ ಪ್ರಶ್ನಿಸಿದರು. ‘ಅವರು ಮುಂಬೈನಲ್ಲಿದ್ದಾರೆ’ ಎಂದು ರಾಮಚಂದ್ರ ಪ್ರತಿಕ್ರಿಯಿಸಿದರು.

‘ಉಮೇಶ ಜಾಧವ ಕಾಂಗ್ರೆಸ್ ಪಕ್ಷ ತೊರೆಯುತ್ತಾರೆ ಎಂದು ಎಲ್ಲಿ, ಯಾವಾಗ ಹೇಳಿದ್ದಾರೆ ಹೇಳಿ, ನೀವೆ ಮಾಧ್ಯಮಗಳಿಗೆ ಹೇಳಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಸ್ಥಳದಲ್ಲೆ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಚಂದ್ರ, ‘ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಮಸಿ ಬಳಿಯಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಶಾಸಕ ಜಾಧವ ಕಾಂಗ್ರೆಸ್ ಪಕ್ಷ ಬಿಡುತ್ತಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಮ್ಮ ಮನೆ ಎದುರು ಪ್ರತಿಭಟನೆ ಮಾಡಿದವರು ಚಿಂಚೋಳಿ ಕಾರ್ಯಕರ್ತರಲ್ಲ. 7–8 ಜನರು ಚಿಂಚೋಳಿಯವರಿದ್ದು, ಉಳಿದವರು ಇಲ್ಲಿಯವರೇ ಇದ್ದಾರೆ’ ಎಂದರು.

‘ಉಮೇಶ ಅವರು ₹50 ಕೋಟಿ ಹಣ ಪಡೆದಿದ್ದಾರೆ ಎಂಬುದು ಸುಳ್ಳು. ಅವರು ಕಲಬುರ್ಗಿಗೆ ಬಂದ ನಂತರ ತಮ್ಮ ನಿರ್ಧಾರ ತಿಳಿಸಲಿದ್ದಾರೆ. ಅಲ್ಲದೆ ಕಾರ್ಯಕರ್ತರು, ಪಕ್ಷದ ಮುಖಂಡರ ಜತೆ ಚರ್ಚಿಸಲಿದ್ದಾರೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಆಗಲಿ, ಸಚಿವ ಪ್ರಿಯಾಂಕ್ ಖರ್ಗೆ ಆಗಲಿ ಅನ್ಯಾಯ ಮಾಡಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ’ ಎಂದು ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ, ಡಾ. ಕಿರಣ ದೇಶಮುಖ, ಮಜರ್ ಆಲಂಖಾನ್, ಬಸಯ್ಯ ಗುತ್ತೇದಾರ, ಭೀಮರಾವ, ಅನಿಲ್ ಜಮಾದಾರ, ಶಿವಕುಮಾರ ಕೊಲ್ಲೂರ, ಗೌತಮ ಪಾಟೀಲ, ಪ್ರವೀಣ ಪಾಟೀಲ ಹರವಾಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !