ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನದಲ್ಲೇ ಬಹುತ್ವದ ಪರಿಕಲ್ಪನೆ’

ಬಹುತ್ವ ಭಾರತ ಕುರಿತ ಉಪನ್ಯಾಸದಲ್ಲಿ ಪ್ರೊ. ಅಪ್ಪಗೆರೆ ಸೋಮಶೇಖರ್
Last Updated 26 ನವೆಂಬರ್ 2022, 14:05 IST
ಅಕ್ಷರ ಗಾತ್ರ

ಕಲಬುರಗಿ: ‘ಬುದ್ಧನ ಕಾಲದಿಂದ ಬಹುತ್ವ ಭಾರತದ ಬಗ್ಗೆ ಉಲ್ಲೇಖಗಳಿವೆ. 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ವಚನ ಚಳವಳಿ ಸಂದರ್ಭದಲ್ಲಿ ಬಸವಣ್ಣನವರು ಇವನಾರವ ಎಂದೆನಿಸದಿರಯ್ಯ ಎನ್ನುವ ಮೂಲಕ ಎಲ್ಲರೂ ನಮ್ಮವರೇ ಎಂಬ ಬಹುತ್ವದ ತತ್ವವನ್ನೇ ಸಾರಿದ್ದಾರೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟರು.

ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ, ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಚೇತನ್ ಅಹಿಂಸಾ ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದದ್ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುತ್ವ ಭಾರತದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಸಂವಿಧಾನದ ಪೀಠಿಕೆಯಲ್ಲಿಯೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರಜೆಗಳಾದ ನಾವು ಎನ್ನುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಆಶಯವನ್ನು ಉಲ್ಲೇಖಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎನ್ನುವ ಮೂಲಕ ಎಲ್ಲರೂ ಈ ನೆಲದ ಮಕ್ಕಳು ಎಂಬ ಸಂದೇಶ ಸಾರಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಮೂಲಕ ಭಾರತವು ಎಲ್ಲರಿಗೂ ಸೇರಿದ್ದು ಎಂಬ ವಿಶಾಲ ಅರ್ಥವನ್ನು ಹೊಮ್ಮಿಸಿದ್ದಾರೆ’ ಎಂದರು.

‘ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ದೇಶದ ಜಮೀನ್ದಾರರು, ಕೆಲವೇ ಪ್ರಭಾವಿಗಳಿಗೆ ಮಾತ್ರ ಮತದಾನದ ಹಕ್ಕು ಇತ್ತು. ಇದನ್ನು ಗಮನಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಎಲ್ಲ ಜನತೆಗೂ ಮತದಾನದ ಹಕ್ಕನ್ನು ನೀಡಿದರು. ಎಲ್ಲರ ಮತದ ಮೌಲ್ಯವೂ ಒಂದೇ ಇರುವಂತೆ ನೋಡಿಕೊಂಡರು. ಆ ಮೂಲಕ ಅತಿ ದೊಡ್ಡ ರಾಜಕೀಯ ಸಮಾನತೆ, ಬಲವನ್ನು ದೇಶದ ಎಲ್ಲ ಜನ ಸಮುದಾಯಗಳಿಗೆ ಒದಗಿಸಿದರು’ ಎಂದು ಅವರು ತಿಳಿಸಿದರು.

‘ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಿರಲಿಲ್ಲ ಎಂಬ ಬಗ್ಗೆ ಅಂಬೇಡ್ಕರ್ ಅವರಿಗೆ ಬೇಸರವಿತ್ತು. ಹೀಗಾಗಿ, ಇಂಗ್ಲೆಂಡಿನಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ಪ್ರಧಾನಿಯ ಎದುರು ಭಾರತ ಬಿಟ್ಟು ತೊಲಗಿ ಎಂದು ಗುಡುಗಿದ್ದರು. ಗಾಂಧೀಜಿ ಅವರು ಕ್ವಿಟ್ ಇಂಡಿಯಾ ಚಳವಳಿ ನಡೆಸುವುದಕ್ಕೂ ಮೊದಲೇ ಅಂಬೇಡ್ಕರ್ ಅವರು ಬ್ರಿಟಿಷರ ನೆಲದಲ್ಲೇ ಅವರಿಗೆ ಈ ಮಾತನ್ನು ಹೇಳಿದ್ದರು’ ಎಂದು ಪ್ರತಿಪಾದಿಸಿದರು.

ಸ್ಲಂ ಜನಾಂದೋಲನ ಸಂಘಟನೆಯ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ‘ಸಂವಿಧಾನವು ಪ್ರಜಾಪ್ರಭುತ್ವದ ತಾಯಿಯಂತಿದ್ದು, ದೇಶದ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಇದನ್ನು ಸಹಿಸದ ಬಿಜೆಪಿಯ ಸಂಸದರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡಿರುವುದು ಖಂಡನೀಯ. ಭಾರತದ ಭ್ರಾತೃತ್ವವನ್ನು ನಾಶ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಸಂವಿಧಾನವನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದರು.

ನಗರದ ಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್‌ನ ಸಂಘಾನಂದ ಭಂತೇಜಿ, ಸೇವಾ ಸಂಗಮ ನಿರ್ದೇಶಕ ಫಾ. ವಿಕ್ಟರ್ ಅನೀಲವಾಸ್, ಚಿಗರಳ್ಳಿಯ ಮರುಳ ಶಂಕರ ದೇವರ ಗುರುಪೀಠದ ಸಿದ್ದಬಸವ ಕಬೀರ ಸ್ವಾಮೀಜಿ, ಬಹುಮನಿ ಪ್ರತಿಷ್ಠಾನದ ಅಧ್ಯಕ್ಷ ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕಿ ಮಸೂದ್, ದೀಪ್‌ ಸಿಂಗ್‌ಜಿ, ಎಸಿಪಿ ಎಸ್‌.ಬಿ. ಗಿರೀಶ ಇದ್ದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾಂದೋಲ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಅಜೀಮ್‌ ಪ್ರೇಮ್‌ಜಿ ಪ್ರತಿಷ್ಠಾನದ ಸಂಶೋಧನಾ ಸಂಯೋಜಕ ಗುರು ಮೊಗೇರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ದಶರಥ ಕಲಗುರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT