ಭಾನುವಾರ, ಮಾರ್ಚ್ 29, 2020
19 °C
ಚಿತ್ತಾಪುರ: ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ

ಸಂವಿಧಾನ ಕಿತ್ತೊಗೆಯಲು ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಸಂವಿಧಾನದ ಆಶಯದಂತೆ ಈ ಹಿಂದೆ ರೂಪಿತವಾಗಿದ್ದ ಪೌರತ್ವ ಕಾಯ್ದೆಯನ್ನು ಈಗ ಮಹಾರಾಷ್ಟ್ರದ ನಾಗಪುರದಲ್ಲಿ ಧರ್ಮಾಧಾರಿತವಾಗಿ ತಿದ್ದುಪಡಿ ಮಾಡಿ ದೆಹಲಿಗೆ ರವಾನೆಯಾಗಿದೆ. ಕೇಂದ್ರ ಸರ್ಕಾರದ ಮೂಲಕ ದೇಶದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರು ಆರೋಪಿಸಿದರು.

ಸ್ಥಳೀಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಮುಖಂಡರಿಗೆ ಸಿಎಎ,ಎನ್‌ಆರ್‌ಸಿ, ಎನ್‌ಪಿಆರ್‌ ನಿಯಮಗಳು ಗೊತ್ತಿಲ್ಲ. ಸರಿಯಾಗಿ ಅರಿತುಕೊಳ್ಳದೆ ರಾಜಕಾರಣ ಮಾಡಲೆಂದು ಜನರಿಗೆ ಸುಳ್ಳು ಹೇಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಕಾಯ್ದೆಗಳ ಕುರಿತು ಚರ್ಚಿಸಲು  ರಾಷ್ಟ್ರ, ರಾಜ್ಯ ನಾಯಕರನ್ನು ಕರೆಯಿಸಿ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ ಎಂದು ಅವರು ಸವಾಲು ಹಾಕಿದರು.

ಎಲ್ಲರೂ ಸರಿಸಮಾನ ಬದುಕು ಸಾಗಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಅದನ್ನು ಕಿತ್ತುಹಾಕುವ ಕೆಲಸವನ್ನು ಈಗಿನ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಆರ್ಥಿಕ ವ್ಯವಸ್ಥೆ ವ್ಯವಸ್ಥಿತವಾಗಿ ಹಾಳು ಮಾಡುವ ಕೆಲಸ ಮುಗಿಸಿ ಈಗ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಧರ್ಮಗಳ ನಡುವೆ ಒಡಕು ಮೂಡಿಸಿ ದೇಶದಲ್ಲಿ ಅರಾಜಕತೆ, ಅಶಾಂತಿಯ ವಾತಾವರಣ ಸೃಷ್ಟಿಸಲು ಸರ್ಕಾರ ಮುಂದಾದಾಗಿದೆ. ಜನರು ಎಚ್ಚೆತ್ತುಕೊಳ್ಳಬೇಕು. ಸಂವಿಧಾನ ಉಳಿದರೆ ಮಾತ್ರ ಎಲ್ಲರೂ ಸುರಕ್ಷಿತ ಎಂದು ಅವರು ಹೇಳಿದರು.

ತಾ.ಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಕಾರ್ಯನಿವಾರ್ಹಕ ಅಧಿಕಾರಿ ಅನಿತಾ ಪೂಜಾರಿ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸಿಪಿಐ ಪಂಚಾಕ್ಷರಿ ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅವರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಗ್ರೇಡ್-2 ತಹಶೀಲ್ದಾರ್ ರವೀಂದ್ರ ಧಾಮಾ, ಜಿ.ಪಂಸದಸ್ಯ ಶಿವರುದ್ರ ಭೀಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಅಧಿಕಾರಿ ರಹೀಸ್ ಫಾತಿಮಾ, ತಾ.ಪಂ ಉಪಾಧ್ಯಕ್ಷ ಹರಿನಾಥ ಚವಾಣ್, ಸದಸ್ಯರಾದ ರವಿ ಪಡ್ಲ, ಮುನಿಯಪ್ಪ ಕೊಳ್ಳಿ, ಪುರಸಭೆ ಸದಸ್ಯರಾದ ಮಹ್ಮದ್ ರಸೂಲ್ ಮುಸ್ತಫಾ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೆದಾರ್, ಪಾಶಾಮಿಯ್ಯ ಖುರೇಷಿ, ಗೋವಿಂದ ನಾಯಕ, ಮುಖಂಡರಾದ ಅಣ್ಣಾರಾವ ಸಣ್ಣೂರಕರ್, ರಾಜಣ್ಣ ಕರದಾಳ, ಸಪ್ನಾ ಪಾಟೀಲ ಇದ್ದರು.

ಸಂತೋಷಕುಮಾರ ಶಿರನಾಳ ಸ್ವಾಗತಿಸಿ ನಿರೂಪಿಸಿದರು. ಪಿಎಸ್ಐ ಶ್ರೀಶೈಲ ಅಂಬಾಟಿ ಅವರಿಂದ ಧ್ವಜವಂದನೆ ನಡೆಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು