ಕಾಳಗಿ: ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸಗೂಡ ಗ್ರಾಮದ ಜನತೆಗೆ ಕುಡಿಯಲು ಅಶುದ್ಧ (ರಾಡಿ) ನೀರು ಸರಬರಾಜು ಮಾಡಲಾಗುತ್ತಿದೆ, ಅದನ್ನು ನಿಲ್ಲಿಸಿ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ರಟಕಲ್ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕುಡಿಯುವ ನೀರಿನ ಜೆಜೆಎಂ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದ್ದು, ಕಾಮಗಾರಿಗೆ ಸೂಕ್ತ ತನಿಖೆ ನಡೆಸಿ ಬಿಲ್ ತಡೆಹಿಡಿಯಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಗುತ್ತಿಗೆದಾರರ ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸಿ ಸರ್ಕಾರದ ಹಣ ಮರಳಿ ಸರ್ಕಾರಕ್ಕೆ ವಾಪಸ್ ಮಾಡಲು ಒತ್ತಾಯಿಸಿದರು.
ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ ಆಗಿದ್ದು ಇನ್ನೂ ಕೆಲವು ಏರಿಯಾಗಳಲ್ಲಿ, ಓಣಿಗಳಲ್ಲಿ ಕುಡಿಯುವ ನೀರು ಬರುತ್ತಿಲ್ಲ ಮತ್ತು ಕುಡಿಯುವ ನೀರಿನ ಆಹಾಕಾರ ಮಾತ್ರ ತಪ್ಪುತಿಲ್ಲ, ಸರ್ಕಾರದ ಹಣ ಖರ್ಚಾಗುವುದು ತಪ್ಪುತಿಲ್ಲ, ಕುಡಿಯುವ ನೀರು ಮಾತ್ರ ಸಿಗುತ್ತಿಲ್ಲ, ಊರಿನ ತುಂಬೆಲ್ಲ ರೋಡ್ ಒಡೆದು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಎತ್ತಿನ ಗಾಡಿಗಳು ಮಾಲಿನ ಗಾಡಿಗಳು ತುಂಬಾ ಸಂಕಷ್ಟಕ್ಕೆ ಈಡಾಗಿವೆ. ಅದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ತಮ್ಮ ಮನಸ್ಸು ಇಚ್ಛೆಯಂತೆ ಬೇಕಾ ಬಿಟ್ಟಿಯಾಗಿ ಕೆಲಸ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ದೇವಿಂದ್ರ ಸನದಿ, ಜಗನ್ನಾಥ ಯಾದವ, ಸೂರ್ಯಕಾಂತ ಭಜಂತ್ರಿ, ರಾಕೇಶ ಸನದಿ, ಓಂನಂದ ತಳಕೇರಿ, ಸಂಜುಕುಮಾರ ಯಾದವ, ಬಾಬು ಸನದಿ, ಸುಧಾಕರ ಚಿಂತಕೋಟಿ, ಮಲ್ಲಯ್ಯ ಗುತ್ತೇದಾರ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.