ಜಗತ್ತಿಗೆ ಶರಣರ ಕೊಡುಗೆ ಅಪಾರ

7
ಮಹಾದೇವಿಯಕ್ಕಗಳ ಸಮ್ಮೇಳನ; ಅಧ್ಯಕ್ಷೆ ಶಶಿಕಲಾ ಗಿರಿ

ಜಗತ್ತಿಗೆ ಶರಣರ ಕೊಡುಗೆ ಅಪಾರ

Published:
Updated:
Deccan Herald

ಕಲಬುರ್ಗಿ: ‘ಬಸವಾದಿ ಶರಣರು ಜಗತ್ತಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಜಗತ್ತಿನ ಎಲ್ಲಾ ವಿಚಾರವಾದಿಗಳು, ಜೀವಪರ ಹೋರಾಟಗಾರರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ’ ಎಂದು ಮಹಾದೇವಿಯಕ್ಕಗಳ ಸಮ್ಮೇಳನದ ಸರ್ವಾಧ್ಯಕ್ಷೆ ಶಶಿಕಲಾ ಗಿರಿ ಹೇಳಿದರು.

ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿಯ ಅಕ್ಕನ ಬಳಗದಿಂದ ಶನಿವಾರ ಏರ್ಪಡಿಸಿದ್ದ ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಶರಣರೆಲ್ಲ ಧರೆಯ ಮೇಲಿನ ದೇವರು. ಧರೆ ಎಂದರೆ ಅಖಂಡ ಭೂಮಿ. ಶರಣರು ವಿಶಾಲ ಭೂಮಂಡಲಕ್ಕೂ ದೇವರಾಗಿದ್ದಾರೆ. ದೇವರು ಎಂದರೆ ಶರಣರ ಅಭಿಪ್ರಾಯದಲ್ಲಿ ಗುಡಿ–ಗುಂಡಾರಗಳಲ್ಲಿ ಪೂಜಾರಿಗಳ ಬಂಧನದಲ್ಲಿರುವ ಕಲ್ಲು, ಮಣ್ಣು, ಹಿತ್ತಾಳೆ, ತಾಮ್ರ, ಕಂಚಿನ ಮೂರ್ತಿಗಳಲ್ಲ. ತನ್ನ ಶರೀರವನ್ನೇ ದೇವಾಲಯವಾಗಿಸಿಕೊಂಡು ಒಳಗಿರುವ ಆತ್ಮಚೈತನ್ಯವನ್ನೇ ದೇವರಾಗಿಸಿಕೊಂಡು ಆರಾಧಿಸಬೇಕು ಎಂಬ ಬಸವಣ್ಣನವರ ಆಶಯವೇ ನಿಜವಾದ ದೇವರು’ ಎಂದರು.

‘ದೇವರು ಎಂದರೆ ವೈದಿಕ ಪುರಾಣಗಳಲ್ಲ, ಶಾಸ್ತ್ರಗಳು ಹೇಳುವ ಹೋಮ–ಹವನಗಳಲ್ಲ. ದೇವರೆಂದರೆ ತನ್ನ ಅಂತರಂಗದ ಸಾಕ್ಷಿ ಪ್ರಜ್ಞೆ. ಈ ಸಾಕ್ಷಿ ಪ್ರಜ್ಞೆಯನ್ನು ಪೂಜಿಸುವುದೇ ಪರಮಸಾಧನ’ ಎಂದು ಹೇಳಿದರು.

‘ನಡೆ–ನುಡಿ ಕುರಿತು ಶರಣರು ತುಂಬಾ ಸ್ಪಷ್ಟವಾಗಿದ್ದರು ಮತ್ತು ನಿಷ್ಠುರರಾಗಿದ್ದರು. ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಎಲ್ಲಾ ಅಸಮಾನತೆಗಳನ್ನು ಅವರು ನಿರಾಕರಿಸಿದ್ದರು. ಮೇಲ್ಜಾತಿ, ಕೆಳಜಾತಿ ಎಂಬ ಭೇದ, ಬಡವ–ಶ್ರೀಮಂತರೆಂಬ ತಾರತಮ್ಯ, ಗಂಡು–ಹೆಣ್ಣು ಎಂಬ ಅಸಮಾನತೆಗಳನ್ನು ಹೊಡೆದು ಹಾಕಲು ಶ್ರಮಿಸಿದರು. ಜಗತ್ತಿನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ, ದಲಿತರಿಗೆ ಮತ್ತು ಹಿಂದುಳಿದವರಿಗೆ ಧ್ವನಿ ನೀಡಿದ್ದು ಬಸವ ಚಳವಳಿ. ಅನುಭವ ಮಂಟಪದಲ್ಲಿ ಗಂಡು–ಹೆಣ್ಣಿಗೆ ಸಮಾನ ಅವಕಾಶ ನೀಡಿ ಸ್ತ್ರೀಯರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು’ ಎಂದು ತಿಳಿಸಿದರು.

‘ಶರಣರು ಲಿಂಗ ಸಮಾನತೆಯೊಂದಿಗೆ ಜಾತಿ ವ್ಯವಸ್ಥೆಯನ್ನು ತಳ ಮಟ್ಟದಿಂದ ಕೀಳಲು ಪ್ರಯತ್ನಿಸಿದರು. ಅನುಭವ ಮಂಟಪದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಎಲ್ಲಾ ಜಾತಿಯ ಜನರು ಸೇರಿ ಸಮಾನತೆಯ ಸಂಕೇತವಾಗಿದ್ದ ಇಷ್ಟ ಲಿಂಗವನ್ನು ಕಟ್ಟಿಕೊಂಡು ಸಮಾನತೆಯನ್ನು ಸಾರಿದ್ದರು’ ಎಂದರು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರ ‘ಲೀಲಾಜಾಲ’ ಹಾಗೂ ‘ಆಷಾಢದ ನೆನಹಿನಲಿ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸ್ವಾಗತ ಸಮಿತಿ ಅಧ್ಯಕ್ಷೆ ಶರಣಮ್ಮ ಕಲಬುರ್ಗಿ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ, ಕಾರ್ಯಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಬಸಮ್ಮ ಕಲಕಮ್, ಅನುರಾಧಾ ಕುಮಾರಸ್ವಾಮಿ, ಡಾ.ಸಂಗೀತಾ ಹಿರೇಮಠ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !