ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ನಿಜಾಮುದ್ದೀನ್‌ ‘ಸಂಪರ್ಕಿತರೇ’ ಈಗ ಸವಾಲು!

48 ಗಂಟೆಯ ನಂತರವೂ ಸುಳಿವು ಸಿಗದ ನೇರ– ಪರೋಕ್ಷ ಸಂಪರ್ಕಿತರು, ಜಿಲ್ಲಾಡಳಿತಕ್ಕೆ ತಲೆನೋವು
Last Updated 3 ಏಪ್ರಿಲ್ 2020, 10:23 IST
ಅಕ್ಷರ ಗಾತ್ರ

ಕಲಬುರ್ಗಿ: ದೆಹಲಿಯ ನಿಜಾಮುದ್ದೀನ್‌ ದರ್ಗಾ ಧರ್ಮಸಭೆಯಲ್ಲಿ ಪಾಲ್ಗೊಂಡ 26 ಮಂದಿಯ ಮಾಹಿತಿ ಸಿಕ್ಕು ಗುರುವಾರಕ್ಕೆ 48 ಗಂಟೆ ಕಳೆದಿದೆ. ಆದರೂ ಈ ಸಭೆಯಲ್ಲಿ ಇನ್ನೂ ಎಷ್ಟು ಮಂದಿ ಪಾಲ್ಗೊಂಡಿದ್ದರು? ಅವರೆಲ್ಲ ಎಲ್ಲಿ ಅಡಗಿದ್ದಾರೆ? ಈಗ ಪತ್ತೆಯಾದವರ ನೇರ ಸಂಪರ್ಕಕ್ಕೆ ಬಂದವರು ಎಷ್ಟು ಎಂಬ ಸುಳಿವು ಇನ್ನೂ ನಿಗೂಢವಾಗಿದೆ.‌‌

ಮಂಗಳವಾರ (ಮಾರ್ಚ್‌ 31) ರಾತ್ರಿಯೇ 14 ಮಂದಿಯನ್ನು ಹುಡುಕಾಡಿ ಪತ್ತೆ ಮಾಡಿದ ಜಿಲ್ಲಾಡಳಿತ, ಎಲ್ಲರನ್ನೂ ಇಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ತೆರೆದ ವಿಶೇಷ ಐಸೋಲೇಶನ್ ವಾರ್ಡ್‌ಗೆ ದಾಖಲಿಸಿದೆ. ಇವರ ನೇರ ಸಂಪರ್ಕಕ್ಕೆ ಬಂದ ಒಬ್ಬ ಮಹಿಳೆಗೆ ಈಗಾಗಲೇ ಕೋವಿಡ್‌–19 ತಗುಲಿದ್ದು ದೃಢಪಟ್ಟಿದೆ. ಆದರೆ, ಇನ್ನುಳಿದವರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರು ಎಷ್ಟು ಮಂದಿ? ಅವರೆಲ್ಲ ಯಾವ ಪ್ರದೇಶದಲ್ಲಿ ಇದ್ದಾರೆ? ಎಂಬ ಮಾಹಿತಿಯನ್ನು ಮಾತ್ರ ಐಸೋಲೇಶನ್‌ನಲ್ಲಿ ಇದ್ದವರು ಬಿಟ್ಟುಕೊಟ್ಟಿಲ್ಲ.

ಇದೇ ಸಭೆಯಿಂದ ಮರಳುತ್ತಿದ್ದ ಇನ್ನೂ 6 ಮಂದಿ ಹೊರರಾಜ್ಯದಲ್ಲೇ ಇದ್ದಾರೆ. ಇಡೀ ದೇಶ ಲಾಕ್‌ಡೌನ್‌ ಆದ ಕಾರಣ ಮೂವರು ಹೈದರಾಬಾದ್‌ ಹಾಗೂ ಮೂವರು ಸೊಲ್ಲಾಪುರ ಪಟ್ಟಣಗಳಲ್ಲೇ ಉಳಿದಿದ್ದಾರೆ. ಇನ್ನೂ ಮೂವರು ರಾಜ್ಯಕ್ಕೆ ಮರಳಿದ್ದು, ಕಲಬುರ್ಗಿ ಜಿಲ್ಲೆಗೆ ಬಂದಿಲ್ಲಎಂಬುದು ಮೂಲಗಳ ಮಾಹಿತಿ. ಉಳಿದ ಮೂವರು ಎಲ್ಲಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆ ಆಗಿಯೇ ಉಳಿದಿದೆ.

ಸದ್ಯ ದೊರೆತವರಲ್ಲಿ ಇಬ್ಬರು 66 ವರ್ಷದವರಾಗಿದ್ದು ಅವರಲ್ಲಿ ಕೆಮ್ಮು, ಶೀತ, ಸುಸ್ತು ಮುಂತಾದ ಲಕ್ಷಣಗಳು ಈ ಮುಂಚೆಯೇ ಕಂಡುಬಂದಿವೆ. ಇಳಿದವರೆಲ್ಲ 50 ವರ್ಷದೊಳಗಿನವರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ. ಆದರೆ, ಗುರುವಾರ ರಾತ್ರಿಯವರೆಗೂ 14 ಮಂದಿಯಲ್ಲಿ ಯಾರೊಬ್ಬರ ಕಫದ ಮಾದರಿಯ ಪರೀಕ್ಷೆಯ ವರದಿ ಬಂದಿರಲಿಲ್ಲ.

ಶಂಕಿತರ ವಾಸಸ್ಥಳಗಳಲ್ಲಿ ಮುಖಂಡರ ಪ್ರಚಾರ: ದೆಹಲಿ ಧರ್ಮಸಭೆಯಲ್ಲಿ ಪಾಲ್ಗೊಂಡ ಬೀದರ್‌ ಜಿಲ್ಲೆಯ 28 ಮಂದಿಯಲ್ಲಿ 11 ಮಂದಿಗೆ ಕೋವಿಡ್‌–19 ದೃಢಪಟ್ಟ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಅವರೆಲ್ಲ ಮಾರ್ಚ್‌ 18ರಂದೇ ಬೀದರ್‌ಗೆ ಮರಳಿದವರು. ಕಲಬುರ್ಗಿಯಲ್ಲಿ ಐಸೋಲೇಶನ್‌ ಆದವರು ಕೂಡ ಅದೇ ದಿನ ವಾಪಸ್ಸಾಗಿದ್ದಾರೆ. ಇದರಿಂದಾಗಿ ಇವರು ವಾಸವಾಗಿದ್ದ ನಗರದ ಬಹುಪಾಲು ಪ್ರದೇಶಗಳಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ಆಯಾ ಪ್ರದೇಶಗಳಲ್ಲಿ ಕೆಲವು ಮುಖಂಡರೇ ಮೈಕ್‌ ಹಿಡಿದು ಪ್ರಚಾರ ಮಾಡಿ, ಅರಿವು ಮೂಡಿಸುತ್ತಿದ್ದಾರೆ.

ಶುಕ್ರವಾರದ ಜುಮ್ಮಾ ನಮಾಜ್ ಮನೆಯಲ್ಲೇ ಮಾಡಿ: ‘ಕೋವಿಡ್‌ ಮಾರಿಯಿಂದ ದೂರ ಉಳಿಯಲು ಶುಕ್ರವಾರ (ಏ. 3) ಜುಮ್ಮಾ ನಮಾಜ್‌ ಅನ್ನು ಎಲ್ಲರೂ ಮನೆಯಲ್ಲೇ ಮಾಡಬೇಕು ಎಂದುನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೊಹಮ್ಮದ್ ಅಸಗರ್ ಚುಲಬುಲ್ ಮನವಿ ಮಾಡಿಕೊಂಡಿದ್ದಾರೆ.

ನಗರದ ವಿವಿಧ ಪ್ರದೇಶಗಳಲ್ಲಿ ಗುರುವಾರ ಮೈಕ್‌ ಹಿಡಿದುಕೊಂಡು ಜಾಗೃತಿ ಮೂಡಿಸಿದ ಅವರು, ವೈರಾಣು ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು.‌ ಜಿಲ್ಲಾಡಳಿತ ಮತ್ತು ಅರೋಗ್ಯ ಇಲಾಖೆಗೆ ಸಂಪೂರ್ಣ ರೀತಿಯಲ್ಲಿ ಸಹಾಕರ ನೀಡಬೇಕು. ದೆಹಲಿ ಸಭೆಯಿಂದ ವಾಪಸ್ ಬಂದವರು ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಮುಂದಾಗಬೇಕು ಎಂದೂ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT