ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಐಸಿಯಲ್ಲಿ 500 ಬೆಡ್‌ ಹೆಚ್ಚಳ: ಭರವಸೆ

ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ಸಂಸದ ಡಾ.ಉಮೇಶ ಜಾಧವ
Last Updated 23 ಮೇ 2021, 3:21 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಇನ್ನೂ 500 ಕೋವಿಡ್‌ ಬೆಡ್‌ಗಳ ವ್ಯವಸ್ಥೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ನವದೆಹಲಿಯಲ್ಲಿರುವ ಇಎಸ್‌ಐಸಿ ಮುಖ್ಯ ಕಚೇರಿಯ ಮಹಾನಿರ್ದೇಶಕರು ಭರವಸೆ ನೀಡಿದ್ದಾರೆ.

ಈ ಸಂಬಂಧ ದೆಹಲಿಗೆ ತೆರಳಿದ ಸಂಸದ ಡಾ.ಉಮೇಶ ಜಾಧವ ಅವರು, ಶುಕ್ರವಾರ ಇಎಸ್‌ಐಸಿ ಹೆಡ್‌ಕ್ವಾರ್ಟರ್‌ನ ಮಹಾನಿರ್ದೇಶಕ ಮುಖಮೇತ್‌ ಭಾಟಿಯಾ ಹಾಗೂ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಕಾರ್ಯದರ್ಶಿ ಅಪೂರ್ವ ಚಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

‘ಇಎಸ್‌ಐಸಿ ಆಸ್ಪತ್ರೆ ಕಲಬುರ್ಗಿಯಲ್ಲಿ ಆರಂಭವಾಗಿ ಏಳು ವರ್ಷವಾಗಿದೆ. ಬೃಹತ್‌ ಕಟ್ಟಡ ಹಾಗೂ ಸಲಕರಣೆಗಳು ಹೊಂದಿದ್ದರೂ ಕೇವಲ 200 ಬೆಡ್‌ಗಳ ಆಸ್ಪತ್ರೆ ಇಲ್ಲಿ ಚಾಲನೆಯಲ್ಲಿದೆ. ಇನ್ನೂ 500 ಬೆಡ್‌ಗಳನ್ನು ಸಿದ್ಧಗೊಳಿಸಲು ಸುಲಭವಾದ ಅವಕಾಶಗಳಿವೆ. ಆದರೂ ಮಾಡಿಲ್ಲ. ಜಿಲ್ಲೆಯಲ್ಲಿ ಈಗ ಕೋವಿಡ್‌ ಸಾಂಕ್ರಾಮಿಕ ತೀವ್ರವಾಗಿ ಕಾಡುತ್ತಿದೆ. ಆದ್ದರಿಂದ ತಕ್ಷಣಕ್ಕೆ ಬೆಡ್‌ಗಳ ಸಾಮರ್ಥ್ಯ ಹೆಚ್ಚಿಸಲು ಮುಂದಾಗಬೇಕು’ ಎಂದು ಕೋರಿದರು.

‘ರಾಜಸ್ಥಾನ, ಬಿಹಾರ್‌ ಮುಂತಾದ ಕಡೆಯಲ್ಲಿ ಇರುವ ಇಎಸ್‌ಐಸಿ ಆಸ್ಪತ್ರೆಗಳ ಸಾಮರ್ಥ್ಯವನ್ನು ಈಗಾಗಲೇ ಹೆಚ್ಚಿಸಲಾಗಿದೆ. ಅದರಂತೆ ಕಲಬುರ್ಗಿ ಆಸ್ಪತ್ರೆಯನ್ನೂ ನವೀಕರಿಸಬೇಕು. ಅಲ್ಲದೇ ಅಲ್ಲಿ ಕ್ರಯೋಜೆನಿಕ್‌ ಆಮ್ಲಜನಕ ಉತ್ಪಾದನಾ ಘಟಕವನ್ನೂ ನಿರ್ಮಿಸಬೇಕು’ ಎಂದೂ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿಯೂ ಇಎಸ್‌ಐಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸದೇ ಇರುವುದು ಅಚ್ಚರಿ ಮೂಡಿಸಿದೆ. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಇನ್ನೂ ಆಮ್ಲಜನಕ ಉತ್ಪಾದನಾ ಘಟಕ ಇಲ್ಲದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಆದ್ದರಿಂದ ಶೀಘ್ರದಲ್ಲೇ ಆಸ್ಪತ್ರೆಯ ಬೆಡ್‌ಗಳ ಪ್ರಮಾಣ ಹೆಚ್ಚಿಸಲು ನಿರ್ದೇಶನ ನೀಡಲಾಗುವುದು’ ಎಂದೂ ಪ್ರತಿಕ್ರಿಯಿಸಿದ್ದಾರೆ.

‘ಕೋವಿಡ್‌ನಂಥ ಸಾಂಕ್ರಾಮಿಕ ಸಂದರ್ಭದಲ್ಲೂ ಸಂಸದ ಡಾ.ಉಮೇಶ ಜಾಧವ ಅವರು ಈ ಕೆಲಸಕ್ಕಾಗಿ ದೆಹಲಿವರೆಗೆ ಬಂದಿದ್ದು ಅಭಿನಂದನೀಯ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂಬುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ’ ಎಂದು ಸಂಸದರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT