ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೇನಾನಿಗಳಿಗೇ ಸಂಬಳವಿಲ್ಲ!

ಹಣಕಾಸಿನ ಕೊರತೆ ಎನ್ನುತ್ತಾರೆ ಜಿಮ್ಸ್ ಅಧಿಕಾರಿಗಳು, 240 ಮಂದಿ ಬದುಕು ಸಂಕಷ್ಟದಲ್ಲಿ
Last Updated 25 ಮೇ 2021, 3:12 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ ಸಂಕಷ್ಟ ಕಾಲದಲ್ಲೂ ಜಿಮ್ಸ್‌ನಲ್ಲಿ ಕೆಲಸ ಮಾಡುತ್ತಿರುವ 240ಕ್ಕೂ ಹೆಚ್ಚು ಡಿ ಗ್ರೂಪ್‌ ಸಿಬ್ಬಂದಿಗೆ ಏಪ್ರಿಲ್‌ ತಿಂಗಳ ಸಂಬಳವನ್ನು ಇನ್ನೂ ನೀಡಿಲ್ಲ. ಇದರಿಂದಾಗಿ ಅವರ ದೈನಂದಿನ ಜೀವನ ಸಂಕಷ್ಟಕ್ಕೆಸಿಲುಕಿದೆ.

ಸ್ವಚ್ಛತಾ ಕೆಲಸಗಾರರು, ಸ್ಟಾಫ್‌ ನರ್ಸ್‌ ಸೇರಿ 240ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಮೇ 1ಕ್ಕೆ ಆಗಬೇಕಾಗಿದ್ದ ಏಪ್ರಿಲ್‌ ತಿಂಗಳ ಸಂಬಳ ಮೇ 22ರವರೆಗೂ ಆಗಿಲ್ಲ. ಜಿಮ್ಸ್‌ನಲ್ಲಿ ಆರ್ಥಿಕ ಕೊರತೆ ಇರುವ ಕಾರಣ ಸಂಬಳ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಸಿಬ್ಬಂದಿ ಹೇಳುತ್ತಾರೆ.

ಇದರಲ್ಲಿ 100 ಮಂದಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಡಿ ದರ್ಜೆ ಕಾರ್ಮಿಕರು ಇದ್ದಾರೆ. ಅವರಿಗಂತೂ ಕಳೆದ ಮೂರು ತಿಂಗಳಿಂದ ಸಂಬಳವನ್ನೇ ಕೊಟ್ಟಿಲ್ಲ. ಸಹಜವಾಗಿಯೇ ಕೆಲಸ ಮಾಡುವ ಉತ್ಸಾಹ ಕುಂದಿದೆ ಎಂಬುದು ಸಿಬ್ಬಂದಿ ದೂರು.

‘ಜಿಮ್ಸ್‌ನಲ್ಲಿ ಒಬ್ಬ ಹಿರಿಯ ವೈದ್ಯರಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಸ್ವಚ್ಛತಾ ಸಿಬ್ಬಂದಿಗೂ ಇದೆ. ಆಸ್ಪತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಈಗ ಕೊರೊನಾ ಸೋಂಕು ಎರಡನೇ ಅಲೆ ಆರಂಭವಾದ ಮೇಲೆ ದಿನದ 24 ಗಂಟೆಯೂ ಕೆಲಸದಲ್ಲಿ ‌ಇರಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಸಂಬಳದ ವಿಚಾರ ಮಾತ್ರ ಯಾರೂ ಎತ್ತುವುದಿಲ್ಲ’ ಎಂದು ನೌಕರರು ‘‍ಪ್ರಜಾವಾಣಿ’ ಮುಂದೆ ದೂರು ಹೇಳಿಕೊಂಡರು.

‘ಲಾಕ್‌ಡೌನ್‌ ಕಾರಣ ನಮ್ಮ ಬದುಕೂ ಸಂಕಷ್ಟಕ್ಕೆ ಸಿಲುಕಿದೆ. ಈಗ ಬರುವ ಸಂಬಳವೂ ನಿಂತಿದೆ. ತಿಂಗಳಿಗೆ ಸಾಲುವಷ್ಟು ದಿನಸಿ ಸಾಮಗ್ರಿಗಳನ್ನು ಮುಂಚಿತವಾಗಿಯೇ ಖರೀದಿಸುವ ಅವಶ್ಯಕತೆ ಇದೆ. ಈಗಂತೂ ಆಸ್ಪತ್ರೆಗೆ ಹೋಗಿ– ಬರಲು ಬೈಕುಗಳಿಗೆ ಪೆಟ್ರೋಲ್‌ ಹಾಕಿಸಲೂ ನಮ್ಮ ಬಳಿ ದುಡ್ಡಿಲ್ಲ’ ಎಂಬುದು ಗುತ್ತಿಗೆ ಕಾರ್ಮಿಕರ ದೂರು.

ಬಾಡಿಗೆ ಮನೆಯಲ್ಲಿ ಇದ್ದು ಬದುಕುತ್ತಿರುವ ಸಿಬ್ಬಂದಿ ಕಷ್ಟ ಹೇಳತೀರದು. ಒಂದೆಡೆ ಆಸ್ಪತ್ರೆಯಲ್ಲಿ ಕೆಲಸದ ಒತ್ತಡ, ಮತ್ತೊಂದೆಡೆ ಬಾಡಿಗೆ ಮನೆಯ ಮಾಲೀಕರ ಒತ್ತಡ, ಇನ್ನೊಂದೆಡೆ ಮನೆಗೆ ದಿನಸಿ ಖರೀದಿಸುವ ಅಗತ್ಯ; ಇದರ ಮಧ್ಯೆ ನಮ್ಮ ಬದುಕು ತತ್ತರಿಸಿದೆ ಎನ್ನುವುದು ಸಿಬ್ಬಂದಿ ಅಳಲು.‌

‘ಪ್ರೋತ್ಸಾಹ ಧನವೂ ಬಂದಿಲ್ಲ’

ಕಳೆದ ಬಾರಿಯ ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಗ್ರೂಪ್‌ ಡಿ ಸಿಬ್ಬಂದಿ ಹಗಲಿರುಳು ಶ್ರಮಿಸಿದೆ. ಅವರಿಗೆ ತಲಾ ₹ 10 ಸಾವಿರದಂತೆ ಆರು ತಿಂಗಳ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಒಂದು ವರ್ಷ ಕಳೆದು ಈಗ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಅವರು ಹೋರಾಡುತ್ತಿದ್ದಾರೆ. ಆದರೂ ಮೊದಲ ವರ್ಷದ ಪ್ರೋತ್ಸಾಹ ಧನವನ್ನೇ ಇನ್ನೂ ನೀಡಿಲ್ಲ. ಎಲ್ಲ 240 ಮಂದಿಗೂ ತಲಾ ₹ 60 ಸಾವಿರ ಪ್ರೋತ್ಸಾಹ ಧನ ನೀಡುವುದು ಬಾಕಿ ಇದೆ. ಇದನ್ನು ಕೂಡಲೇ ನೀಡಿದರೆ ಜೀವನೋಪಯಕ್ಕೆ ಸಹಕಾರಿ ಆಗುತ್ತದೆ. ಜತೆಗೆ, ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಸಂಬಳ ನೀಡಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT