ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ವಿದೇಶಿದಿಂದ ಬಂದವರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ

Last Updated 16 ಮಾರ್ಚ್ 2020, 13:55 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಯಾರಾದರೂ ವಿದೇಶಗಳಿಂದ ಬಂದ ವ್ಯಕ್ತಿಗಳು ಕಂಡಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ನಾವು ಕೊರೊನಾದಂಥ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಮನವಿ ಮಾಡಿದರು.

‘ಬೇರೆಬೇರೆ ದೇಶಗಳಿಂದ ಜಿಲ್ಲೆಗೆ ಮರಳಿದ ಸುಮಾರು 61 ಮಂದಿ ಸೋಮವಾರದ ಹೊತ್ತಿಗೆ ಪತ್ತೆಯಾಗಿದ್ದಾರೆ. ಇದರಲ್ಲಿ ಇಬ್ಬರ ಆರೋಗ್ಯ ಏರುಪೇರಾಗಿದ್ದು, ಅವರನ್ನು ಇಎಸ್‌ಐ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ. ಉಳಿದವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ’ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿದೇಶದಿಂದ ಮರಳಿದ್ದಾಗಿ ಇವರಲ್ಲಿ ಯಾರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಹೇಳಿಕೊಂಡಿಲ್ಲ. ಅವರ ಅಕ್ಕಪಕ್ಕದ ಮನೆಯವರೇ ಫೋನ್‌ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ. ಇಂಥ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿದ ನಾಗರಿಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

14 ದಿನ ತಪಾಸಣೆ, 14 ದಿನ ಚಿಕಿತ್ಸೆ: ‘ಕೊರೊನಾ ವೈರಾಣು ತಗುಲಿದ ಮೇಲೂ 14 ದಿನಗಳವರೆಗೆ ಅದರ ನಿಖರತೆ ತಿಳಿಯವುದಿಲ್ಲ. ಅಲ್ಲಿಯವರೆಗೆ ಶಂಕೆ ಮಾತ್ರ ವ್ಯಕ್ತಪಡಿಸಲು ಸಾಧ್ಯ. ಸೋಂಕು ಪಾಸಿಟಿವ್‌ ಎಂದು ದೃಢಪಟ್ಟ ನಂತರ ಅವರಿಗೆ 14 ದಿನಗಳ ಚಿಕಿತ್ಸೆ ನಡೆಯುತ್ತದೆ. ಇನ್ನೂ ಇದರ ಔಷಧಿ ಕಂಡುಕೊಳ್ಳಲಾಗಿಲ್ಲ. ಹಾಗಾಗಿ, ರೋಗಿಗೆ ಕೆಮ್ಮು, ಶೀತ, ಜ್ವರ... ಹೀಗೆ ಯಾವಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯೋ ಅದನ್ನು ಕಡಿಮೆ ಮಾಡುವ ಚಿಕಿತ್ಸೆ ನೀಡಲಾಗುತ್ತದೆ ಎಂದು ಶರತ್‌ ತಿಳಿಸಿದರು.

11 ಔಷಧ ಮಳಿಗೆಗಳ ಮೇಲೆ ರೇಡ್‌: ಮಾಸ್ಕ್‌, ಸ್ಯಾನಿಟೈಸರ್‌ ಮುಂತಾದ ಸಲಕರಣೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ದೂರಿನ ಮೇರೆಗೆ ಸೋಮವಾರ ನಗರದ 11 ಔಷಧ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಅದರಲ್ಲಿ ಮೂರು ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಅವುಗಳನ್ನು ಸೀಜ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಈ ರೀತಿ ಅವಶ್ಯ ವೈದ್ಯಕೀಯ ಸಲಕರಣೆಗಳಿಗೆ ದುಬಾರಿ ಬೆಲೆ ಆಕರಿಸಿದರೆ ಅಥವಾ ಕೃತಕ ಅಭಾವ ಸೃಷ್ಟಿ ಮಾಡಿದರೆ; ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲ್ಲೂಕುಕೇಂದ್ರದಲ್ಲಿ 5 ಐಸೋಲೇಷನ್ ವಾರ್ಡ್: ನಗರದಜಿಮ್ಸ್‌ನಲ್ಲಿ 12 ಮತ್ತು ಇಎಸ್‌ಐಸಿನಲ್ಲಿ 50 ಐಸೋಲೇಷನ್ ವಾರ್ಡ್‌ಗಳಿವೆ. ಇದರ ಜೊತೆಯಲ್ಲಿ 200 ಕೊರೊಂಟೈನ್‌ ವಾರ್ಡ್ ಸಹ ಇದ್ದು, ಇಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ. ಇಎಸ್ಐಸಿ ಆವರಣದಲ್ಲಿ ಹೊಸ ಕಟ್ಟಡವೂ ಇದ್ದು, ಅಗತ್ಯಬಿದ್ದರೆ ಅಲ್ಲಿ ಇನ್ನಷ್ಟು ವಾರ್ಡ್‌ ಸಿದ್ಧಪಡಿಸಲು ಸಾಧ್ಯವಿದೆ ಎಂದರು.‌

ಕೊರೊನಾ‌ ವೈರಸ್ ಎಲ್ಲೆಡೆ ಭೀತಿ ಸೃಷ್ಟಿಸಿರುವುದರಿಂದ ಜನ ಇದರ ಮೇಲೆ ತುಂಬಾ ಕೇಂದ್ರೀಕೃತ ಆಗಿದ್ದಾರೆ. ಹೀಗಾಗಿ, ಪತ್ರಕರ್ತರು ಸುದ್ದಿ ಕಳುಹಿಸುವ ಭರಾಟೆಯಲ್ಲಿ ತಪ‍್ಪು ಸಂದೇಶ ರವಾಣೆ ಮಾಡಬಾರದು. ಇದು ಜಿಲ್ಲಾಡಳಿತದ ಕೆಲಸಕ್ಕೂ ಅಡ್ಡಿ ಮಾಡುತ್ತದೆ, ಜನರಲ್ಲಿ ಭೀತಿಯ ಬದಲು ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆಲವು ಮಾಧ್ಯಮದ ವರದಿಗಾರರಿಗೆ ತಾಕೀತು ಮಾಡಿದರು.‌

‘ಹಳ್ಳಿನ ಜನರೂ ಎಚ್ಚರಿಕೆ ವಹಿಸಿ’

‘ಕೊರೊನಾ ವೈರಾಣು ಈವರೆಗೆ ನಗರದಲ್ಲಿ ಮಾತ್ರ ಕಾಣಿಸಿಕೊಂಡಿದೆ ಎಂದು ಬಹುಪಾಲು ಹಳ್ಳಿಯ ಜನ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ, ವಿದೇಶದಿಂದ ಬಂದ ಬಹಳಷ್ಟು ಮಂದಿ ಹಳ್ಳಿಗಳಲ್ಲೇ ಓಡಾಡುತ್ತಿದ್ದಾರೆ. ಚಿತ್ತಾಪುರ ಹಾಗೂ ಚಿಂಚೋಳಿಯಲ್ಲಿ ಇದ್ದವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದನ್ನು ಗಮನಿಸಿ, ಗ್ರಾಮೀಣ ಜನ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಸಿಗರು, ವಿದೇಶದಿಂದ ಮರಳಿದವರು, ಅಪರಿಚಿತರೊಂದಿಗೆ ನೇರ ಸಂಪರ್ಕ ಬೆಳೆಸಿಕೊಳ್ಳಬಾರದು. ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಜ್ವರಗಳು ಕಾಣಿಸಿಕೊಂಡರೆ ತಾಲ್ಲೂಕು ಕೇಂದ್ರಗಳಲ್ಲಿ ತರೆದ ವಿಶೇಷ ವಾರ್ಡ್‌ಗಳಲ್ಲಿ ತಪಾಸಣೆಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ

ಹೊರದೇಶಗಳಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ 24X7 ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. 08472 278604 ಅಥವಾ 08472 278677 ಈ ಸಂಖ್ಯೆಗಳಿಗೆ ಫೋನ್‌ ಮಾಡಿ ಮಾಹಿತಿ ನೀಡಬಹುದು. ಹೀಗೆ ಮಾಹಿತಿ ನೀಡುವ ವ್ಯಕ್ತಿಗಳ ಹೆಸರು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಕೊರೊನಾ ಸೋಂಕಿಗೆ ತಡೆ ಬೀಳಬೇಕೆಂದರೆ ಜನರು ಇದರಲ್ಲಿ ಪಾಲ್ಗೊಳ್ಳಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT