ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ನೀಡಲು ಪೌರಕಾರ್ಮಿಕರ ಆಗ್ರಹ

ಬೆಳಿಗ್ಗೆ 6ರಿಂದಲೇ ಕೆಲಸ ಸ್ಥಗಿತಗೊಳಿಸಿದ ಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ
Last Updated 17 ಜನವರಿ 2021, 0:51 IST
ಅಕ್ಷರ ಗಾತ್ರ

ಕಲಬುರ್ಗಿ: ಪೌರಕಾರ್ಮಿಕರನ್ನು ಹೊರಗೊತ್ತಿಗೆ ಆಧಾರದಲ್ಲಿ ನೇಮಕ ಕೈಬಿಡಬೇಕು ಹಾಗೂ ನೇರ ವೇತನ ಪಾವತಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪೌರಕಾರ್ಮಿಕರು ಬೃಹತ್‌ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಸೇರಿದ ಪ‍್ರತಿಭಟನಾಕಾರರು, ಬೆಳಿಗ್ಗೆ 6ರಿಂದಲೇ ಕೆಲಸ ಸ್ಥಗಿತಗೊಳಿಸಿ ಧರಣಿ ಆರಂಭಿಸಿ, ಮಧ್ಯಾಹ್ನ 2ರವರೆಗೂ ಕುಳಿತರು. ಬೇಕೇಬೇಕು–ನ್ಯಾಯ ಬೇಕು, ಕಿರುಕುಳ ನೀಡುವ ಗುತ್ತಿಗೆದಾರರು ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

‘ಕಳೆದ ಮೂರು ತಿಂಗಳಿಂದ ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ. ಸಂಬಳಕ್ಕಾಗಿ ಪದೇಪದೇ ಕಚೇರಿಗೆ ಅಲೆದ ಸಾಕಾಗಿದೆ. ಕೈಯಲ್ಲಿ ಕನಿಷ್ಠ ಊಟಕ್ಕೂ ಹಣವಿಲ್ಲದೇ ನಾವು ಜೀವನ ನಡೆಸುವುದಾದರೂ ಹೇಗೆ?’ ಎಂದು ಮುಖಂಡರು ಆಕ್ರೋಶ ಹೊರಹಾಕಿದರು.

‘ಪೌರ ಕಾರ್ಮಿಕರನ್ನು ಗುತ್ತಿಗೆದಾರರು ಇನ್ನಿಲ್ಲದಂತೆ ಶೋಷಣೆ ಮಾಡುತ್ತಿದ್ದಾರೆ. ಸಂಬಳ ಕೇಳಿದರೆ ಕಿರುಕುಳ ನೀಡುತ್ತಾರೆ. ಐದಾರು ವರ್ಷಗಳಿಂದಲೂ ಒಂದು ತಿಂಗಳು ಕೂಡ ನಾವು ಕೇಳದೇ ಸಂಬಳ ನೀಡಿಲ್ಲ. ಪ್ರತಿಬಾರಿಯೂ ಹೋರಾಡಿಯೇ ಸಂಬಳ ಪಡೆಯುವ ಸ್ಥಿತಿ ಬಂದಿದೆ’ ಎಂದು ಮಹಾಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಅತನೂರ ಆಕ್ರೋಶ ವ್ಯಕ್ತಪಡಿಸಿದರು.

‘ರಸ್ತೆ, ಚರಂಡಿ ಯಾವುದೇ ಕಾಮಗಾರಿ ಮಾಡುವ ಮುನ್ನವೇ ಪಾಲಿಕೆಯಿಂದ ಪೂರ್ಣ ಹಣ ಪಾವತಿಸಲಾಗುತ್ತದೆ. ಆದರೆ, ತಿಂಗಳಪೂರ್ತಿ ನಮಗೆ ಸಂಬಳ ನೀಡುವುದಿಲ್ಲ. ಪಾಲಿಕೆಯ ಅಧಿಕಾರಿಗಳು ಮಾತ್ರ ಪ್ರತಿ ತಿಂಗಳ 1ರಂದು ತಪ್ಪದೇ ವೇತನ ಪಡೆಯುತ್ತಾರೆ. ಆದರೆ, ಕಾರ್ಮಿಕರ ಸ್ಥಿತಿ ಅರ್ಥ ಮಾಡಿಕೊಳ್ಳುವುದಿಲ್ಲ’ ಎಂದೂ ದೂರಿದರು.

‘ನಿಯಮಿತವಾಗಿ ಸಂಬಳ ಸಿಗದ ಕಾರಣ, ಯಾರೂ ಮನೆ ಬಾಡಿಗೆ ಕೊಡಲು ಒಪ್ಪುವುದಿಲ್ಲ. ಮನೆಯಲ್ಲಿ ಹಬ್ಬ ಮಾಡುವಂತಿಲ್ಲ. ನಮ್ಮದೇ ಸಂಬಳ ಬೇರೊಬ್ಬರ ಕೈಯಲ್ಲಿ ಇದ್ದರೂ ಖಾಸಗಿ ವ್ಯಕ್ತಿಗಳ ಬಳಿ ಕೈ ಚಾಚಿ ಸಾಲ ಪಡೆಯುವ ಸ್ಥಿತಿ ಇದೆ’ ಎಂದು ಹೇಳಿದರು.

‘ಮ್ಯಾನ್‌ ಪವರ್‌ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಏಜೆನ್ಸಿಗಳಿಗೆ ಕೇವಲ 11 ತಿಂಗಳು ಮಾತ್ರ ಸಮಯ ಕೊಡಬೇಕು. ನಂತರ ಬದಲಾಯಿಸಬೇಕು. ಆದರೆ, ಸದ್ಯ 2015ರಲ್ಲಿ ಇರುವ ಏಜೆನ್ಸಿಗಳನ್ನೇ ಮುಂದುವರಿಸಲಾಗಿದೆ. ಇದರಿಂದಾಗಿ, ಅವರು ಕಾರ್ಮಿಕರ ಬಗ್ಗೆ ಕನಿಕರ ತೋರುತ್ತಲೇ ಇಲ್ಲ’ ಎಂದು ಆರೋಪಿಸಿದರು.

‘ಕೋವಿಡ್‌ ಸಂಕಷ್ಟ ಕಾಲದಲ್ಲಿ ಸಾಕಷ್ಟು ದುರಿದರೂ ಸಂಬಳ ಸರಿಯಾಗಿ ನೀಡಲಿಲ್ಲ. ಪ್ರತಿದಿನ ನಸುಕಿನ 5.30ಕ್ಕೇ ಕೆಲಸಕ್ಕೆ ಹಾಜರಾಗಿ ಹಾಜರಿ ನೀಡಲು ಹೇಳುತ್ತಾರೆ. ಆದರೆ, ಮರಳಿ ಮನೆಗೆ ಎಷ್ಟು ಗಂಟೆಗೆ ಹೋಗುತ್ತೇವೆ ಎಂಬುದನ್ನು ಕೇಳುವವರೇ ಇಲ್ಲ. ಮಧ್ಯಾಹ್ನ, ಸಂಜೆ ಯಾವಾಗ ಬೇಕಾದರೂ ಯಾವೆಲ್ಲ ಕೆಲಸಕ್ಕೂ ಕರೆಯುತ್ತಾರೆ. ಒಂದು ಸಮಯ ಇಲ್ಲವೇ ಇಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಮಧ್ಯಾಹ್ನ 2ರ ನಂತರ ಸ್ಥಳಕ್ಕೆ ಬಂದ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಮನವಿ ಪಡೆದರು, 15 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಧರಣಿ ಹಿಂಪಡೆಯಲಾಯಿತು.

ಸಂಘದ ಜಿಲ್ಲಾ ಘಟಕದ ಉ‍ಪಾಧ್ಯಕ್ಷ ಶರಣಪ್ಪ ಇಟಗಿ, ಪ‍್ರಧಾನ ಕಾರ್ಯದರ್ಶಿ ಅನಿಲಕುಮಾರ ಚ‌ಕ್ರ, ಖಜಾಂಚಿ ವೆಂಕಟರೆಡ್ಡಿ, ಸಂಘಟನಾ ಕಾರ್ಯದರ್ಶಿಗಳಾದ ವಿಜಯಕುಮಾರ ಕುಸಮೂರ್ತಿ, ಅರುಣಕುಮಾರ ಸುತ್ತಾರ, ಮಹ್ಮದ್‌ ಗೌಸ್‌, ಶಿವಶರಣಪ್ಪ ನಂದಿಕೂರ, ವಿಠಲ ವಗ್ಗನ, ಮಹೇಶ ಠಾಕೂರ, ಶಿವಪುತ್ರ ಸುತ್ತಾರ, ವಿಶ್ವರಾಧ್ಯ ಗೋಳೆಕರ್‌
ನೇತೃತ್ವ ವಹಿಸಿದ್ದರು.

ಸಂಜೆ ವೇಳೆಗೆ ಸಂಬಳ ಪಾವತಿ
ಕಲಬುರ್ಗಿ:
ಸಂಬಳ ಪಾವತಿಸುವಂತೆ ಜ. 6ರಂದು ಪೌರ ಕಾರ್ಮಿಕರು ಮನವಿ ಸಲ್ಲಿಸಿದ್ದರು. ಫಲವಾಗಿ ಜ. 8ರಂದು ಒಂದು ತಿಂಗಳ ಸಂಬಳ ಮಾತ್ರ ನೀಡಲಾಗಿತ್ತು. ಆದರೆ, ಶನಿವಾರ ನಡೆದ ಬೃಹತ್‌ ಪ್ರತಿಭಟನೆಯ ನಂತರ, ಸಂಜೆ ವೇಳೆ ಉಳಿದ ಎರಡು ತಿಂಗಳ ಸಂಬಳವನ್ನೂ ಗುತ್ತಿಗೆದಾರರು ಪಾವತಿಸಿದ್ದಾರೆ ಎಂದು ಸಂಘದ ಮುಖಂಡರು ತಿಳಿಸಿದರು.

ಇಷ್ಟು ವರ್ಷದ ದುಡಿಮೆಯಲ್ಲಿ ಒಮ್ಮೆಯೂ ನಾವು ಕೇಳದೆಯೇ ಸಂಬಳ ನೀಡಿದ ಉದಾಹರಣೆ ಇಲ್ಲ. ಈಗ ಕೊಟ್ಟರೆ ಇನ್ನು ನಾಲ್ಕು ತಿಂಗಳು ಮತ್ತೆ ಹಿಡಿದಿಟ್ಟುಕೊಳ್ಳುತ್ತಾರೆ. ಜಿಲ್ಲಾಧಿಕಾರಿಗಳೇ ಮುಂದಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT