ಪಾಲಿಕೆಯಲ್ಲಿ ‘ಅಧಿಕಾರ’ದ ಜಟಾಪಟಿ

7
ಜುಲೈ 5ರ ಸಾಮಾನ್ಯ ಸಭೆಯ ಮೇಲೂ ತೂಗುಗತ್ತಿ; ಸರ್ಕಾರದ ಮಾರ್ಗದರ್ಶನ ಕೋರಿಕೆ

ಪಾಲಿಕೆಯಲ್ಲಿ ‘ಅಧಿಕಾರ’ದ ಜಟಾಪಟಿ

Published:
Updated:
ಶರಣಕುಮಾರ ಮೋದಿ

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ‘ಅಧಿಕಾರ’ದ ಜಟಾಪಟಿ ನಡೆಯುತ್ತಿದೆ. ‘ಬೋನಸ್‌ ಅವಧಿ’ಯಲ್ಲಿರುವ ಮೇಯರ್‌ ಅವರ ಅಧಿಕಾರ ವ್ಯಾಪ್ತಿ ವಿಷಯದ ಚೆಂಡು ಈಗ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಂಗಳದಲ್ಲಿದೆ.

ಮೇಯರ್‌ ಶರಣಕುಮಾರ ಮೋದಿ ಅವರ ಅವಧಿ ಏಪ್ರಿಲ್‌ ತಿಂಗಳಲ್ಲಿಯೇ ಮುಗಿಯಬೇಕಿತ್ತು. ಆದರೆ, ಅವರು ‘ಕಾನೂನಿನ ಕೃಪೆ’ಯಿಂದಾಗಿ ಮುಂದುವರೆದಿದ್ದಾರೆ. ಕಲಬುರ್ಗಿ ಮಹಾನಗರ ಪಾಲಿಕೆಯ ಪ್ರಸಕ್ತ ಆಡಳಿತ ಮಂಡಳಿಯ ಕೊನೆಯ ಹಾಗೂ 5ನೇ ಅವಧಿಯ ಮೇಯರ್‌ ಹಾಗೂ ಉಪ ಮೇಯರ್‌ ಎರಡೂ ಸ್ಥಾನಗಳನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ರಾಜ್ಯ ಸರ್ಕಾರ ಮುಂಚಿತವಾಗಿಯೇ ಅಧಿಸೂಚನೆ ಹೊರಡಿಸಿದೆ.

ಎರಡೂ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸಿರುವ ಕ್ರಮವನ್ನು ಪಾಲಿಕೆಯ ಕೆಲವು ಸದಸ್ಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಪುನರ್‌ ಪರಿಶೀಲಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.

ಮೇಯರ್‌ ಮೀಸಲಾತಿ ನಿಗದಿ ವಿವಾದ ನ್ಯಾಯಾಲಯ ಮೆಟ್ಟಿಲೇರಿದರೆ ಅದು ಇತ್ಯರ್ಥಗೊಂಡು ಹೊಸ ಮೇಯರ್‌ ಚುನಾವಣೆ ನಡೆಯುವವರೆಗೂ ಹಾಲಿ ಮೇಯರ್‌ ಹುದ್ದೆಯಲ್ಲಿ ಮುಂದುವರೆಯಬಹುದು ಎಂದು ಕಾನೂನು ಹೇಳುತ್ತದೆ. ಹೀಗಾಗಿ ಮೇಯರ್‌ ಶರಣಕುಮಾರ ಮೋದಿ ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

‘ಸಾಮಾನ್ಯವಾಗಿ ಮೇಯರ್‌ ಅವಧಿ ಕೊನೆಗೊಂಡ ಮರುದಿನವೇ ಜಿಲ್ಲಾಧಿಕಾರಿ ಇಲ್ಲವೆ ಪ್ರಾದೇಶಿಕ ಆಯುಕ್ತರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದರು. ಆದರೆ, ಮೀಸಲಾತಿ ವಿವಾದ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೇಯರ್‌ ಮುಂದುವರಿಕೆಯ ಸ್ಥಿತಿ ನಿರ್ಮಾಣಗೊಂಡಿದೆ’ ಎನ್ನುತ್ತಾರೆ ಅಧಿಕಾರಿಗಳು.

ಏತನ್ಮಧ್ಯೆ ಶರಣಕುಮಾರ ಅವರು ಜುಲೈ 5ರಂದು ಪಾಲಿಕೆಯ ಸಾಮಾನ್ಯ ಸಭೆ ಕರೆದಿದ್ದಾರೆ.

‘ಮೇಯರ್ ಅವರ ಅವಧಿ ಪೂರ್ಣಗೊಂಡಿದ್ದು, ಈಗ ಅವರು ವಿಸ್ತರಣೆಯ ಅವಧಿಯಲ್ಲಿದ್ದಾರೆ. ಈ ಅವಧಿಯಲ್ಲಿ ಅವರಿಗೆ ಇರುವ ಅಧಿಕಾರ ವ್ಯಾಪ್ತಿ ಏನು? ಮೇಯರ್‌ಗೆ ಇರುವ ಎಲ್ಲ ಅಧಿಕಾರವನ್ನು ಅವರು ಈ ಅವಧಿಯಲ್ಲಿಯೂ ಚಲಾಯಿಸಬಹುದೇ? ಸಾಮಾನ್ಯ ಸಭೆ ಕರೆದು ನಿರ್ಣಯಗಳನ್ನು ಕೈಗೊಳ್ಳಬಹುದೇ? ಎಂದು ವಿವರಣೆ ಕೋರಿ ಮಹಾನಗರ ಪಾಲಿಕೆಯ ಕಮಿಷನರ್‌ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ಅದಕ್ಕೆ ಇನ್ನೂ ಉತ್ತರ ಬಂದಿಲ್ಲ’ ಎನ್ನುವುದು ಪಾಲಿಕೆಯ ಅಧಿಕಾರಿಗಳ ಮಾಹಿತಿ.

‘ಜುಲೈ 5ರ ಸಾಮಾನ್ಯ ಸಭೆ ನಡೆಯುತ್ತದೆಯೋ ಇಲ್ಲವೊ ಎಂಬುದು ಹಾಗೂ ಶರಣಕುಮಾರ ಮೋದಿ ಅವರ ಅಧಿಕಾರ ವ್ಯಾಪ್ತಿ ಸರ್ಕಾರ ನೀಡಲಿರುವ ಸ್ಪಷ್ಟನೆಯನ್ನು ಅವಲಂಬಿಸಿದೆ’ ಎಂದು ಪಾಲಿಕೆ ಸದಸ್ಯರೊಬ್ಬರು ಹೇಳಿದರು.

ಇನ್ನೂ ಆಗಿಲ್ಲ ಬಜೆಟ್‌ ಮಂಡನೆ

ಪ್ರಸಕ್ತ ಆರ್ಥಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಪಾಲಿಕೆಯ ಬಜೆಟ್ ಇನ್ನೂ ಮಂಡನೆಯಾಗಿಲ್ಲ.  ಪ್ರತಿವರ್ಷ ಮಾರ್ಚ್‌ 31ರ ಒಳಗಾಗಿ ಬಜೆಟ್‌ ಮಂಡಿಸಿ, ಸಾಮಾನ್ಯ ಸಭೆಯ ಅನುಮೋದನೆ ಪಡೆಯುವುದು ವಾಡಿಕೆ. ಆದರೆ, ಈ ಬಾರಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇತ್ತು. ಸಾಮಾನ್ಯ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ.

‘ಸಾಮಾನ್ಯ ಸಭೆಯಲ್ಲಿ ಘಟನೋತ್ತರ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ವೆಚ್ಚ ಮಾಡಲು ಮೇಯರ್‌ ಅವರಿಂದ ಅನುಮತಿ ಪಡೆಯಲಾಗಿದೆ. ಹೀಗಾಗಿ ನಿತ್ಯದ ಚಟುವಟಿಕೆಗಳಿಗೆ ಯಾವುದೇ ಆರ್ಥಿಕ ತೊಂದರೆ ಇಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಮೇಯರ್‌ ಶರಣಕುಮಾರ ಮೋದಿ ಹೇಳುವುದೇ ಬೇರೆ, ‘ತುರ್ತು ಕೆಲಸ ಹಾಗೂ ವೇತನಕ್ಕಷ್ಟೇ ನಾನು ಪತ್ರ ನೀಡಿದ್ದೇನೆ. ಬಜೆಟ್‌ ಮಂಡನೆಯಾಗಿ ಅನುಮೋದನೆ ಪಡೆಯಬೇಕು’ ಎಂದು ಅವರು ಹೇಳುತ್ತಾರೆ.

ವೆಬ್‌ಸೈಟ್‌ನಲ್ಲಿ ಮೇಯರ್‌ ಚಿತ್ರಕ್ಕೆ ಕೋಕ್‌!

ಮಹಾನಗರ ಪಾಲಿಕೆಯ www.gulbargacity.mrc.gov.in ವೆಬ್‌ಸೈಟ್‌ನ ಡ್ಯಾಶ್‌ಬೋರ್ಡ್‌ನಲ್ಲಿಯ ಮೇಯರ್‌ ಶರಣಕುಮಾರ ಮೋದಿ ಅವರ ಚಿತ್ರ ತೆಗೆದುಹಾಕಲಾಗಿದೆ. ಅಲ್ಲಿ ಕಮಿಷನರ್‌ ರಘುನಂದನ ಮೂರ್ತಿ ಅವರ ಚಿತ್ರ ಇದೆ.
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !