ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಾರ್ಡ್‌ನಲ್ಲೂ ಕರ್ತವ್ಯ ಮಾಡಿದೆ!: ಸೋಂಕು ದೃಢಪಟ್ಟಿದ್ದ ವೈದ್ಯೆಯ ಮಾತು

Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ಮಂಡ್ಯ: ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಲೇ ನಾನು ಕೋವಿಡ್‌ ಪೀಡಿತಳಾದೆ. ಸಾಮಾನ್ಯ ಮನುಷ್ಯರಂತೆ ನನಗೂ ಆರಂಭದಲ್ಲಿ ಭಯವಾಗಿತ್ತು. ನಂತರ ದಿಟ್ಟವಾಗಿ ರೋಗ ಎದುರಿಸಿ ಕೋವಿಡ್‌ ಸೋಲಿಸಿ ಬಂದೆ. ಈ ಕೋವಿಡ್‌ ದೈಹಿಕವಾಗಿ ತೊಂದರೆ ಕೊಡುವುದಕ್ಕಿಂತಲೂ ಮಾನಸಿಕವಾಗಿ ಹೆಚ್ಚು ಕಾಡುತ್ತದೆ. ಹತ್ತಿರದವರು, ಅಕ್ಕಪಕ್ಕದವರು ನನ್ನನ್ನು, ನನ್ನ ಕುಟುಂಬ ಸದಸ್ಯರನ್ನು ನೋಡಿದ ರೀತಿ ಕಂಡು ಬೇಸರವಾಯಿತು. ರೋಗವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ, ಪಾಸಿಟಿವ್‌ ಬಂದಾಗ ಎಲ್ಲರಿಗೂ ಮುಕ್ತವಾಗಿ ತಿಳಿಸಿದೆ, ಕೋವಿಡ್‌ ಗೆದ್ದು ಬಂದ ವಿಚಾರವನ್ನೂ ಹಂಚಿಕೊಂಡೆ.

ನನಗೆ ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ತಿಳಿದ ಕೂಡಲೇ ನನಗಿಂತ, ನನ್ನ ಸಂಪರ್ಕಕ್ಕೆ ಬಂದವರ ಬಗ್ಗೆ ಹೆಚ್ಚು ಯೋಚಿಸಿದೆ. ನನ್ನದು ಅವಿಭಕ್ತ ಕುಟುಂಬವಾದ ಕಾರಣ ಕುಟುಂಬ ಸದಸ್ಯರ ಬಗ್ಗೆ ಹೆಚ್ಚು ಚಿಂತೆ ಮಾಡಿದೆ. ಎಲ್ಲರ ವರದಿ ನೆಗೆಟಿವ್‌ ಬಂದಾಗ ನಿರಾಳವಾದೆ.

ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವಾಗಲೂ ನಾನು ನನ್ನ ಕರ್ತವ್ಯ ಮಾಡಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯೊಬ್ಬರ ಮಗುವನ್ನು ಪ್ರೀತಿಯಿಂದ ಕಾಳಜಿ ಮಾಡಿದೆ. ಆ ಮಗು ವೆಂಟಿಲೇಟರ್‌ಗೂ ಹೋಗಿತ್ತು, ಬದುಕುವುದು ಕಷ್ಟ ಎನ್ನುವ ಅಭಿಪ್ರಾಯವೂ ಇತ್ತು. ಆ ಮಗು ವೆಂಟಿಲೇಟರ್‌ನಿಂದ ಹೊರಬಂದು, ಆರೋಗ್ಯವಾದಾಗ ಬಹಳ ಸಂತಸಪಟ್ಟೆ.

ಮನುಷ್ಯರಲ್ಲಿ ಮಾನವೀಯತೆ ಎಷ್ಟಿದೆ ಎಂಬುದನ್ನು ಈ ರೋಗ ಸಮಾಜಕ್ಕೆ ತೋರಿಸುತ್ತಿದೆ. ಕೋವಿಡ್‌ ಬಂದಿದೆ ಎಂಬ ಕಾರಣಕ್ಕೆ ರೋಗಿಗಳನ್ನು, ಅವರ ಸಂಬಂಧಿಕರನ್ನು ಕಣ್ಣಿಂದ ನೋಡುವುದೂ ತಪ್ಪು ಎಂಬಂತೆ ಜನರು ನಡೆದುಕೊಳ್ಳುತ್ತಿದ್ದಾರೆ. ಕೋವಿಡ್‌ ವಾರಿಯರ್‌ ಆದ ನನಗೇ ಹೀಗನ್ನಿಸಿದರೆ ಸಾಮಾನ್ಯರಿಗೆ ಹೇಗನ್ನಿಸಿರಬೇಡ? ಎಚ್ಚರಿಕೆ, ಅಂತರ ಕಾಯ್ದುಕೊಂಡರೆ ಸಾಕು. ರೋಗಿಗಳನ್ನು ಅನುಮಾನದಿಂದ ನೋಡುವುದನ್ನು ಬಿಡಬೇಕು.

ಆಸ್ಪತ್ರೆಯ ಸಿಬ್ಬಂದಿ ಬಹಳ ಚೆನ್ನಾಗಿ ನೋಡಿಕೊಂಡರು. ಯಾವುದೇ ಕೊರತೆಯಾಗಲಿಲ್ಲ. ಊಟ, ಕುಡಿಯುವ ನೀರು ಇತರ ಸೌಲಭ್ಯಗಳು ಚೆನ್ನಾಗಿದ್ದವು.
– ಡಾ.ಬಿ.ಎನ್‌.ತಾರಾ ಶ್ರೀನಿವಾಸ್‌, ವೈದ್ಯಾಧಿಕಾರಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT