ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 29,500 ಡೋಸ್ ಕೋವಿಶೀಲ್ಡ್ ಲಸಿಗೆ ಸಂಗ್ರಹ

ಬೆಂಗಳೂರಿನಿಂದ ಪೊಲೀಸ್‌ ಭದ್ರತೆಯಲ್ಲಿ ತರಲಾದ ಲಸಿಕೆಗಳು, ಕ.ಕ. ಭಾಗದ ನಾಲ್ಕು ಜಿಲ್ಲೆಗಳಿಗೆ ಹಂಚಿಕೆ
Last Updated 14 ಜನವರಿ 2021, 16:41 IST
ಅಕ್ಷರ ಗಾತ್ರ

ಕಲಬುರ್ಗಿ: ಮೊದಲ ಹಂತದಲ್ಲಿ ಕೋವಿಡ್ ಸೇನಾನಿಗಳಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ 29,500 ಡೋಸ್‌ ಕೋವಿಶೀಲ್ಡ್ ಲಸಿಕೆಗಳನ್ನು ಗುರುವಾರ ನಗರಕ್ಕೆ ತರಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಸೇನಾನಿಗಳು ಇವುಗಳನ್ನು ಜ. 16ರಿಂದಲೇ ನೀಡಲಾಗುತ್ತದೆ.

ಇದರಲ್ಲಿ ಕಲಬುರ್ಗಿ ಜಿಲ್ಲೆಗೆ 12 ಸಾವಿರ ಡೋಸ್, ರಾಯಚೂರು ಜಿಲ್ಲೆಗೆ 9 ಸಾವಿರ ಡೋಸ್, ಬೀದರ್ ಜಿಲ್ಲೆಗೆ 5,500 ಡೋಸ್ ಮತ್ತು ಯಾದಗಿರಿ ಜಿಲ್ಲೆಗೆ 3 ಸಾವಿರ ಡೋಸ್ ಹಂಚಿಕೆಯಾಗಿವೆ. ಗುರುವಾರ ಸಂಜೆಯೇ ಆಯಾ ಜಿಲ್ಲಾ ಕೇಂದ್ರಗಳಿಗೆ ತಲುಪಲಿವೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ವಿಶೇಷ ವಾಹನದಲ್ಲಿ ಪೊಲೀಸ್‌ ಭದ್ರತೆಯೊಂದಿಗೆ ಕೋವಿಶೀಲ್ಡ್ ಲಸಿಕೆಗಳನ್ನು ತರಲಾಯಿತು. ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ‘ಕೋಲ್ಡ್ ರೂಮ್’ನಲ್ಲಿ ದಾಸ್ತಾನು ಮಾಡಲಾಯಿತು. ಬೆಂಗಳೂರಿನ ಪೊಲೀಸರು ಯಾದಗಿರಿ ಜಿಲ್ಲೆಯ ಗಡಿಯವರೆಗೂ ಲಸಿಕೆ ಇದ್ದ ವಾಹನಕ್ಕೆ ಭದ್ರತೆ ಒದಗಿಸಿದರು. ಅಲ್ಲಿಂದ ಕಲಬುರ್ಗಿ ಪೊಲೀಸರ ಭದ್ರತೆ ಜವಾಬ್ದಾರಿ ನಿರ್ವಹಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಹಾಗೂ ಹಿರಿಯ ಅಧಿಕಾರಿಗಳು ಲಸಿಕೆಗಳನ್ನು ಸ್ವೀಕರಿಸಿದರು.

ಕೋವಿಡ್ ವಿರುದ್ಧದ ಮುಂಚೂಣಿ ಹೋರಾಟಗಾರರಾದ ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಲಸಿಕೆ ಫಲಾನುಭವಿಗಳಾಗಿದ್ದಾರೆ. ಜಿಲ್ಲೆಯಲ್ಲಿ 21,774 ಸೇನಾನಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಲಾಗಿದೆ.

ನಾಳೆಯಿಂದಲೇ ಚುಚ್ಚುಮದ್ದು: ನಗರದ ಜಿಲ್ಲಾ ಆಸ್ಪತ್ರೆ, ಆರು ತಾಲ್ಲೂಕು ಅಸ್ಪತ್ರೆಗಳು ಹಾಗೂ ಗೊಬ್ಬೂರು–ಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಅಂದರೆ ಒಟ್ಟು 800 ಮಂದಿಗೆ ಜ. 16ರಂದು ಚುಚ್ಚುಮದ್ದು ನೀಡಲಾಗುತ್ತಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 137 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ಹಾಕಲಾಗುವುದು. ಎರಡನೇ ಹಂತದಲ್ಲಿ ಇನ್ನೂ 12 ಸಾವಿರ ಡೋಸ್ ಬರಲಿವೆ. ಜ.18ರಿಂದ ಇನ್ನುಳಿದ ಸಂಸ್ಥೆಗಳಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಲಾಗುತ್ತದೆ ಎಂದು ಡಿಎಚ್‌ಒ ಡಾ.ರಾಜಶೇಖರ ಮಾಲಿ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ದಾದಿಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿನ ಔಷಧಾಲಯಗಳ ಸಿಬ್ಬಂದಿ (ಫಾರ್ಮಸಿಸ್ಟ್), ಡಾಟಾ ಎಂಟ್ರಿ ಆಪರೇಟರ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 21,774 ಆರೋಗ್ಯ ಕಾರ್ಯಕರ್ತೆಯರಿಗೆ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ಅವರು ತಿಳಿಸಿದರು.

ಕೋವಿಡ್ ಲಸಿಕೆ ಹಾಕಲು 155 ತಂಡ ರಚಿಸಲಾಗಿದ್ದು, 775 ಸಿಬ್ಬಂದಿ ನಿಯೋಜಿಸಲಾಗಿದೆ. ದೇಶದಾದ್ಯಂತ ನಡೆಯುವ ಈ ಕಾರ್ಯಕ್ರಮಕ್ಕೆ ಶನಿವಾರ 11 ಗಂಟೆಗೆ ಪ್ರಧಾನಮಂತ್ರಿ ಮೋದಿ ಅವರು ನವದೆಹಲಿಯಲ್ಲಿ ಚಾಲನೆ ನೀಡಲಿದ್ದು, ನಂತರ ಜಿಲ್ಲೆಯ 8 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT