ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಜನರಿಗೆ ನಿಖರ ಮಾಹಿತಿ ನೀಡಿ

ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ನಿರಾಣಿ ಸೂಚನೆ
Last Updated 8 ಮೇ 2021, 5:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಿದ್ಧಪಡಿಸಿದ ಬೆಡ್, ವೆಂಟಿಲೇಟರ್, ಆಮ್ಲಜನಕ ಮುಂತಾದ ಆರೋಗ್ಯ ಸೇವಾ ಲಭ್ಯತೆ ಕುರಿತು ನಿಖರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ನಗರದಲ್ಲಿ ಶುಕ್ರವಾರ ಕೋವಿಡ್ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ‘ಎರಡನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ’ ಎಂದು ಕೋರಿದರು.

‘ಪ್ರತಿದಿನ ಕೋವಿಡ್ ಬುಲೆಟಿನ್‌ನಲ್ಲಿ ಪ್ರಕಟಿಸುವ ಅಂಕಿ– ಅಂಶಗಳ ವಿಚಾರವಾಗಿ ಸಾರ್ವಜನಿಕರಿಗೆ ಪೂರಕವಾದ ಮಾಹಿತಿ ನೀಡಲಾಗುತ್ತಿಲ್ಲ’ ಎಂದು ಕೆಲವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ‘ನಿಖರ ಮಾಹಿತಿ ನೀಡುವುದರಿಂದ ಜನರಲ್ಲಿ ತುಸು ನಿರಾಳ ಭಾವ ಮೂಡುತ್ತದೆ’ ಎಂದರು.‌

‘ಪ್ರಸ್ತುತ ರೆಮ್‍ಡಿಸಿವಿರ್ ಚುಚ್ಚುಮದ್ದು ಕೊರತೆ ಇದೆ. ಈಗಾಗಲೇ 200 ವೈಲ್ ರೆಮ್‍ಡಿಸಿವಿರ್ ಇಂಜಕ್ಷನ್‌ಗಳು ಜಿಲ್ಲೆಗೆ ಬಂದಿವೆ. ಜನರ ಆರೋಗ್ಯ ದೃಷ್ಟಿಯಿಂದ ಬೇಡಿಕೆ ತಕ್ಕಂತೆ ಕೂಡಲೇ ಹೆಚ್ಚಿನ ಲಸಿಕೆ ನೀಡಲಾಗುವುದು’ ಎಂದರು.

‘ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮೀಣ ಭಾಗದಲ್ಲೂ ವ್ಯಾಕ್ಸಿನ್ ನೀಡುವ ಅಗತ್ಯವಿದೆ. ಸದ್ಯದಲ್ಲೇ ಆಮ್ಲಜನಕ ವಾರ್‌ ರೂಂ ರಚಿಸಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಈ ವಾರ್ ರೂಂ ಕಾರ್ಯನಿರ್ವಹಿಸಲಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

‘ಪ್ರತಿ 100 ಮೀಟರ್ ವ್ಯಾಪ್ತಿಯಲ್ಲಿ 5 ಪಾಸಿಟಿವ್ ಪ್ರಕರಣಗಳು ದೃಢಪಟ್ಟರೆ, ಅದನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಲಾಗುವುದು’ ಎಂದರು.‌

‘ರೆಮ್‍ಡಿಸಿವಿರ್ ಅಕ್ರಮ ಮಾರಾಟ ದಂಧೆ ಕುರಿತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸುತ್ತಿದೆ. ಈಗಾಗಲೇ ಕಾಳಸಂತೆಯಲ್ಲಿ ಕ್ರಿಯಾಶೀಲರಾದವರನ್ನು ಬಂಧಿಸಿದ್ದು, ಮೂರು ಪ್ರಕರಣ ದಾಖಲಿಸಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ ತಿಳಿಸಿದರು.

ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಪ್ರಿಯಾಂಕ್‌ ಖರ್ಗೆ, ಸುಭಾಷ ಗುತ್ತೇದಾರ, ಡಾ.ಅವಿನಾಶ್ ಜಾಧವ, ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಶ್ ಶಶಿ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಆರೋಗ್ಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT