ಭಾನುವಾರ, ಜೂನ್ 20, 2021
30 °C
ಶುಕ್ರವಾರ ರಾತ್ರಿ ಜಿಮ್ಸ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದ ಘಟನೆ

ವೈದ್ಯರ ಮೇಲೆ ಹಲ್ಲೆ; ರಕ್ಷಣೆಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಕೋವಿಡ್‌ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಸೋಂಕಿತರ ಕಡೆಯವರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.

ಜಿಮ್ಸ್‌ನಲ್ಲಿ ಈಚೆಗೆ ಮೃತಪಟ್ಟ ವ್ಯಕ್ತಿಯ ಕಡೆಯವರೇ, ಚಿಕಿತ್ಸೆ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

‌‘ಹಲ್ಲೆ ಮಾಡಿದ ಬಗ್ಗೆ ಜಿಮ್ಸ್ ನಿರ್ದೇಶಕರ ಮುಂದೆ ದೂರು ನೀಡಿದರೂ, ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ವಿಷಯ ವಾಟ್ಸ್‌ಆ್ಯಪ್‌ ಮೂಲಕ ಜಿಲ್ಲಾಧಿಕಾರಿ ಅವರನ್ನು ತಲುಪಿದೆ. ಸ್ವತಃ ಜಿಲ್ಲಾಧಿಕಾರಿ ಅವರೇ, ಪೊಲೀಸ್‌ ಅಧಿಕಾರಿಗಳಿಗೆ ಸಂದೇಶ ಕಳಿಸಿದ್ದು ಪರಿಶೀಲಿಸುವಂತೆ ತಿಳಿಸಿದ್ದಾರೆ. ಆಸ್ಪತ್ರೆಯ ಸಿ.ಸಿ.ಟಿ.ವಿ ಕ್ಯಾಮೆರಾ ತಪಾಸಣೆ ಮಾಡುವಂತೆಯೂ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಆದರೆ, ಈ ಬಗ್ಗೆ ಯಾರೂ ದೂರು ದಾಖಲಿಸಿಲ್ಲ.

ಜಿಮ್ಸ್‌ ಆಸ್ಪತ್ರೆ ಈಗ ಕೋವಿಡ್‌ ಸೋಂಕಿತರಿಂದ ತುಂಬಿ ಹೋಗಿದೆ. ದಿನದಿಂದ ದಿನಕ್ಕೆ ವೈದ್ಯರ ಮೇಲೆ ಹೊರೆ ಹೆಚ್ಚುತ್ತಲೇ ಇದೆ. ರಾತ್ರಿ ಪಾಳಿಯಲ್ಲಿ ಕೆಲವೊಮ್ಮೆ ಒಬ್ಬೊಬ್ಬರೇ ವೈದ್ಯರು ಕೆಲಸ ಮಾಡಬೇಕಾದ ಅನಿವಾರ್ಯವೂ ಬಂದಿದೆ. ಆದರೆ, ಒಳಗಡೆ ಸೂಕ್ತ ಭದ್ರತಾ ಸಿಬ್ಬಂದಿ ಕೂಡ ಇಲ್ಲ ಎನ್ನುವುದು ಮೂಲಗಳ ಮಾಹಿತಿ.

‘ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಇದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡುತ್ತಾರೆ. ಇನ್ನೂ ಹೆಚ್ಚು ವೈದ್ಯರು, ಸ್ಟಾಫ್‌ ನರ್ಸ್‌, ಬೆಡ್‌ಗಳ ಅಗತ್ಯವಿದೆ. ಅದು ಇಲ್ಲದ ಕಾರಣ ಹಲ್ಲೆಗಳು ನಡೆಯುತ್ತಿವೆ. ವೈದ್ಯರು ಸುರಕ್ಷಿತವಾಗಿದ್ದರೆ ಅಲ್ಲವೇ ಚಿಕಿತ್ಸೆ ನೀಡಲು ಸಾಧ್ಯ’ ಎಂದು ವೈದ್ಯಕೀಯ ಸಿಬ್ಬಂದಿ ಪರಿಸ್ಥಿತಿ ಹೇಳಿಕೊಂಡರು.

‘ದಿನೇ ದಿನೇ ಸೋಂಕಿತರು ಹಿಂಡುಹಿಂಡಾಗಿ ಬರುತ್ತಿದ್ದಾರೆ. ನಾವು ಕೂಡ ಅತ್ಯಂತ ಮುಂಜಾಗ್ರತಾ ಕ್ರಮ ವಹಿಸಿಯೇ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಮುಂಚೆ 20–25 ಮಂದಿಯನ್ನು ತಪಾಸಣೆ ಮಾಡುತ್ತಿದ್ದವರು ಈಗ ನೂರು ಮಂದಿಗೆ ಚಿಕಿತ್ಸೆ ನೀಡುವ ಸ್ಥಿತಿ ಇದೆ. ಹೀಗಿದ್ದಾಗ, ಚಿಕಿತ್ಸೆ ನೀಡುವ ಸಮಯದಲ್ಲಿ ತುಸು ವ್ಯತ್ಯಾಸ ಅನಿವಾರ್ಯ. ಪಿಪಿಇ ಕಿಟ್‌ನಲ್ಲಿ ಎಂಟು, ಹತ್ತು ತಾಸು ಚಿಕಿತ್ಸೆ ನೀಡುವ ಕಷ್ಟ ಏನೆಂದು ಸೋಂಕಿತರು ಅರ್ಥ ಮಾಡಿಕೊಳ್ಳುವುದಿಲ್ಲ. ವೈದ್ಯರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದೂ ಜಿಮ್ಸ್‌ ಅಧಿಕಾರಿಯೊಬ್ಬರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.