ಮಂಗಳವಾರ, ಮೇ 18, 2021
23 °C

ತಾಲ್ಲೂಕಿನಲ್ಲಿ 50 ಆಕ್ಸಿಜನ್‌ ಬೆಡ್‌

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್‌ ವ್ಯವಸ್ಥೆ ಹೊಂದಿದ 50 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

‘ಈಗಾಗಲೇ ಅಫಜಲಪುರ ಹಾಗೂ ಸೇಡಂ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸಾ ವಾರ್ಡ್ ತೆರೆಯಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಡೆ ಇನ್ನೂ ಎರಡು ತಾಲ್ಲೂಕು ಆಸ್ಪತ್ರೆಗಳನ್ನು ಶೀಘ್ರ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ಶುಕ್ರವಾರ ಮಾಹಿತಿ ನೀಡಿದರು.

‘ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗ ಬಿಟ್ಟು ಉಳಿದೆಲ್ಲ ವಿಭಾಗಗಳನ್ನೂ ಕೋವಿಡ್‌ ಚಿಕಿತ್ಸೆಗಾಗಿಯೇ ಬಳಸಿಕೊಳ್ಳಲಾಗುವುದು.‌ ಟ್ರಾಮಾ ಕೇರ್‌ ಸೆಂಟರ್‌, ಇಎಸ್‌ಐ ಹಾಗೂ 17 ಖಾಸಗಿ ಆಸ್ಪತ್ರೆಗಳನ್ನು ಈಗಾಗಲೇ ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಮೂರು ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು’ ಎಂದೂ ವಿವರಿಸಿದರು.

‘ಸದ್ಯ ಜಿಲ್ಲೆಯಲ್ಲಿ 131 ವೆಂಟಿಲೇಟರ್‌ ಸಿದ್ಧ ಇವೆ. ಇದರಲ್ಲಿ ಇನ್ನೂ ಹಲವು ಬಳಕೆಯಾಗದೇ ಉಳಿದಿವೆ. ವೆಂಟಿಲೇಟರ್‌ ಅಗತ್ಯವಿದ್ದವರ ಸಂಖ್ಯೆ ಹೆಚ್ಚಾದರೂ ತೊಂದರೆ ಆಗದಂತೆ ಸಿದ್ಧತೆ ಮಾಡಲಾಗಿದೆ. ಪ್ರತಿದಿನ 900 ಆಕ್ಸಿಜನ್‌ ಸಿಲಿಂಡರ್‌ಗಳನ್ನು ತಯಾರಿಸಲಾಗುತ್ತಿದೆ. ಅಷ್ಟೇ ಪ್ರಮಾಣದ ಸಿಲಿಂಡರ್‌ಗಳು ಬಳಕೆಯಾಗುತ್ತಿವೆ. ಹೆಚ್ಚುವರಿ ಸಿಲಿಂಡರ್‌ಗಳನ್ನು ಬಳ್ಳಾರಿಯಿಂದ ತರಿಸಿಕೊಳ್ಳಲು ಸಿದ್ಧತೆ ನಡೆದಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಕಿ –ಅಂಶ ಮರೆಮಾಚಲು ಬರುವುದಿಲ್ಲ: ಸೋಂಕಿತರ ಅಂಕಿ– ಅಂಶ ಮರೆಮಾಚಲು ಬರುವುದಿಲ್ಲ. ಜಿಲ್ಲಾ ಬುಲೆಟಿನ್‌ನಲ್ಲಿ ಪ್ರತಿ ದಿನದ ಸಂಜೆ 5 ಗಂಟೆಯವರೆಗಿನ ವರದಿಗಳನ್ನು ನೀಡುತ್ತೇವೆ. ಆದರೆ, ಸರ್ಕಾರದ ಪೋರ್ಟಲ್‌ನಲ್ಲಿ 24 ಗಂಟೆಯೂ ಮಾಹಿತಿ ಅಪ್‌ಲೋಡ್‌ ಆಗುತ್ತಿರುತ್ತದೆ. ಹಾಗಾಗಿ, ಜಿಲ್ಲಾ ಆರೋಗ್ಯ ಬುಲೆಟಿನ್‌ಗಿಂತ ಪೋರ್ಟಲ್‌ನಲ್ಲಿ ಹೆಚ್ಚಿನ ಸಂಖ್ಯೆ ಕಂಡುಬರುವುದು ಸಹಜ. ಇದನ್ನು ಐಸಿಎಂಆರ್‌ ಮೂಲಕವೇ ನೀಡಲಾಗುತ್ತಿದೆ’ ಎಂದೂ ಸ್ಪಷ್ಟಪಡಿಸಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಹುಪಾಲು ಸೋಂಕಿತರು ರೆಮ್‌ ಡಿಸಿವಿರ್‌ ಇಂಜೆಕ್ಷನ್‌ ಬೇಕೆಂದು ಪಡೆಯುತ್ತಿದ್ದಾರೆ. ಇದು ತುಂಬ ಸೀರಿಯಸ್‌ ಇದ್ದವರಿಗೆ ಮಾತ್ರ ಕೊಡುವ ಇಂಜಕ್ಷನ್‌. ಎಲ್ಲರಿಗೂ ಕೊಡುವ ಅಗತ್ಯವಿಲ್ಲ. ಜಿಮ್ಸ್‌ನಲ್ಲಿ ಇನ್ನೂ 248 ರೆಮ್‌ ಡಿಸಿವಿಆರ್‌ ಇಂಜೆಕ್ಷನ್ ಲಭ್ಯ ಇವೆ. ಖಾಸಗಿ ಮೆಡಿಕಲ್‌ಗಳಿಂದ 150 ಡೋಸ್ ಸಂಗ್ರಹಿಸಲಾಗಿದೆ. ಇದರ ಕೊರತೆ ಇಲ್ಲ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.