ಮಂಗಳವಾರ, ಸೆಪ್ಟೆಂಬರ್ 21, 2021
21 °C
ನಿತ್ಯ 10 ಸಾವಿರ ಡೋಸ್ ಲಸಿಕೆ ಪೂರೈಕೆ; ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾದ ಲಸಿಕಾಕರಣ

ಕೋವಿಡ್ ಲಸಿಕೆ; ಆಮೆಗತಿಯ ಸಾಧನೆ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾದಿಂದಾಗಿ ಇಡೀ ದೇಶದಲ್ಲೇ ಮೊದಲ ಸಾವು ಸಂಭವಿಸಿದ್ದು ಕಲಬುರ್ಗಿ ಜಿಲ್ಲೆಯಲ್ಲಿ. ಎರಡನೇ ಅಲೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಧಿಕ ಸಾವುಗಳು ಸಂಭವಿಸಿದ್ದು ಸಹ ಇಲ್ಲೇ. ಆದರೂ, ಕೊರೊನಾ ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡುವಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡುತ್ತಿದೆ.

ಜಿಲ್ಲೆಯಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಇದ್ದು, ಅಂದಾಜು 20 ಲಕ್ಷಕ್ಕೂ ಅಧಿಕ ಜನರು ಲಸಿಕೆ ಪಡೆಯುವ ಅರ್ಹತೆ ಹೊಂದಿದ್ದಾರೆ. ಆದರೆ, ಮೊದಲ ಡೋಸ್‌ ಪಡೆದವರ ಸಂಖ್ಯೆಯೂ ಶೇ 30 ದಾಟಿಲ್ಲ. ಇದರಿಂದಾಗಿ ಮತ್ತೊಂದು ಅಲೆಯು ಬಂದರೆ ಅವರನ್ನು ಕೋವಿಡ್‌ನಿಂದ ಕಾಪಾಡುವುದು ಹೇಗೆ ಎಂಬ ಚಿಂತೆ ಎದುರಾಗಿದೆ. ಮೊದಲಿನಿಂದಲೂ ಜಿಲ್ಲೆಗೆ ಲಭ್ಯವಿರುವಷ್ಟು ಲಸಿಕೆ ಸಿಗುತ್ತಿಲ್ಲ. ಹೀಗಾಗಿ, ಕಾಲಮಿತಿಯೊಳಗೆ ಸಾರ್ವತ್ರಿಕ ಲಸಿಕೆಯನ್ನು ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

ಜಿಮ್ಸ್ ಆಸ್ಪತ್ರೆ, ಇಎಸ್‌ಐಸಿ ಆಸ್ಪತ್ರೆ, ನಗರದಲ್ಲಿರುವ ನಗರ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲೆಯಲ್ಲಿರುವ 83 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ, ನಿತ್ಯ ಸರಾಸರಿ ಜಿಲ್ಲೆಗೆ ಬರುವುದೇ 10 ಸಾವಿರ ಡೋಸ್ ಲಸಿಕೆ. ಅದರಲ್ಲೂ ಆದ್ಯತೆಯ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ, ಮುಂಚೂಣಿ ಕೊರೊನಾ ವಾರಿಯರ್‌ಗಳಿಗೆ ನೀಡಬೇಕಿರುವುದರಿಂದ ಸಾರ್ವತ್ರಿಕ ವಾಗಿ ನೀಡಲು ಅಗತ್ಯವಿರುವಷ್ಟು ಲಸಿಕೆ ಲಭ್ಯವಾಗುತ್ತಿಲ್ಲ. ಏಪ್ರಿಲ್ ತಿಂಗಳಿಂದಲೇ ಜಿಲ್ಲೆಯಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆಯಾದರೂ ಮೊದಲಿಗೆ ವೈದ್ಯರು, ಸ್ಟಾಫ್‌ ನರ್ಸ್‌ಗಳು, ಆಶಾ ಕಾರ್ಯಕರ್ತೆಯರಂತಹ ಮುಂಚೂಣಿಯಲ್ಲಿರುವವರಿಗೆ ನೀಡಲು ಶುರು ಮಾಡಲಾಯಿತು. ಅಲ್ಲದೇ, ಕಡ್ಡಾಯವಾಗಿ ಕೋವಿಡ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿ ಕೊಂಡವರಿಗೆ ಮಾತ್ರ ನೀಡಿದ್ದರಿಂದ ಆರಂಭದಿಂದಲೇ ಜಿಲ್ಲೆಯಲ್ಲಿ ಹೇಳಿ ಕೊಳ್ಳುವಂಥಹ ಸಾಧನೆ ಕಂಡು ಬರಲಿಲ್ಲ. ನಿತ್ಯ 15ರಿಂದ 20 ಸಾವಿರ ಡೋಸ್ ಲಸಿಕೆ ನೀಡಬೇಕಿದ್ದ ಸಂದರ್ಭದಲ್ಲಿ ಕೇವಲ 5 ಸಾವಿರ ಮಾತ್ರ ನೀಡಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 18 ವರ್ಷ ಮೀರಿದ ಎಲ್ಲರಿಗೂ ಉಚಿತ ಲಸಿಕೆಯ ಘೋಷಣೆ ಮಾಡಿದ ಜೂನ್ 21ರ ಬಳಿಕ ನಿತ್ಯ ಜಿಲ್ಲೆಗೆ ಬರುವ ಲಸಿಕೆಯ ಪ್ರಮಾಣ 10 ಸಾವಿರಕ್ಕೆ ಹೆಚ್ಚಾ ಯಿತು. ಆ ನಂತರವಷ್ಟೇ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ನೀಡಲು ಜಿಲ್ಲಾಡಳಿತ ಶುರು ಮಾಡಿತು. ಒಂದು ಬಾರಿ ಮಾತ್ರ ಜಿಲ್ಲೆಯಲ್ಲಿ 38 ಸಾವಿರ ಜನರಿಗೆ ಲಸಿಕೆ ವಿತರಿಸಲಾಗಿದೆ. ಆ ನಂತರ 10ರಿಂದ 12 ಸಾವಿರ ಜನರಿಗೆ ಮಾತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

ಸಮಸ್ಯೆಗೆ ಕಾರಣವೇನು? ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಜಿಲ್ಲಾಡಳಿತ ಲಸಿಕೆಗೆ ಬೇಡಿಕೆ ಇಟ್ಟಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅತಿ ದೊಡ್ಡ ಜಿಲ್ಲೆಯಾದ ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಲಸಿಕೆ ಪ್ರಕ್ರಿಯೆ ನಿಧಾನಗತಿ ಯಲ್ಲಿ ನಡೆಯುತ್ತಿದೆ.

ಜಿಲ್ಲೆಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, ‘ಸರ್ಕಾರ ಈಗ ಜಿಲ್ಲೆಗೆ ಹಂಚಿಕೆ ಮಾಡುತ್ತಿರುವ ಲಸಿಕೆ ಯಾವುದಕ್ಕೂ ಸಾಕಾಗದು. ಇದೇ ರೀತಿ ಮುಂದುವರಿದರೆ ಎಲ್ಲರಿಗೂ ಮೊದಲ ಹಾಗೂ ಎರಡನೇ ಡೋಸ್ ನೀಡ ಬೇಕೆಂದರೆ ತಿಂಗಳುಗಳೇ ಬೇಕಾಗುತ್ತವೆ. ಈಗ ಪೂರೈಕೆ ಮಾಡುತ್ತಿರುವ ಲಸಿಕೆ ಪ್ರಮಾಣವನ್ನು ದುಪ್ಪಟ್ಟು ಮಾಡಿದರೆ ಮಾತ್ರ ಕಾಲಮಿತಿಯಲ್ಲಿ ಎಲ್ಲರಿಗೂ ಕೊಡಬಹುದು’ ಎಂದರು.

box-

ಲಸಿಕೆ ಖರೀದಿಗೆ ಏನು ಅಡ್ಡಿ

ಎಲ್ಲರಿಗೂ ಲಭ್ಯವಿರುವಷ್ಟು ಲಸಿಕೆ ಉತ್ಪಾದಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ತಕ್ಷಣ ಇತರ ಕಂಪನಿಗಳಿಗೆ ಔಷಧಿ ಉತ್ಪಾದನೆಗೆ ಅನುಮತಿ ನೀಡಬೇಕು. ಕೋವಿಡ್ ತಡೆಯಲು ಲಸಿಕೆಯೇ ರಾಮಬಾಣವಾದುದರಿಂದ ಅಗತ್ಯವಿರುವಷ್ಟು ಲಸಿಕೆಯನ್ನು ಖರೀದಿಸಬೇಕು. ‍ಪಿ.ಎಂ. ಕೇರ್ಸ್‌ನಲ್ಲಿರುವ ಹಣವನ್ನು ಇದಕ್ಕೆ ಖರ್ಚು ಮಾಡಬೇಕು.  

ಡಾ.ಅಜಯ್ ಸಿಂಗ್, ಜೇವರ್ಗಿ ಶಾಸಕ

ಲಸಿಕೆ ಪ್ರಮಾಣ ಹೆಚ್ಚಳ‌

ನಿತ್ಯ 10ರಿಂದ 12 ಸಾವಿರ ಜನರಿಗೆ ಲಸಿಕೆ ನೀಡುತ್ತಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ನಿತ್ಯ 1000 ಹಾಗೂ ಅದಕ್ಕಿಂತ ಹೆಚ್ಚು ಜನರು ಕೋವಿಡ್ ಲಸಿಕೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಲಸಿಕೆ ಬಾರದೇ ಇರುವ ಉದಾಹರಣೆ ಇಲ್ಲ. ಕಲಬುರ್ಗಿಯ ಜಿಮ್ಸ್, ಇಎಸ್‌ಐಸಿ, ನಗರ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ.

ಡಾ. ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಆರೋಗ್ಯಾಧಿಕಾರಿ

ಶೇ 60ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ

ವಿದ್ಯಾರ್ಥಿಗಳು ಪರೀಕ್ಷೆ, ತರಗತಿಗಳಿಗೆ ಹಾಜರಾಗಬೇಕಿರುವುದರಿಂದ ಆದ್ಯತೆ ಮೇರೆಗೆ ಲಸಿಕಾ ಅಭಿಯಾನದ ಮೂಲಕ ಕಾಲೇಜುಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಈಗಾಗಲೇ ಶೇ 60ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ್ದು, ಶೇ 80ರಷ್ಟು ಸಿಬ್ಬಂದಿಯೂ ಪಡೆದಿದ್ದಾರೆ. ಇನ್ನೊಂದು ತಿಂಗಳಲ್ಲಿ 18 ವರ್ಷ ಮೀರಿದ ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಗುರಿ ಹೊಂದಲಾಗಿದೆ.

ರಮೇಶ ಸಂಗಾ, ಲಸಿಕೆ ನೋಡಲ್ ಅಧಿಕಾರಿ

ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಿರಿ

ನಮ್ಮ ಕಾಲೇಜಿನಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ನಾವೆಲ್ಲ ಲಸಿಕೆ ಪಡೆದಿದ್ದೇವೆ. ಹಿಂಜರಿಕೆ ಬಿಟ್ಟು ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆದುಕೊಂಡು ಸಾಂಕ್ರಾಮಿಕವನ್ನು ಕೊನೆಗಾಣಿಸಬೇಕು.

ಸಂಜೀವಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ, ಕಲಬುರ್ಗಿ

ಸದ್ಯ ನಿರಾಳವಾದೆ

ಕೆಲವೇ ದಿನಗಳಲ್ಲಿ ಕಾಲೇಜುಗಳು ಆರಂಭವಾಗಲಿದ್ದು, ಆಫ್‌ಲೈನ್‌ ತರಗತಿಗಳನ್ನು ಕೇಳಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಗೆಳೆಯರು ಸೇರಿ ಕೊಂಡು ಲಸಿಕೆಯನ್ನು ಪಡೆದು ನಿರಾಳರಾಗಿದ್ದೇವೆ. ಮತ್ತೆ ಕ್ಯಾಂಪ್ ಮಾಡಿದಾಗ ಎರಡನೇ ಡೋಸ್ ಪಡೆಯುತ್ತೇವೆ.

ಡರಿತೇಶ್ ಚವ್ಹಾಣ, ವಿದ್ಯಾರ್ಥಿ, ಕಲಬುರ್ಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು