ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮೇ 4ರಿಂದ ಸೀಮಿತ ಸಂಚಾರ, ಕೃಷಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ

Last Updated 3 ಮೇ 2020, 2:38 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರ ಜಿಲ್ಲೆಯನ್ನು ಆರೇಂಜ್‌ ಜೋನ್‌ (ಕಿತ್ತಳೆ) ಎಂದು ಪರಿಗಣಿಸಿದೆ. ಹಾಗಾಗಿ, ಮೇ 4ರ ನಂತರ ಜಿಲ್ಲೆಯ ಒಳಗಡೆ ಶೇಕಡ 50ರಷ್ಟು ಸಾರಿಗೆ ಸಂಚಾರ ಆರಂಭಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದಲ್ಲಿ ಶನಿವಾರ ಮುಖ್ಯಮಂತ್ರಿ ಅವರೊಂದಿಗೆ ವಿಡಿಯೊ ಸಂವಾದ ನಡೆಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ಲಾಕ್‍ಡೌನ್ ಮೇ 17ವರೆಗೂ ವಿಸ್ತರಣೆ ಆಗಿದೆ. ಹಾಗಾಗಿ,ಕಂಟೇನ್ಮೆಂಟ್‌ ಜೋನ್‌ ಎಂದು ಗುರುತರಿಸಿದ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಡೆ ಸಂಚಾರಕ್ಕೆ ಅನುಕೂಲ ಮಾಡಲಾಗುವುದು. ಜಿಲ್ಲೆಯೊಳಗೆ ಈ ಹಿಂದೆ ಓಡಾಡುತ್ತಿದ್ದ ಅರ್ಧದಷ್ಟು ಸಾರಿಗೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅಂತರ ಜಿಲ್ಲಾ ಪ್ರಯಾಣವನ್ನು ಕೇಂದ್ರದ ಮಾರ್ಗಸೂಚಿ ಅವಲೋಕಿಸಿ ನಿರ್ಧರಿಸುವುದಾಗಿ ಮುಖ್ಯಮಂತ್ರಿ ಅವರು ವಿಡಿಯೊ ಸಂವಾದದಲ್ಲಿ ತಿಳಿಸಿದ್ದಾರೆ’ ಎಂದರು.

‌‘ಬಸ್‍ನಲ್ಲಿ ಪ್ರಯಾಣಿಸುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಒತ್ತು ನೀಡಬೇಕು. ಕೊರೊನಾ ಸುರಕ್ಷತಾ ಕ್ರಮಗಳ ಪಾಲನೆ ಇತ್ಯಾದಿ ಕುರಿತು ಜಿಲ್ಲಾಧಿಕಾರಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬಹಳಷ್ಟು ನಿರ್ಧಾರಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗೇ ಅಧಿಕಾರ ನೀಡಲಾಗಿದೆ’ ಎಂದರು.

ಕೃಷಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ: ‘ಸುರಕ್ಷಿತ ಸ್ಥಳಗಳಲ್ಲಿ ಕೆಲ ಷರತ್ತುಗಳೊಂದಿಗೆ ಜಿಲ್ಲೆಯ ಕೈಗಾರಿಕೆಗಳು, ಕಟ್ಟಡಗಳ ನಿರ್ಮಾಣ ಕಾಮಗಾರಿ, ಕೃಷಿ ಹಾಗೂ ವಾಣಿಜ್ಯ ಚಟಿವಟಿಕೆಗಳಿಗೆ ಅನುಮತಿ ನೀಡಲಾಗುವುದು. ಜತೆಗೆ, ಟ್ಯಾಕ್ಸಿ, ಕಾರ್‌ಗಳಲ್ಲಿ ಮೂವರು ಮಾತ್ರ ಪ್ರಯಾಣಿಸಲು ಅವಕಾಶ. ಹೇರ್‌ ಕಟಿಂಗ್‌ ಸಲೂನ್‌ ತೆರೆಯಲು ವ್ಯವಸ್ಥೆ ಮಾಡಲಾಗುವುದು’ ಎಂದೂ ಸಚಿವರು ತಿಳಿಸಿದರು.

‘ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಲ್ಲಿ ಇನ್ನೂ 16,000 ಕ್ವಿಂಟಲ್ ಅಕ್ಕಿ, 4,400 ಕ್ವಿಂಟಲ್ ಗೋಧಿ ಹಿಟ್ಟು, 199 ಕ್ವಿಂಟಲ್ ರವೆ, ಎಣ್ಣೆ, ಬೆಲ್ಲ ಮೊದಲಾದ ಪದಾರ್ಥಗಳಿವೆ. ಅವುಗಳನ್ನು ಆಯಾ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದೂ ಕಾರಜೋಳ ತಿಳಿಸಿದರು.

ಕೊರೊನಾ ಲ್ಯಾಬ್‌ ಸಾಮರ್ಥ್ಯ ವೃದ್ಧಿ

‘ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿರುವ ಕರೊನಾ ವೈರಾಣು ಪತ್ತೆ ಪ್ರಯೋಗಾಲಯದ ಸಾಮರ್ಥ್ಯ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಇನ್ನಷ್ಟು ಕಿಟ್‌ಗಳನ್ನು ಸಂದಾಯ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಈ ಲ್ಯಾಬ್‌ ಸಾಮರ್ಥ್ಯ ಹೆಚ್ಚಳವಾಗಲಿದೆ’ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಸದ್ಯ ಜಿಮ್ಸ್‌ನ ಲ್ಯಾಬ್‌ಗೆ ಕಲಬುರ್ಗಿ, ಬೀದರ್, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಿಂದ ಕಫದ ಮಾದರಿಗಳನ್ನು ಕಳುಹಿಸಲಾಗುತ್ತಿದೆ. ಒತ್ತಡ ದಿನದಿಂದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಒಂದು ದಿನಕ್ಕೆ 60 ಮಾದರಿಗಳನ್ನು ಮಾತ್ರ ಇಲ್ಲಿ ತಪಾಸಣೆ ಮಾಡಲು ಸಾಧ್ಯ. ಈ ಬಗ್ಗೆ ‘ಪ್ರಜಾವಾಣಿ’ ಏ. 27ರಂದು ಬೆಳಕು ಚೆಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT