ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಆದೇಶ ಪಾಲನೆಯಲ್ಲಿ ಸರ್ಕಾರ ವೈಫಲ್ಯ: ಕೆ.ನೀಲಾ

Last Updated 17 ಫೆಬ್ರುವರಿ 2022, 10:57 IST
ಅಕ್ಷರ ಗಾತ್ರ

ಕಲಬುರಗಿ: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವನ್ನು ಪಾಲನೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ–ಸಿಪಿಐಎಂ) ಟೀಕಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ರಾಜ್ಯದ ಶಾಲಾ–ಕಾಲೇಜುಗಳಲ್ಲಿ ಉಂಟಾದ
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ನ ತ್ರಿ ಸದಸ್ಯ ಪೀಠವು ಮಧ್ಯಂತರ ಆದೇಶವನ್ನು ಹೊರಡಿಸಿ, ತರಗತಿ ಕೋಣೆಗಳ ಒಳಗಡೆಯಲ್ಲಿ ಯಾವುದೇ ವಿದ್ಯಾರ್ಥಿ ಕೇಸರಿ ಶಾಲು ಹಾಗೂ ತಲೆವಸ್ತ್ರ, ಹಿಜಾಬು ಮುಂತಾಗಿ ಧರಿಸುವುದನ್ನು ತಡೆದಿದೆ. ಮುಂದಿನ ಆದೇಶ ಬರುವವರೆಗೆ ತರಗತಿ ಕೋಣೆಗಳಲ್ಲಿ ಅವುಗಳನ್ನು ಧರಿಸಿ ಯಾರೂ ಪಾಲ್ಗೊಳ್ಳುವಂತಿಲ್ಲ. ರಾಜ್ಯ ಸರಕಾರ ಇದನ್ನು ಯಥಾರ್ಥವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವುದರಿಂದ ಮುಸ್ಲಿಂ ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಮತ್ತಷ್ಟು ಆತಂಕ ಉಂಟಾಗುವಂತಾಗಿದೆ. ಮಾತ್ರವಲ್ಲ, ವರ್ಷದ ಕೊನೆಯ ಹಂತದಲ್ಲಿ ಸಮವಸ್ತ್ರದ ಕುರಿತು ಆದೇಶವನ್ನು ಏಕಾಏಕಿ ಹೊರಡಿಸಿದೆ’ ಎಂದಿದ್ದಾರೆ.

‘ರಾಜ್ಯದ ಕೆಲವೆಡೆ ತಲೆಗವಸು ಧರಿಸಿಬಂದ ವಿದ್ಯಾರ್ಥಿನಿಯರನ್ನು ಮತ್ತು ಬುರ್ಕಾ ಧರಿಸಿಬಂದ ಮಹಿಳೆಯರನ್ನು ಶಾಲಾ–ಕಾಲೇಜು ಕಾಂಪೌಂಡ್ ಆಚೆ ನಿಲ್ಲಿಸಿ ತಡೆಯಲಾಗಿದೆ. ತರಗತಿಯಲ್ಲಿ ಧರಿಸಲು ಅವಕಾಶವಿಲ್ಲವೆಂಬುದರ ಬದಲು ಶಾಲಾ–ಕಾಲೇಜು ಆವರಣದೊಳಗೂ ಪ್ರವೇಶವಿಲ್ಲವೆಂಬಂತೆ ವರ್ತಿಸಿ ತಿರುಚಲಾಗಿರುವುದು ತೀವ್ರ ಖಂಡನೀಯ’ ಎಂದಿದ್ದಾರೆ.

‘ಕೆಲವೆಡೆ ಶಾಲಾ ಆವರಣಕ್ಕೆ ಹಿಜಾಬ್ ಧರಿಸಿ ಬರುವ ಬಾಲಕಿಯರನ್ನು ತಡೆದಿರುವ ಕ್ರಮ ಹೈಕೋರ್ಟ್ ಮಧ್ಯಂತರ ಆದೇಶದ ತೀವ್ರ ಉಲ್ಲಂಘನೆಯಾಗಿದೆ. ಅಂತಹ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಮತ್ತು ರಾಜ್ಯ ಸರ್ಕಾರದ ಸಂಬಂಧಿತ ಅಧಿಕಾರಿಗಳ ಮೇಲೆ ನಿಂದನೆ ಮೊಕದ್ದಮೆ ಹೂಡಬೇಕು’ ಎಂದು ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT