ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಾರಾಜಿಸಿದ ಕೆಂಪು ಬಾವುಟಗಳು, ಮೊಳಗಿದ ಲಾಲ್‌ಸಲಾಮ್‌

ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಜಿಲ್ಲಾ ಸಮ್ಮೇಳನ ಮತ್ತು ಪಕ್ಷದ ಪ್ರತಿನಿಧಿಗಳ ಅಧಿವೇಶನ ಯಶಸ್ವಿ
Last Updated 26 ನವೆಂಬರ್ 2021, 15:35 IST
ಅಕ್ಷರ ಗಾತ್ರ

ಕಲಬುರಗಿ: ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) 23ನೇ ಜಿಲ್ಲಾ ಸಮ್ಮೇಳನ ಮತ್ತು ಪಕ್ಷದ ಪ್ರತಿನಿಧಿಗಳ ಅಧಿವೇಶದ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್‌ ಮರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಜಿಲ್ಲೆಯ ಮೂಲೆಮೂಲೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೆಂಬಾವುಟಗಳನ್ನು ಪ್ರದರ್ಶಿಸಿದರು.

ನೆಹರೂ ಗಂಜ್‍ನ ಲಾಹೋಟಿ ಕಲ್ಯಾಣ ಮಂಟಪದ ಮುಂದೆ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಸೂಪರ್ ಮಾರ್ಕೆಟ್‌ವರೆಗೂ ನಡೆದ ಕಾಲ್ನಡಿಗೆಯಲ್ಲಿ ಹೆಜ್ಜೆಹೆಜ್ಜೆಗೂ ಕೆಂಪು ಬಾವುಟಗಳೇ ರಾರಾಜಿಸಿದವು. ಡೊಳ್ಳು ಕುಣಿತ, ಹರ ಭಜನೆ, ಕೋಲಾಟ, ಡೋಲುಮೇಳ, ಜನಪದ ನೃತ್ಯ ಹೀಗೆ ವಿವಿಧ ಕಲಾತಂಡಗಳ ಸದಸ್ಯರು ದಾರಿಯುದ್ದಕ್ಕೂ ಪ್ರದರ್ಶನ ನೀಡಿದರು. ನವೆಂಬರ್‌ 26ರ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ನಿರ್ಮಿಸಿದ ಸಂವಿಧಾನದ ಮುಖಪುಟದ ಬೃಹತ್‌ ಕಟೌಟ್‌ ಗಮನ ಸೆಳೆಯಿತು.

‘ಲಾಲ್‌ಸಲಾಮ್‌ ಲಾಲ್‌ಸಲಾಮ್‌, ಇಂಕ್ವಿಲಾಬ್‌ ಜಿಂದಾಬಾದ್‌, ಸಿಪಿಐಎಂ ಜಿಂದಾಬಾದ್‌, ಕಾಮ್ರೆಡ್‌ ಮಾನಪಡೆ ಜಿಂದಾಬಾದ್‌, ಕಾಮ್ರೆಡ್‌ಗಳಿಗೆ ಜಯವಾಗಲಿ, ಕಾರ್ಮಿಕರ ಹೋರಾಟಕ್ಕೆ ಜಯವಾಗಲಿ... ಮುಂತಾದ ಜೈಕಾರ ಹಾಕಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿದ್ದುಪಡಿ ಮಾಡಿದ ವಿವಿಧ ಕಾಯ್ದೆಗಳನ್ನು ಹಿಂಪಡೆಯುವಂತೆಯೂ ಘೋಷಣೆ ಮೊಳಗಿಸಿದರು. ದಿವಂಗತ ಮಾರುತಿ ಮಾನಪಡೆ ಅವರ ಭಾವಚಿತ್ರವಿದ್ದ ಟಿ–ಶರ್ಟ್‌ ಧರಿಸಿದ ಯುವಕರ ಪಡೆಯೂ ಗಮನ ಸೆಳೆಯಿತು.

ಸೂಪರ್‌ ಮಾರ್ಕೆಟ್‌ ಬಳಿ ಬಂದು ಮೆರವಣಿಗೆ ಸಮಾವೇಶವಾಗಿ ಮಾರ್ಪಟ್ಟಿತು. ಮಾರ್ಕೆಟ್‌ನ ಮುಖ್ಯರಸ್ತೆಯವರೆಗೂ ಜನ ಕಿಕ್ಕಿರಿದು ಸೇರಿದ್ದರಿಂದ ಪೊಲೀಸರು ಹೋರಾಟಗಾರರನ್ನು ಬೇರೆ ಕಡೆಗೆ ಕಳುಹಿಸಿದರು. ಅರ್ಧ ಜನ ಸಮಾವೇಶದಲ್ಲಿ ಪಾಲ್ಗೊಂಡರೆ ಮತ್ತರ್ಧ ಜನ ಮೆರವಣಿಗೆಯನ್ನು ಮುಂದುವರಿಸುವುದು ಅನಿವಾರ್ಯವಾಯಿತು.

ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಪಿಐಎಂ ಕೇಂದ್ರ ಸಮಿತಿ ಸದಸ್ಯೆ ಎಸ್‌.ವರಲಕ್ಷ್ಮಿ, ‘ಈಗ ಎಲ್ಲ ದರಗಳೂ ಹೆಚ್ಚಾಗಿವೆ. ಆದರೆ, ದುಡಿಯುವ ಜನರ ಸಂಬಳ ಮಾತ್ರ ಏರಿಲ್ಲ. ಹಾಗಿದ್ದರೆ ನಾವು ಬದುಕುವುದು ಹೇಗೆ?’ ಎಂದು ಪ್ರಶ್ನಿಸಿದರು.

‘ಅಂಗನವಾಡಿ, ಅಕ್ಷರದಾಸೋಹ ಸೇರಿದಂತೆ ಡಿ ದರ್ಜೆಯ ಎಲ್ಲ ನೌಕರರಿಗೂ ಕೆಲಸ ಹೆಚ್ಚಾಗಿದೆ. ಅದಕ್ಕೆ ತಕ್ಕ ಸಂಬಳ ನೀಡುತ್ತಿಲ್ಲ. ಕನಿಷ್ಠ ₹ 21 ಸಾವಿರ ಸಂಬಳ ನೀಡುವಂತೆ ಮಾಡುತ್ತಿರುವ ಹೋರಾಟಕ್ಕೆ ಯಾವುದೇ ಸರ್ಕಾರ ಕಿವಿಗೊಟ್ಟಿಲ್ಲ. ನರೇಗಾ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು, ಕೂಲಿ ದರವನ್ನು ₹ 600ಕ್ಕೆ ಏರಿಸಬೇಕು’ ಎಂದೂ ಆಗ್ರಹಿಸಿದರು.

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ, ಕೇಂದ್ರ ಸಮಿತಿ ಸದಸ್ಯ ಡಾ.ನಿತ್ಯಾನಂದ ಸ್ವಾಮಿ, ಸಮಾವೇಶದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭು ಖಾನಾಪುರೆ,ಉಪಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಖಜಾಂಚಿ ವಿರುಪಾಕ್ಷ ತಡಕಲ್, ಕಾರ್ಯದರ್ಶಿ ಶರಣಬಸಪ‍್ಪ ಮಮಶೆಟ್ಟಿ, ಉಪಾಧ್ಯಕ್ಷರಾದ ಕೆ.ನೀಲಾ, ಗೌರಮ್ಮ ಪಾಟೀಲ, ಅಲ್ತಾಫ್‌ ಇನಾಮದಾರ ಮಾತನಾಡಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

‘ಕಾರ್ಮಿಕ ವಿರೋಧ ಕಾಯ್ದೆಗಳ ವಿರುದ್ಧವೂ ಹೋರಾಟ’

‘ಮುಂದಿನ ಮೂರು ವರ್ಷಗಳಲ್ಲಿ ದೇಶದಾದ್ಯಂತ ಕಾರ್ಮಿಕ ಹೋರಾಟವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮಾಡಿದ ಹೋರಾಟದ ರೀತಿ ಹಾಗೂ ಅದರ ಪ್ರತಿಫಲ ನಮ್ಮ ಕಣ್ಣಿನ ಮುಂದಿದೆ. ಹಸಿರು ಟವಲ್‌ ಮಾದರಿಯಲ್ಲೇ ಕೆಂಬಾವುಟಗಳೂ ಹಾರಾಡಬೇಕು. ನಾಲ್ಕು ಕಾರ್ಮಿಕ ವಿರೋಧ ಕಾಯ್ದೆಗಳ ವಿರುದ್ಧವೂ ಗಟ್ಟಿ ಹೋರಾಟ ಮಾಡಲು ಸನ್ನದ್ಧರಾಗಿ’ ಎಂದು ಪಕ್ಷದ ಮುಖಂಡ, ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ.ಬೇಬಿ ಕರೆ ನೀಡಿದರು.

‌‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಕೋವಿಡ್‌ ಕಾರಣ ಅರ್ಧಕ್ಕೆ ನಿಂತಿದ್ದು, ಶೀಘ್ರದಲ್ಲಿಯೇ ಮತ್ತೆ ಪ್ರತಿರೋಧ ಆರಂಭವಾಗಲಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೋಂದಣಿಯನ್ನು ಸಹಿಸುವುದಿಲ್ಲ. ಅಲ್ಪಸಂಖ್ಯಾತರ ವಿರುದ್ಧ ಮೋದಿ ಸರ್ಕಾರ ಮಾಡುವ ಎಲ್ಲ ಕುತಂತ್ರಗಳನ್ನೂ ಹಿಮ್ಮೆಟ್ಟುತ್ತೇವೆ. ಹೊಸ ಶಿಕ್ಷಣ ನೀತಿಯನ್ನೂ ಹಿಂಪಡೆಯುವಂತೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT