ಬುಧವಾರ, ಮೇ 25, 2022
30 °C

ಮತಾಂತರ ನಿಷೇಧ ವಿಧೇಯಕ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕ (ಮತಾಂತರ ನಿಷೇಧ ಕಾಯ್ದೆ)ವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ, ವಂಚಕ ಜಾತಿಪದ್ಧತಿಯನ್ನು ಮುಂದುವರೆಸಲಿರುವ, ಸಂವಿಧಾನ ವಿರೋಧಿಯಾದ ವಿಧೇಯಕವನ್ನು ಪಾಸು ಮಾಡುವ ಅಗತ್ಯವಿಲ್ಲ. ಈ ಮುಂಚೆ ಬಲವಂತದ ಮತಾಂತರವನ್ನು ತಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲಾಗುವುದು ಎಂದು ಪ್ರಚುರಗೊಳಿಸಲಾಗಿತ್ತು. ಈ ವಿಧೇಯಕವು ತನಗಿಷ್ಟವಾದ ಮತವನ್ನು ಆಚರಿಸುವುದಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಆ ಮೂಲಕ ವ್ಯಕ್ತಿಯು ತನಗಿಷ್ಟವಾದ ಮತವನ್ನು ಆಚರಿಸುವ ಭಾರತ ಸಂವಿಧಾನ ಕೊಡಮಾಡಿದ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಪ್ರತಿಭಟನಾಕಾರರು ಟೀಕಿಸಿದರು.

‘ಮತಾಂತರಗೊಂಡಿರುವ ವ್ಯಕ್ತಿಗಳ ಮೇಲೆ ಮತ್ತು ಅಂತಹ ಮತಾಂತರಗೊಂಡಿರುವ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳು ಹಾಗೂ ಅದರ ಮುಖಂಡರ ಮೇಲೆ ದಾಳಿ ನಡೆಸಲು ಮತಾಂಧ ಹಾಗೂ ಜಾತಿವಾದಿ ಪುಂಡರಿಗೆ ಕಲಂ–4 ಕುಮ್ಮಕ್ಕು ನೀಡುತ್ತದೆ. ಯುವಕ–ಯುವತಿಯರ ಅಂತರ್ಜಾತೀಯ ಮತ್ತು ಅಂತರ್‌ ಧರ್ಮೀಯ ವೈವಾಹಿಕ ಹಕ್ಕನ್ನು ನಿರ್ಬಂಧಿಸುತ್ತದೆ. ಹೀಗಾಗಿ ಈ ವಿಧೇಯಕವನ್ನು ಕೂಡಲೇ ವಾಪಸ್ ‍ಪಡೆಯಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ಜಿಲ್ಲಾ ಸಮಿತಿ ಸದಸ್ಯರಾದ ನಾಗಯ್ಯಸ್ವಾಮಿ, ಸುಧಾಮ ಧನ್ನಿ, ಎಂ.ಬಿ. ಸಜ್ಜನ, ಭೀಮಶೆಟ್ಟಿ ಯಂಪಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು