ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ದೌರ್ಜನ್ಯ ಖಂಡಿಸಿ ಪಂಜು ಹಿಡಿದು ಪ್ರತಿಭಟನೆ

ದೆಹಲಿ ಚಲೊ ನಡೆಸಿದ ಸಂದರ್ಭದಲ್ಲಿ ಲಾಠಿ ಪ್ರಹಾರ
Last Updated 30 ನವೆಂಬರ್ 2020, 1:34 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ಖಂಡಿಸಿ ರೈತರು ದೆಹಲಿ ಚಲೊ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ರೈತರ ಹೊರಾಟ ಬೆಂಬಲಿಸಿ ಸಿಪಿಎಂ, ಸಿಐಟಿಯು ಕಾರ್ಯಕರ್ತರು ಭಾನುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

ನಗರದ ಜಗತ್ ವೃತ್ತದಲ್ಲಿ ಪಕ್ಷದ ರಾಜ್ಯ ನಾಯಕಿ ಎಸ್. ವರಲಕ್ಷ್ಮಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಂಚಾಲಕಿ ಕೆ. ನೀಲಾ ಹಾಗೂ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ಪಂಜುಗಳನ್ನು ಹಿಡಿದುಕೊಂಡು ಸುಮಾರು ಹೊತ್ತು ಪ್ರತಿಭಟನೆ ನಡೆಸಿ ರೈತರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್, ಬೀಜ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಈ ದೇಶದ ರೈತರನ್ನು ಹಾಳು ಮಾಡುವ ಮೂಲಕ ಪ್ರಧಾನಿ ಮೋದಿಯವರು, ರೈತರನ್ನು ಅಂಬಾನಿ, ಅದಾನಿಗೆ ಒತ್ತೆ ಇರುವ ಕೆಲಸ ಮಾಡಲು ಹೊರಡಿದ್ದಾರೆ. ಶೇ 99ರಷ್ಟಿರುವ ಬಡವರು, ರೈತರು ಕಾರ್ಮಿಕರ ಹಿತಕ್ಕಿಂತಲೂ ಶೇ 1ರಷ್ಟಿರುವ ಶ್ರೀಮಂತರ ಹಿತ ಕಾಯುವುದು ಬಿಜೆಪಿಗೆ ಮುಖ್ಯವಾಗಿದೆ. ಕಾರ್ಪೊರೇಟ್ ಕಂಪನಿಗಳ ಮತ್ತು ಶ್ರೀಮಂತರ ಏಜೆಂಟರಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಂಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ಸುಗ್ರೀವಾಜ್ಞೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಖಾಸಗೀಕರಣ ನಿಲ್ಲಿಸಬೇಕು, ದುಡಿಯುವ ಜನರಿಗೆ ಕೆಲಸ ಕೊಡಬೇಕು ಎಂದು ಅವರು
ಆಗ್ರಹಿಸಿದರು.

ಎಸ್. ವರಲಕ್ಷ್ಮಿ ಮಾತನಾಡಿ, ‘ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಚಲೊ ಹೊರಟಿರುವ ರೈತರನ್ನು ಕೇಂದ್ರದ ಸೂಚನೆಯಂತೆ ಹರಿಯಾಣದಲ್ಲಿ ತಡೆಯುವ ಮೂಲಕ ಬಿಜೆಪಿ ರೈತರ ಹೋರಾಟ ಹತ್ತಿಕ್ಕುತ್ತಿದೆ. ಪ್ರತಿರೋಧಿಸಿದವರ, ಧ್ವನಿ ಎತ್ತಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ದೆಹಲಿ ಪ್ರವೇಶಿಸುವುದನ್ನು ತಡೆಯಲು ಇನ್ನಿಲ್ಲದ ಕುತಂತ್ರ ಮಾಡಲಾಗುತ್ತಿದೆ. ಜಲಫಿರಂಗಿ ಸಿಡಿಸಿದರೂ ರೈತರು ಹಿಂಜರಿದಿಲ್ಲ. ಈ ಐತಿಹಾಸಿಕ ಹೋರಾಟ ಮುಂದುವರಿಯಲಿದೆ ಎಂದರು.

ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಅಶೋಕ ಮ್ಯಾಗೇರಿ, ಮೇಘರಾಜ ಕಠಾರೆ, ಲವಿತ್ರ ವಸ್ತ್ರದ, ಆನಂದ ಜೆ.ಎನ್, ಅಲ್ತಾಫ್ ಇನಾಮದಾರ, ಜಾವೀದ್ ಮಿಯಾ, ಎಂ.ಬಿ.ಸಜ್ಜನ, ಮೆಹಮೂದ್ ಮೊಕ್ಕದ್ದಮ, ಮನೀಷಾ ಚವ್ಹಾಣ, ಚಂದಮ್ಮ ಗೋಳಾ ಪಾಲ್ಗೊಂಡಿದ್ದರು. ಜಗತ್ ವೃತ್ತದಲ್ಲಿ ಪ್ರತಿಭಟನೆ ಬಳಿಕ ಸೂಪರ್ ಮಾರ್ಕೆಟ್‍ವರೆಗೂ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT