ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂದಾಲ್ ಕಂಪನಿಗೆ ಭೂಮಿ ಮಾರಾಟಕ್ಕೆ ಸಿಪಿಎಂ ವಿರೋಧ

Published 23 ಆಗಸ್ಟ್ 2024, 15:23 IST
Last Updated 23 ಆಗಸ್ಟ್ 2024, 15:23 IST
ಅಕ್ಷರ ಗಾತ್ರ

ಕಲಬುರಗಿ: ಬಳ್ಳಾರಿ ಜಿಲ್ಲೆಯ ತೋರಣಗಲ್ಲು–ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಜಿಂದಾಲ್ ಸ್ಟೀಲ್ ಕಂಪನಿಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಧರಿಸುವ ಸಚಿವ ಸಂಪುಟದ ಕ್ರಮವನ್ನು ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ವಿರೋಧಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಈ ಕೂಡಲೇ ಸಚಿವ ಸಂಪುಟದ ನಿರ್ಣಯವನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

‘ಈ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ ಜಮೀನುಗಳ ಬೆಲೆಯು ಒಂದು ಎಕರೆಗೆ ಕನಿಷ್ಠವೆಂದರೂ ₹ 3 ಕೋಟಿ ಇದೆ. ಅದರಂತೆ ಜಿಂದಾಲ್ ಕಂಪನಿಗೆ ನೀಡುವ ಒಟ್ಟು 3,667 ಎಕರೆಯ ಈಗಿನ ಮಾರಾಟದ ಮೌಲ್ಯ ₹ 11,001 ಕೋಟಿಯಾಗುತ್ತದೆ. ಅಭಿವೃದ್ಧಿಪಡಿಸಲಾದ ಮೊತ್ತ ಶೇ 40 ಕಳೆದರೂ ಅದರ ಮೌಲ್ಯ ಸುಮಾರು ₹ 7 ಸಾವಿರ ಕೋಟಿಗಳಾಗುತ್ತದೆ. ಆದರೆ, ಸರ್ಕಾರ ಈಗ 1,667 ಎಕರೆಗೆ ಕೇವಲ ₹ 1.20 ಲಕ್ಷದಂತೆ ₹ 24.40 ಕೋಟಿ ನಿಗದಿಪಡಿಸಿದೆ. ಉಳಿದ 2,000 ಎಕರೆಗೆ ಕೇವಲ ₹ 1.5 ಲಕ್ಷದಂತೆ ಸುಮಾರು ₹25 ಕೋಟಿ ನಿಗದಿಪಡಿಸಿ, ಒಟ್ಟು ₹ 50 ಕೋಟಿಗೂ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯ’ ಎಂದಿದ್ದಾರೆ.

‘ಲೀಸ್ ಕಂ ಸೇಲ್ ಒಪ್ಪಂದದ ಮೂಲಕ ಹಳೆಯ ದರಕ್ಕೆ ಮಾರಾಟ ಮಾಡುವ ಅಕ್ರಮವು ಅಕ್ಷಮ್ಯವಾಗಿದೆ.
ಈ ಕೂಡಲೇ ಒಪ್ಪಂದವನ್ನು ರದ್ದುಪಡಿಸಬೇಕು. ಈ ಅಕ್ರಮ ಒಪ್ಪಂದವು ಭ್ರಷ್ಟಾಚಾರದ ಬಹುದೊಡ್ಡ ಹಗರಣವಾಗಿದೆ. ಈ ಹಿಂದೆ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಂದಾಲ್ ಕಂಪನಿಗೆ ಈ ಜಮೀನುಗಳ ಶುದ್ಧ ಕ್ರಯ ಪತ್ರ ಮಾಡಿಕೊಳ್ಳುವ ಕ್ರಮವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸಿತ್ತು. ಇದೀಗ ಅದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಾವು ವಿರೋಧಿಸಿದ್ದಕ್ಕೇ ಒಪ್ಪಿಗೆ ನೀಡುವ ಮೂಲಕ ಕಾಂಗ್ರೆಸ್ ತನ್ನ ಎಡಬಿಡಂಗಿತನದ ನಿಲುವು ಪ್ರದರ್ಶಿಸಿದೆ’ ಎಂದು ಟೀಕಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT