ರೈಲು ಡಿಕ್ಕಿ: ಮಹಿಳೆ ಸಾವು

7

ರೈಲು ಡಿಕ್ಕಿ: ಮಹಿಳೆ ಸಾವು

Published:
Updated:

ರೈಲು ಡಿಕ್ಕಿ; ಮಹಿಳೆ ಸಾವು

ಕಲಬುರ್ಗಿ: ನಗರದ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ರೈಲು ಡಿಕ್ಕಿ ಹೊಡೆದು ಗುತ್ತಿಗೆ ಆಧಾರದ ಮೇಲೆ ಕಸಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಬುದ್ಧನಗರದ ಅನಸುಬಾಯಿ ಚನ್ನಪ್ಪ (45) ಮೃತಪಟ್ಟವರು. ‘ಇವರು ಒಂದು ತಿಂಗಳಿನಿಂದ ಕೆಲಸಕ್ಕೆ ಗೈರಾಗಿದ್ದರು. ಈಚೆಗಷ್ಟೇ ಮತ್ತೆ ಕೆಲಸಕ್ಕೆ ಸೇರಿದ್ದರು. ಮೂವರು ಮಹಿಳೆಯರೊಂದಿಗೆ ಪ್ಲಾಟ್‌ ಫಾರ್ಮ್‌ ಸಂಖ್ಯೆ 3ರಲ್ಲಿ ಕಸ ಗುಡಿಸುತ್ತಿದ್ದಾಗ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ’ ಎಂದು ವಾಡಿ ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯುತ್ ತಂತಿ ತಗುಲಿ ಸಾವು

ಜೇವರ್ಗಿ: ಯಡ್ರಾಮಿ ತಾಲ್ಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ವಿದ್ಯುತ್ ತಂತಿ ಕಡಿದುಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚಿಗರಳ್ಳಿಯ ಕಾಶಿಬಾಯಿ ಹೆಳವರ (35) ಮೃತಪಟ್ಟವರು. ಇವರ ತಂದೆ ಸಿದ್ದಪ್ಪ ಹೆಳವರ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ಕಡಿದು ಬಿದ್ದಿದೆ. ಜೆಸ್ಕಾಂ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಿ ಮೃತರ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಚಿಗರಳ್ಳಿ ಕ್ರಾಸ್ ಬಳಿ ಪ್ರತಿಭಟನೆ ಮಾಡಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು. ಜೆಸ್ಕಾಂ ಅಧಿಕಾರಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಎಪಿಎಂಎಸ್‌ ಗುಮಾಸ್ತನ ಕೊಲೆ

ಕಲಬುರ್ಗಿ: ತಾಲ್ಲೂಕಿನ ಅವರಾದ (ಬಿ)ಯಲ್ಲಿ ಬುಧವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಬಸವರಾಜ ಹೊಡಲ್ (58) ಮೃತಪಟ್ಟವರು. ಇವರು ಕಲಬುರ್ಗಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು.

‘ಬಸವರಾಜ ಅವರ ಮನೆ ಕಲಬುರ್ಗಿಯಲ್ಲೇ ಇದ್ದು, ಪ್ರತಿ ನಿತ್ಯ ಬೆಳಿಗ್ಗೆ ವಾಯುವಿಹಾರಕ್ಕಾಗಿ ಅವರಾದ (ಬಿ)ಗೆ ಬರುತ್ತಿದ್ದರು. ಮೃತರಿಗೆ ಇಬ್ಬರು ಪತ್ನಿಯರು ಇದ್ದಾರೆ. ಯಾವ ಉದ್ದೇಶಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !