ಸೋಮವಾರ, ಜುಲೈ 4, 2022
24 °C
ಮಗು ಅಪರಣ ಪ್ರಕರಣದಲ್ಲಿ ಪೊಲೀಸರಿಂದ ಕಿರುಕುಳ ಆರೋಪ

ಮರತೂರು: ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್‌: ತಾಲ್ಲೂಕಿನ ಮರತೂರು ಗ್ರಾಮದಲ್ಲಿ ಶುಕ್ರವಾರ ‘ನನ್ನ ಸಾವಿಗೆ ಪೊಲೀಸರು ನೀಡಿದ ಕಿರುಕುಳವೇ ಕಾರಣ’ ಎಂದು ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಮೃತನ ಕುಟುಂಬದವರು ಪೊಲೀಸ್‌ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡಿದರು.

ಮರತೂರಿನ ಮನೋಜ ಶಿಂಧೆ (32) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ವಿಷಯ ಗೊತ್ತಾಗಿದೆ.

ಘಟನೆ ವಿವರ: ‘ಮನೋಜ ಅವರ ಪತ್ನಿಯ ಅಣ್ಣನ ಮಗು ಈಚೆಗೆ ಕಾಣೆಯಾಗಿದೆ. ಆ ಮಗುವನ್ನು ಮನೋಜ ಹಾಗೂ ಅವರ ಪತ್ನಿಯೇ ಅಪಹರಿಸಿದ್ದಾರೆ ಎಂದು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಮನೋಜ ಅವರನ್ನು ಎರಡು ದಿನ ಠಾಣೆಯಲ್ಲಿಯೇ ಕೂಡಿಹಾಕಿ ವಿಚಾರಣೆ ನಡೆಸಿದ್ದರು. ಈ ವೇಳೆ ತೀವ್ರವಾಗಿ ಹಲ್ಲೆ ಮಾಡಿದ್ದರು. ಎರಡು ದಿನಗಳ ಬಳಿಕ ಮನೆಗೆ ಬಿಟ್ಟು ಕಳುಹಿಸಿದ್ದರು. ‘ಇವತ್ತು ಬಿಡುತ್ತೇವೆ. ನಾಳೆ ಮಗುವಿನ ಬಗ್ಗೆ ಹೇಳದೇ ಇದ್ದರೆ ನಿನ್ನ ಹೆಂಡತಿಯನ್ನೂ ಕರೆದುಕೊಂಡು ಬರುತ್ತೇವೆ’ ಎಂದು ಪೊಲೀಸರು ಹೆದರಿಸಿದ್ದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?: ‘ನಾನು ಮತ್ತು ನನ್ನ ಪತ್ನಿ ನಮ್ಮ ಪಾಡಿಗೆ ಇದ್ದೆವು. ಯಾವುದೇ ತಪ್ಪು ಮಾಡಿಲ್ಲ. ಇವರು ಸುಮ್ಮನೇ ನಮ್ಮ ಮೇಲೆ ಆರೋಪ ಮಾಡಿ, ನನಗೆ ತುಂಬ ತೊಂದರೆ ಕೊಟ್ಟರು. ಇವತ್ತು ಎಫ್‌ಐಆರ್‌ ಮಾಡಿ ನನ್ನ ಮತ್ತು ಹೆಂಡತಿಯನ್ನು ಜೈಲಿಗೆ ಕಳಿಸುವುದಾಗಿ ಹೇಳಿದರು. ನಾನು ತುಂಬಾ ಮರಿಯಾದಸ್ತ. ಹಾಗಾಗಿ, ತುಂಬಾ ನೊಂದುಕೊಂಡಿದ್ದೇನೆ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಏಕೆ? ನನ್ನ ಸಾವಿಗೆ ಸಾಯಿಬಣ್ಣ ಜೋಗುರ, ಶರಣಮ್ಮ ನಾಟಿಕರ, ಪ್ರತಿಭಾ ನಾಗೇಶ ಹಾಗೂ ಪ್ರತಿಭಾಳ ತಾಯಿ ಇವರೆಲ್ಲರೂ ಕಾರಣ. ನಾನು ಏನೂ ತಪ್ಪು ಮಾಡಿಲ್ಲ. ನಾನು ಮಾಡಿದ ತಪ್ಪೆಂದರೆ ನನ್ನ ಹೆಂಡತಿ– ಮಕ್ಕಳಿಗೆ ಕೈಬಿಟ್ಟು ಹೋಗುತ್ತಿರುವುದು. ನನ್ನನ್ನು ಕ್ಷಮಿಸು ಸೀತಾ, ಐ ಮಿಸ್‌ ಯು’ ಎಂದು ಮನೋಜ ಬರೆದಿಟ್ಟ ಡೆತ್‌ನೋಟ್‌ನಲ್ಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತೀವ್ರ ಪ್ರತಿಭಟನೆ: ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ಶವವನ್ನು ಶಹಾಬಾದ್‌ ಪೊಲೀಸ್‌ ಠಾಣೆ ಮುಂದೆ ಇಟ್ಟು ಪ್ರತಿಭಟನೆ ನಡೆಸಲಾಯಿತು. ಪೊಲೀಸರ ಮುಂದೆ ಡೆತ್‌ನೋಟ್‌ ಓದಿ ಹೇಳಿದರು. ಈ ಸಾವಿಗೆ ಪೊಲೀಸರೇ ಕಾರಣ. ಅವರಿಗೆ ತಕ್ಷ ಶಿಕ್ಷೆ ಆಗಲೇಬೇಕು ಎಂದು ಪಟ್ಟು ಹಿಡಿದರು.

ಕೆಲಹೊತ್ತಿನ ನಂತರ ಹಿರಿಯ ಅಧಿಕಾರಿಗಳು ನೀಡಿದ ಭರವಸೆ ಮೇರೆ, ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು