ಬೆಳೆ ಸಾಲ; ಜಿಲ್ಲಾಡಳಿತದಿಂದಲೇ ರೈತರ ದಾಖಲೆಗಳ ಸಂಗ್ರಹ

7

ಬೆಳೆ ಸಾಲ; ಜಿಲ್ಲಾಡಳಿತದಿಂದಲೇ ರೈತರ ದಾಖಲೆಗಳ ಸಂಗ್ರಹ

Published:
Updated:
Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ಬೆಳೆಸಾಲ ಪಡೆದಿರುವ ರೈತರು ಸಾಲಮನ್ನಾ ಯೋಜನೆಗೆ ತಮ್ಮ ಹೆಸರುಗಳನ್ನು ಬ್ಯಾಂಕುಗಳಲ್ಲಿ ನೋಂದಾಯಿಸಿಕೊಳ್ಳುತ್ತಿಲ್ಲ. ಹೀಗಾಗಿ ಜ.1 ರಿಂದ ಜಿಲ್ಲಾಡಳಿತದಿಂದಲೇ ರೈತರ ಮನೆ ಮನೆಗೆ ತೆರಳಿ ಘೋಷಣಾ ಪತ್ರ ಹಾಗೂ ಅವಶ್ಯಕ ದಾಖಲೆಗಳನ್ನು ಸಂಗ್ರಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬೆಳೆಸಾಲ ಮನ್ನಾ ಯೋಜನೆ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ದಿನ 200 ರೈತರಿಂದ ಸ್ವಯಂ ಘೋಷಣಾ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್‌ ಪ್ರತಿ ಹಾಗೂ ಸರ್ವೆ ನಂಬರ್‌ಗಳ ಮಾಹಿತಿ ಸಂಗ್ರಹಿಸಬೇಕು’ ಎಂದು ಸೂಚಿಸಿದರು.

‘ರೈತರು ಪಡಿತರ ಚೀಟಿ, ಆಧಾರ್ ಕಾರ್ಡ್‌ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಗ್ರಾಮ ಲೆಕ್ಕಿಗರು ಮನೆಗೆ ಬಂದಾಗ ಸ್ವಯಂ ಘೋಷಣಾ ಪತ್ರದ ಮೇಲೆ ಸಹಿ ಹಾಕಿ, ಅವರಿಂದ ಸ್ವೀಕೃತಿ ಪತ್ರ ಪಡೆಯಬೇಕು. ಈಗಾಗಲೇ ಬ್ಯಾಂಕಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಲ್ಲಿ ಬ್ಯಾಂಕಿನಿಂದ ಪಡೆದ ಸ್ವೀಕೃತಿ ಪತ್ರವನ್ನು ಗ್ರಾಮ ಲೆಕ್ಕಿಗರಿಗೆ ತೋರಿಸಬೇಕು’ ಎಂದು ಹೇಳಿದರು.

‘ಗ್ರಾಮ ಲೆಕ್ಕಿಗರು ರೈತರ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ನಿಖರವಾಗಿ, ಸ್ಪಷ್ಟವಾಗಿ ಘೋಷಣಾ ಪತ್ರದಲ್ಲಿ ನಮೂದಿಸಬೇಕು. ಘೋಷಣಾ ಪತ್ರದಲ್ಲಿ ನಮೂದಿಸಿರುವ ಹೆಸರು ಮತ್ತು ಅಂಕಿ-ಅಂಶಗಳನ್ನು ನಿಖರವಾಗಿ ವೆಬ್‌ಸೈಟ್‌ನಲ್ಲಿ ಭರ್ತಿ ಮಾಡಬೇಕು. ವೆಬ್‌ಸೈಟ್‌ನಲ್ಲಿ ತಪ್ಪು ಮಾಹಿತಿ ಭರ್ತಿ ಮಾಡಿದರೆ ಮತ್ತೆ ಪುನಃ ಘೋಷಣಾ ಪತ್ರಗಳನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಜಾಗೃತೆ ವಹಿಸಬೇಕು. ರೈತರಿಂದ ಪಡೆದ ಘೋಷಣಾ ಪತ್ರ, ದಾಖಲಾತಿಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಸಹಕಾರ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ರೈತರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಆದರೆ, ಮಾಹಿತಿಗಳು ವೆಬ್‌ಸೈಟ್‌ನಲ್ಲಿ ತಾಳೆಯಾಗುತ್ತಿಲ್ಲ. ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದ ರೈತರ ಸ್ವಯಂ ಘೋಷಣಾ ಪತ್ರ ಹಾಗೂ ದಾಖಲಾತಿಗಳನ್ನು ಸಹ ಸಂಗ್ರಹಿಸಬೇಕಾಗಿದ್ದು, ಈ ಕುರಿತು ತಹಶೀಲ್ದಾರರು ತಾಲ್ಲೂಕು ಮಟ್ಟದ ಸಹಕಾರ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ಸಹಕಾರಿ ಬ್ಯಾಂಕಿನಿಂದ ಪಡೆದ ಬೆಳೆಸಾಲವನ್ನು ಸಹಕಾರಿ ಬ್ಯಾಂಕಿನಿಂದಲೇ ಮನ್ನಾ ಮಾಡಲಾಗುವುದು. ಸಹಕಾರಿ ಬ್ಯಾಂಕಿನ ಬೆಳೆ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಾಗಲಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಬೆಳೆ ಸಾಲವನ್ನು ಸಹಕಾರಿ ಬ್ಯಾಂಕಿನಲ್ಲಾಗಲಿ  ಮನ್ನಾ ಮಾಡಲು ಅವಕಾಶಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರ್ಗಿ ಉಪ ವಿಭಾಗಾಧಿಕಾರಿ ರಾಚಪ್ಪ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !