ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಂತಸ ಕಸಿದ ಮಳೆ

ಸೇಡಂ: ಧಾರಾಕಾರ ಸುರಿದ ಮಳೆಗೆ ಕೊಚ್ಚಿ ಹೋದ ಬೆಳೆ
Last Updated 30 ಸೆಪ್ಟೆಂಬರ್ 2020, 3:58 IST
ಅಕ್ಷರ ಗಾತ್ರ

ಸೇಡಂ: ‘ಮುಂಗಾರು ಹೆಸರು ಬೆಳೆ ಚೆನ್ನಾಗಿ ಬಂದಿತ್ತು; ಆದರೆ ನಂತರ ಸುರಿದ ಭಾರಿ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’

ಹೀಗೆಂದು ಅಲವತ್ತುಕೊಂಡವರು ತಾಲ್ಲೂಕಿನ ಮದನಾ ಗ್ರಾಮದ ರೈತ ಭೀಮಯ್ಯ ಕಲಾಲ್

‘ಭತ್ತ ಮತ್ತು ಹತ್ತಿ ಬೆಳೆಯಲ್ಲಿ ಆದರೂ ಲಾಭ ಸಿಗತೈತಿ ಅಂತ ಅಂದುಕೊಂಡಿದ್ದೆ. ಆದರೆ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಇಡೀ ಹೊಲದಲ್ಲಿದ್ದ ಬೆಳೆಗಳೇ ಕೊಚ್ಚಿಕೊಂಡು ಹೋಗಿವೆ. ಸಾರ್; ಏನ್ ಮಾಡೋದು ಅಂತಾನೆ ಗೊತ್ತಾಗ್ತಿಲ್ಲ. ಸಾಲ ಮಾಡಿ ಹೊಲ್ದಾಗ ಬೀಜ ಹಾಕಿವಿ. ಈಗ ನಮ್ಮನ್ ಯಾರ್‌ ಕಾಪಾಡ್ತಾರೆ ಸರ್’ ಎಂದು ಅವರು ಪ್ರಶ್ನಿಸಿದರು.

ಮದನಾ ಗ್ರಾಮಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ, ‘ನೋಡ್ರಿ ಸಾಹೆಬ್ರೆ ಎನ್ನುತ್ತಲೇ ಬೆಳೆಗೆ ಖರ್ಚು ಮಾಡಿದ ವಿವರ ನೀಡುತ್ತಾ ಮಳೆಯಲ್ಲಿ ಕೊಚ್ಚಿ ಹೋದ ಬೆಳೆ ತೋರಿಸಿದರು.

ನಮಗೆ ಜಮೀನ್ ಕಡಿಮೆ ಇದೆ. ಆದರೆ ಇನ್ನೊಬ್ಬರ ಬಳಿ ಜಮೀನ್ ಗಿರವಿ ಹಾಕೊಂಡಿದಿನಿ. ಅದರಲ್ಲಿ ಹೆಸರು, ಹತ್ತಿ ಮತ್ತು ಭತ್ತ ಬಿತ್ತಿ, ಚೆನ್ನಾಗಿ ಗೊಬ್ಬರ ಹಾಕಿ, ಕಳೆ ಕೂಡ ತೆಗೆಸಿದ್ದೆ. ಉತ್ತಮ ಇಳುವರಿ ಬರ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಮ್ಮ ಆದಾಯಕ್ಕೆ ಮಳೆರಾಯ ಯಮ ಬಂದಂಗ್ ಬಂದ್ ನಮ್ಮ ಸಂತಸ ಕಸಿದುಕೊಂಡ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘₹ 1.50 ಲಕ್ಷದವರೆಗೂ ಖರ್ಚು ಮಾಡಿದಿನಿ. ಆದಾಯ ಏನಿಲ್ಲವೆಂದರೂ ₹3 ಲಕ್ಷಕ್ಕೂ ಅಧಿಕ ಬರ್ತಿತ್ತು. ಆದರೆ ಈಗ ಎಲ್ಲವೂ ನೀರ್ ಪಾಲಾಗಿದೆ. ನಮ್ಮತ್ತ ಸರ್ಕಾರ ಕಣ್ತೆರೆದು ನೋಡ್ಬೇಕು’ ಎಂದು ಅವರೊಂದಿಗೆ ಧ್ವನಿಗೂಡಿಸಿದವರು
ರೈತ ನಾಗಪ್ಪ ಮರಾಠ.

ಹೀಗೆ ಅನೇಕ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಅತಿವೃಷ್ಟಿಯಿಂದಾಗಿ ತಾಲ್ಲೂಕಿನ ನೂರಾರು ರೈತರ ಸಂತಸವನ್ನೇ ಮಳೆರಾಯ ಕಸಿದುಕೊಂಡಿದ್ದಾನೆ. ನಿರೀಕ್ಷೆಗೂ ಮೀರಿ ಬಂದ ಮಳೆ ರೈತರ ಶ್ರಮವನ್ನೇ ನೀರು ಪಾಲು ಮಾಡಿದೆ. ಸೇಡಂನ ಪ್ರಮುಖ ನದಿಗಳಾದ ಕಾಗಿಣಾ ಮತ್ತು ಕಮಲಾವತಿ
ನದಿ ದಂಡೆಯ ಹೊಲಗಳ
ರೈತರ ಗೋಳು ಹೇಳತೀರದಾಗಿದೆ.

ತಾಲ್ಲೂಕಿನ ಮದನಾ, ಮುಧೋಳ, ಕದಲಾಪೂರ, ಬಟಗೇರಾ, ತೆಲ್ಕೂರ, ಯಡ್ಡಳ್ಳಿ, ಬಿಬ್ಬಳ್ಳಿ, ಕುಕ್ಕುಂದಾ, ಮೀನಹಾಬಾಳ, ಬೀರನಳ್ಳಿ, ಮಳಖೇಡ ಸೇರಿದಂತೆ ಹೀಗೆ ನದಿ ನಾಲಾಗಳಿರುವ ಪ್ರದೇಶಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿರುವ ಬೆಳೆಗಳು ಮಳೆರಾಯನ ಆರ್ಭಟಕ್ಕೆ ತುತ್ತಾಗಿವೆ.

‘ಒಂದು ಕಡೆ ಮಳೆಯಿಂದ ಅನೇಕ ಮನೆಗಳು ನೆಲಕ್ಕುರಳಿದ್ದರೆ ಮತ್ತೊಂದೆಡೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಒಂದಿಲ್ಲೊಂದು ರೀತಿಯಲ್ಲಿ ಈ ವರ್ಷ ರೈತರ ಪರಿಸ್ಥಿತಿ ಶೋಚನೀಯವಾಗಿದೆ’ ಎನ್ನುತ್ತಾರೆ ಮುಖಂಡ
ರಾಮಚಂದ್ರ ಗುತ್ತೇದಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT