ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ, ತೊಗರಿ ಬೆಳೆ ನೀರು ಪಾಲು

ಯಡ್ರಾಮಿ: ಅಳಿದುಳಿದ ಬೆಳೆಗಳಿಗೆ ರೋಗ ಬಾಧೆ, ಸಂಕಷ್ಟದಲ್ಲಿ ಅನ್ನದಾತರು
Last Updated 30 ಸೆಪ್ಟೆಂಬರ್ 2020, 4:00 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನ ವಾಣಿಜ್ಯ ಬೆಳೆ ಹತ್ತಿ, ತೊಗರಿ ಈಗ ನೀರು ಪಾಲಾಗಿದೆ. ಸತತ ಮಳೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ 18,125 ಹೆಕ್ಟೇರ್ಹತ್ತಿ ಮತ್ತು 25,530 ಹೆಕ್ಟೇರ್ತೊಗರಿ ಬಿತ್ತನೆ ಮಾಡಲಾಗಿದೆ.

ಭಾರಿ ಮಳೆಗೆ ಕೆಲ ಜಮೀನುಗಳ ಒಡ್ಡು ಒಡೆದು ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿದೆ. ಎಡೆ ಹೊಡೆದು, ಕಳೆನಾಶಕ ಸಿಂಪಡಿಸಿ ಬೆಳೆ ಜೋಪಾನ ಮಾಡುತ್ತಿರುವಾಗಲೇ ಮಳೆ ಯಿಂದ ಬೆಳೆ ಕೊಚ್ಚಿ ಹೋಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಒಣ ಬೇಸಾಯ ಇರುವ ಇಜೇರಿ, ಸಾಥಖೇಡ, ಬಿಳವಾರ ಸೇರಿ ಹಲವು ಗ್ರಾಮಗಳಲ್ಲಿ ಕೂಡ ಬೆಳೆ ಹಾನಿಯಾಗಿದೆ.

ಯಡ್ರಾಮಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ 70 ಮಿ.ಮೀ ಮಳೆಯಾಗಿದೆ. ಇಜೇರಿ, ಬಳಬಟ್ಟಿ, ವಡಗೇರಾ, ಅರಳಗುಂಡಗಿ, ಕರಕಿಹಳ್ಳಿ, ಬಿಳವಾರ, ಯಲಗೋಡ, ಆಲೂರ, ಕುಕನೂರ, ಸುಂಬಡ, ಮಾಗಣಗೇರಾ, ಕಡಕೋಳ, ಸಾಥಖೇಡ ಭಾಗಗಳಲ್ಲಿ ಭಾರಿ ಮಳೆಯಾಗಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಸತತ ಮಳೆ ಹತ್ತಿ, ತೊಗರಿ ಬೆಳೆಗಳ ಬೆಳವಣಿಗೆಗೆ ಪೆಟ್ಟು ನೀಡಿದೆ. ಇದರ ಜೊತೆ ರಸಗೊಬ್ಬರ ನೀಡಿದರೂ ನಿರೀಕ್ಷೆಗೆ ತಕ್ಕಂತೆ ಗಿಡಗಳು ಬೆಳೆಯದೆ ರೋಗದ ಗೂಡಾಗಿ ಮಾರ್ಪಟ್ಟಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ನಳನಳಿಸಬೇಕಾಗಿದ್ದ ಬೆಳೆಗಳು ಹಸಿ ತೇವಾಂಶದಿಂದ ಸೊರಗಿ ಹೋಗುತ್ತಿವೆ. ಕಡಕೋಳ, ಹಂಗರಗಾ(ಕೆ), ಬಿಳವಾರ, ಯತ್ನಾಳ, ವಡಗೇರಾ, ಸುಂಬಡ, ಯಡ್ರಾಮಿ, ನಾಗರಹಳ್ಳಿ, ಮಳ್ಳಿ, ಕೋಣಸಿರಸಿಗಿ, ಹಂಗರಗಾ(ಬಿ) ಗ್ರಾಮಗಳಿಗೆ ಹೊಂದಿಕೊಂಡು ಹರಿಯುವ ಹಳ್ಳದ ದಂಡೆಯ ಜಮೀನುಗಳ ಬಹುತೇಕ ಹತ್ತಿ, ತೊಗರಿ ಬೆಳೆ ಹಾನಿಯಾಗಿದೆ. ನೀರಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಕಪ್ಪು ಮಣ್ಣಿನಲ್ಲಿ ಬಿತ್ತನೆ ಮಾಡಿರುವ ಹತ್ತಿ, ತೊಗರಿಗೆ ರೋಗ ಆವರಿಸಿದೆ.

‘ಈಗಾಗಲೇ ಆಳುದ್ದ ಬೆಳೆದು ಹೂ ಬೀಡಬೇಕಿದ್ದ ಹತ್ತಿ, ತೋಗರಿ ನೆಲ ಬಿಟ್ಟು ಮೇಲೇಳುತ್ತಿಲ್ಲ. ಗಿಡಕ್ಕೆ ಒಂದೆರಡು ಕಾಯಿಗಳು ಕಾಣಿಸಿಕೊಳ್ಳುತ್ತಿವೆ. ಈಗ ನೀರು ನುಗ್ಗಿರುವ ಜಮೀನಿನಲ್ಲಿದ್ದ ಬೆಳೆಗಳನ್ನು ನೀರು ಬತ್ತಿದ ಕೂಡಲೇ ಆ ಬೆಳೆ ಟ್ರ್ಯಾಕ್ಟರ್ ಮೂಲಕ ತೆಗೆದು ಜೋಳ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಈ ಭಾಗದ ರೈತರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT