ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐತಿಹಾಸಿಕ ತಾಣಗಳ ಒತ್ತುವರಿ ಶೀಘ್ರ ತೆರವು’

ಸೂಕ್ತ ಮಾಹಿತಿ ನೀಡದ, ಕಾಮಗಾರಿ ವಿಳಂಬ ಮಾಡಿದ ಅಧಿಕಾರಿಗಳಿಗೆ ಸಚಿವ ತಾಕೀತು
Last Updated 17 ನವೆಂಬರ್ 2019, 13:53 IST
ಅಕ್ಷರ ಗಾತ್ರ

ಕಲಬುರ್ಗಿ: ‘ಇಲ್ಲಿನ ಬಹಮನಿ ಕೋಟೆಯೂ ಸೇರಿದಂತೆ ಪ್ರಮುಖ ಐತಿಹಾಸಿಕ ತಾಣಗಳ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲಿ ವಾಸವಾಗಿರುವವರಿಗೆ ಮಾನವೀಯತೆ ದೃಷ್ಟಿಯಿಂದ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶನಿವಾರ ಪ್ರವಾಸೋದ್ಯಮ ಯೋಜನೆಯಡಿ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ‘ಕೋಟೆ ಅತಿಕ್ರಮ ತೆರವು ಮಾಡಿಸಲು ಹೈಕೋರ್ಟ್‌ ನೀಡಿರುವ ಆದೇಶ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡುವುದಾಗಿ’ ತಿಳಿಸಿದರು.

‘ಪುರಾತತ್ವ ಇಲಾಖೆಯಡಿ ಬರುವ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ತಮ್ಮದು ಎಂದು ವಾದಿಸಲು ಹೇಗೆ ಸಾಧ್ಯ? ಒಂದು ವೇಳೆ ಅಲ್ಲಿ ನಳ, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರೂ ಅದೂ ಅಕ್ರಮವೇ ಆಗುತ್ತದೆ’ ಎಂದರು.

‘ಕೋಟೆ ಆವರಣದಲ್ಲಿನ ಮನೆಗಳನ್ನು ಪಾಲಿಕೆಯಲ್ಲಿ ‘ಖಾತಾ’ ಮಾಡಿಕೊಟ್ಟಿದ್ದರೆ; ವಾಸಿಸಿದವರು ಹಾಗೂ ತಪ್ಪು ಮಾಡಿದ ಎಲ್ಲ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ’ ಎಂದೂ ಸಚಿವರು ಎಚ್ಚರಿಸಿದರು.

‘ಕಾನೂನುಗಿಂತ ಯಾರೂ ದೊಡ್ಡವರಲ್ಲ. ಮಾನವೀಯತೆಯಿಂದ ಅವರಿಗೆ ಬೇರೆ ವಸತಿ ವ್ಯವಸ್ಥೆ ಮಾಡಿಕೊಡಲು ಸರ್ಕಾರ ಸಿದ್ಧವಿದೆ. ಆದರೆ, ಅದು ಕಾನೂನು ಪ್ರಕಾರವಲ್ಲ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿ ವಿಶೇಷ ಸಭೆಯನ್ನು ಕರೆಯಬೇಕು’ ಎಂದರು.

ಅಭಿಪ್ರಾಯ ಸಂಗ್ರಹ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಗಣ್ಯರ, ಸಾಧಕರ, ಧಾರ್ಮಿಕ ನಾಯಕರ 28 ಜಯಂತಿಗಳನ್ನು ಆಚರಿಸಲಾಗುತ್ತಿದೆ. ಆದರೆ, ಕೆಲವು ಕಡೆಗಳಲ್ಲಿ ಜಯಂತಿಗೆ ಜನರು ಸ್ಪಂದಿಸುತ್ತಿಲ್ಲ. ಹೀಗಾಗಿ, ಜಯಂತಿಗಳ ಸ್ವರೂಪ ಬದಲಿಸಬೇಕೆ ಇಲ್ಲವೇ ಕೈಬಿಡಬೇಕೆ ಎಂಬುದರ ಕುರಿತು ಜನರ, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ, ವರದಿ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಕಲಬುರ್ಗಿ ರಂಗಾಯಣಕ್ಕೆ ಶೀಘ್ರದಲ್ಲಿಯೇ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ಈಗಾಗಲೇ ರಂಗ ಸಮಾಜದ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅವರು ಚರ್ಚಿಸಿ ವರದಿ ಸಲ್ಲಿಸಲಿದ್ದಾರೆ. ಅದನ್ನಾಧಿರಿಸಿ ನೇಮಕ ಮಾಡಲಾಗುತ್ತದೆ. ಜಿಲ್ಲೆಯವರಿಗೇ ನಿರ್ದೇಶಕ ಹುದ್ದೆ ನೀಡಲು ಪ್ರಯತ್ನಿಸಲಾಗುವುದು ಎಂದೂ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೆಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಆರ್. ಗುತ್ತೇದಾರ, ಎಂ.ವೈ. ಪಾಟೀಲ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ತಿಪ್ಪಣ್ಣ ಕಮಕನೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT