ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಪಾರದರ್ಶಕತೆಯ ಕೊರತೆ: ವಿಶ್ರಾಂತ ಕುಲಪತಿ ಪ್ರೊ.ಇಂದುಮತಿ

Last Updated 13 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬೇರೆ ದೇಶಗಳ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ನಮ್ಮ ವಿಶ್ವವಿದ್ಯಾಲಯಗಳ ಶಿಕ್ಷಣ ಗುಣಮಟ್ಟ ಕಡಿಮೆ ಇದೆ. ಸರ್ಕಾರದ ಅತಿಯಾದ ಹಸ್ತಕ್ಷೇಪ ಮತ್ತು ಪಾರದರ್ಶಕತೆಯ ಕೊರತೆಯೇ ಇದಕ್ಕೆ ಕಾರಣ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಇಂದುಮತಿ ಹೇಳಿದರು.

ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಬುಧವಾರ ಆಯೋಜಿಸಿದ್ದ ‘ಜಾಗತೀಕರಣ ಮತ್ತು ಉನ್ನತ ಶಿಕ್ಷಣ’ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

‘ಗುಣಮಟ್ಟಕ್ಕಿಂತ ಪ್ರಮಾಣಕ್ಕೆ ಹೆಚ್ಚು ಒತ್ತು ನೀಡುವುದು, ಮೂಲಸೌಕರ್ಯಗಳ ಅಭಾವ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಶ್ರದ್ಧೆಯ ಕೊರತೆಗಳೂ ಇದಕ್ಕೆ ಕಾರಣವಾಗಿವೆ’ ಎಂದು ಅವರು ವಿಷಾದಿಸಿದರು.

‘ದೇಶದ ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ಅತ್ಯಮೂಲ್ಯ. ಮಾನವ ಸಂಪನ್ಮೂಲವನ್ನು ಬಂಡವಾಳವನ್ನಾಗಿ ಪರಿವರ್ತಿಸುವಲ್ಲಿ ಉನ್ನತ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖವಾದುದು’ ಎಂದರು.

‘ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಪರಿವರ್ತನೆಯ ಹಂತದಲ್ಲಿದ್ದು, ನಿರ್ದಿಷ್ಟರೂಪ ಪಡೆಯಬೇಕಿದೆ. ಭಾರತ ಬಹು ಭಾಷೆ ಮತ್ತು ಸಂಸ್ಕೃತಿಯ ರಾಷ್ಟ್ರವಾಗಿದ್ದು, ಒಂದು ಭಾಷೆ, ಒಂದು ಪಠ್ಯಕ್ರಮ ಸರಿಹೊಂದುವುದಿಲ್ಲ’ ಎಂದು ಹೇಳಿದರು.

‘ನೈತಿಕ ಶಿಕ್ಷಣ ಮರೆಯಾಗುತ್ತಿದ್ದು, ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಿಸುವುದರ ಮೂಲಕ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ಯುವಜನತೆ ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳತ್ತ ಮುಖಮಾಡುತ್ತಿದ್ದು, ಅವರ ಭವಿಷ್ಯ ಕೇವಲ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಇಲ್ಲ. ಬದಲಾಗಿ ಸದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ವಿದ್ಯಾಭ್ಯಾಸ ಮಾಡಿ ಇಲ್ಲಿಯೇ ರೂಪಿಸಿಕೊಳ್ಳಬಹುದಾಗಿದೆ’ ಎಂದು ಕಿವಿಮಾತು ಹೇಳಿದರು.

‘ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ದುರಂತ. ಅಂಕ ಗಳಿಕೆ ಮತ್ತು ಇಂಗ್ಲಿಷ್‌ ಭಾಷೆಯ ಜ್ಞಾನ ಮಾತ್ರ ಶಿಕ್ಷಣ ಎಂದು ಅವರು ತಿಳಿಸಿದ್ದಾರೆ. ಭಾಷೆ ಜ್ಞಾನವಲ್ಲ. ಅದು ಒಂದು ಮಾಧ್ಯಮ ಅಷ್ಟೇ. ಆದ್ದರಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಒತ್ತು ನೀಡಬೇಕೆ ಹೊರತು ಕೇವಲ ಇಂಗ್ಲಿಷ್‌ ಭಾಷೆಗೆ ಅಲ್ಲ’ ಎಂದರು.

ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಾದಯ್ಯ, ಪ್ರೊ.ಎಂ.ವಿ. ಅಳಗವಾಡಿ, ಡಾ.ಬಸವರಾಜ ಎಂ.ಎಸ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT