ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ: ಹಾಸ್ಟೆಲ್‌ ತೊರೆಯುವಂತೆ 15 ಸಂಶೋಧನಾ ವಿದ್ಯಾರ್ಥಿಗಳಿಗೆ ನೋಟಿಸ್‌

ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಸಿಯುಕೆ ಕ್ರಮ
Last Updated 4 ಜುಲೈ 2022, 13:32 IST
ಅಕ್ಷರ ಗಾತ್ರ

ಕಲಬುರಗಿ: ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 15 ಸಂಶೋಧನಾ ವಿದ್ಯಾರ್ಥಿಗಳಿಗೆ ತಕ್ಷಣ ವಿಶ್ವವಿದ್ಯಾಲಯದ ಹಾಸ್ಟೆಲ್‌ ತೊರೆಯುವಂತೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ನೋಟಿಸ್‌ ನೀಡಿದೆ.

ಹಿಂದಿ ಅಧ್ಯಯನ ವಿಭಾಗದ ಜಯಶ್ರೀ, ಸತೀಶ್‌, ರಾಜಶೇಖರ್‌ ಪವಾರ್‌, ಈಶ್ವರ್‌ ರಾಠೋಡ್‌, ಭೌತಶಾಸ್ತ್ರ ವಿಭಾಗದ ಸುಖ್‌ಜೋತ್‌ ಸಿಂಗ್‌, ಅರ್ಥಶಾಸ್ತ್ರದ ವಿಭಾಗದ ಸುಮಿತ್‌ಕುಮಾರ್‌ ಶಾಹು ಸೇರಿದಂತೆ 15 ವಿದ್ಯಾರ್ಥಿಗಳಿಗೆ ಜುಲೈ 1ರಂದು ವಿದ್ಯಾರ್ಥಿಗಳ ಕ್ಷೇಮಪಾಲನಾ ವಿಭಾಗದ ಡೀನ್‌ ನೋಟಿಸ್‌ ನೀಡಿದ್ದಾರೆ.

ನೋಟಿಸ್‌ನಲ್ಲಿ ಏನಿದೆ: ನಾಲ್ಕು ವರ್ಷದ ಅವಧಿ ಪೂರ್ಣಗೊಂಡಿರುವ ಪಿಎಚ್‌ಡಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯಗಳನ್ನು ತಕ್ಷಣವೇ ಖಾಲಿ ಮಾಡಬೇಕು. ಈ ಸಂಬಂಧ ವರದಿಯನ್ನು ಮೂರು ದಿನಗಳ ಒಳಗೆ ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘ಯುಜಿಸಿ ನಿಯಮದ ಪ್ರಕಾರ ಫೆಲೋಶಿಪ್‌ ಹೊಂದಿರುವ ಸಂಶೋಧನಾ ವಿದ್ಯಾರ್ಥಿಗೆ ಪಿಎಚ್‌ಡಿ ಕೋರ್ಸ್‌ ಪೂರ್ಣಗೊಳಿಸಲು ನಾಲ್ಕು ವರ್ಷದ ಅವಧಿ ಇದೆ. ಮತ್ತೆ ಎರಡು ವರ್ಷ ಅವಧಿ ವಿಸ್ತರಿಸಿಕೊಳ್ಳಲು ಅವಕಾಶವಿದೆ. ನಮ್ಮ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಎರಡು ವರ್ಷ ಕೋವಿಡ್‌ ಸಮಸ್ಯೆಯಿತ್ತು. ಹೀಗಾಗಿ ಯುಜಿಸಿಯೇ ಮೇ 22ರಂದು ಆದೇಶ ಹೊರಡಿಸಿ, ಈ ವರ್ಷದ ಡಿಸೆಂಬರ್‌ವರೆಗೆ ಅವಧಿ ವಿಸ್ತರಿಸಿ ಸಂಶೋಧನಾ ವರದಿ ಮಂಡನೆಗೆ ಅವಕಾಶ ನೀಡಿದೆ. ಆದರೂ ವಿದ್ಯಾರ್ಥಿಗಳಲ್ಲಿ ಭಯಹುಟ್ಟಿಸುವ ಸಲುವಾಗಿ ನೋಟಿಸ್‌ ನೀಡಲಾಗಿದೆ. ಇದರಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳು ಎಲ್ಲಿ ಉಳಿದುಕೊಳ್ಳಬೇಕು? ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

ಈ ಕುರಿತು ‍ಪ್ರತಿಕ್ರಿಯಿಸಿದಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಸವರಾಜ ಡೋಣೂರ, ‘ಇದು ಸಾಮಾನ್ಯ ಪ್ರಕ್ರಿಯೆ. ಹೊಸ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ನಾಲ್ಕು ವರ್ಷ ಅವಧಿ ಪೂರೈಸಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿದೆ’ ಎಂದು ತಿಳಿಸಿದರು.

‘ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗೆ ನಾಲ್ಕು ವರ್ಷ ಮಾತ್ರ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ನಿಯಮವೇ ಇದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ನಾಲ್ಕು ವರ್ಷ ಪೂರೈಸಿರುವ 15 ಮಂದಿಗೆ ನೋಟಿಸ್‌ ನೀಡಲಾಗಿದೆ. ಇದರಿಂದ ತೊಂದರೆಯಾದ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕರ ಮೂಲಕ ತಮ್ಮನ್ನು ಭೇಟಿ ಮಾಡಬೇಕು’ ಎಂದು ಸಿಯುಕೆ ವಿದ್ಯಾರ್ಥಿಗಳ ಕ್ಷೇಮಪಾಲನಾ ವಿಭಾಗದ ಡೀನ್‌ ಡಾ.ಆರ್‌.ಎಸ್‌.ಹೆಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೆಆರ್‌ಎಫ್ ಸಂಶೋಧನಾ ವಿದ್ಯಾರ್ಥಿಗಳಿಗೆ 5 ವರ್ಷ, ಇತರೆ ಫೆಲೋಶಿಪ್‌ನ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ಒಳಗೆ ಸಂಶೋಧನಾ ವರದಿ ಮಂಡಿಸಲು ಅವಕಾಶವಿದೆ. ಸಂಶೋಧನಾ ಕಾರ್ಯ ಅಪೂರ್ಣವಾಗಿದ್ದರೆ, ಮತ್ತೆರಡು ವರ್ಷ ಅವಧಿ ವಿಸ್ತರಿಸಿಕೊಳ್ಳಲು ಅವಕಾಶವಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಇರಲು ಅವಕಾಶ ಮಾಡಿಕೊಡಬೇಕು. ಕೋವಿಡ್‌ ಸಂದರ್ಭದಲ್ಲಿ ಯುಜಿಸಿಯೇ ನಾಲ್ಕು ಬಾರಿ ಅವಧಿ ವಿಸ್ತರಿಸಿದೆ. ಇದರ ವಿಸ್ತರಣೆಯೇ ಕೊನೆಯ ಅವಧಿ ಈ ವರ್ಷದ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಹೀಗಿದ್ದರೂ ಹಾಸ್ಟೆಲ್‌ ಖಾಲಿ ಮಾಡುವಂತೆ ನೋಟಿಸ್‌ ನೀಡುವುದು ಸರಿಯಲ್ಲ’ ಎಂದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರು ಹೇಳಿದರು.

----------------------------------------------------------------------------------------------------------

ಸಿಯುಕೆ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ

ನೋಟಿಸ್‌ ನೀಡಿರುವ ವಿಶ್ವವಿದ್ಯಾಲಯದ ಕ್ರಮ ಖಂಡಿಸಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಸೋಮವಾರ ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ಒಕ್ಕೂಟ ಹಾಗೂ ಸಿಯುಕೆ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ನಡೆಸಿದೆ.

‘ವಿದ್ಯಾರ್ಥಿನಿಲಯಗಳಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಸಮರ್ಪಕ ಕುಡಿಯುವ ನೀರಿಲ್ಲ. ಸ್ವಚ್ಛತೆ ಸಮಸ್ಯೆ ಕುರಿತು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದೆವು. ಆದರೆ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕಾದ ವಿಶ್ವವಿದ್ಯಾಲಯವು ಅವರಲ್ಲಿ ಭಯಹುಟ್ಟಿಸುವ ಸಲುವಾಗಿ ನೋಟಿಸ್‌ ನೀಡಲಾಗಿದೆ’ ಎಂದು ಸಂಶೋಧನಾ ವಿದ್ಯಾರ್ಥಿಗಳು ಆರೋಪಿಸಿದರು.

‘ವಿದ್ಯಾರ್ಥಿಗಳು ಪ್ರಶ್ನಿಸಬಾರದು ಎಂದು ಹಾಸ್ಟೆಲ್‌ ಖಾಲಿ ಮಾಡಿಸಲು ಮುಂದಾಗಿದ್ದಾರೆ. ನಾವು ಮತ್ತೊಬ್ಬ ರೋಹಿತ್‌ ವೇಮುಲ ಆಗಲು ಸಿದ್ಧರಿದ್ದೇವೆ. ನೋಟಿಸ್‌ ನೀಡಿದ ವಿದ್ಯಾರ್ಥಿಗಳ ಪೈಕಿ ಶೇ 90ರಷ್ಟು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು. ವಿಶ್ವವಿದ್ಯಾಲಯವು ಇತ್ತೀಚೆಗೆ ದಲಿತ, ಆದಿವಾಸಿ ಹಾಗೂ ಬಹುಜನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

‘ವಿವಿ ಅಧೀನದ ಹಾಸ್ಟೆಲ್‌ಗಳನ್ನು ವಿದ್ಯಾರ್ಥಿಗಳೇ ಮುನ್ನಡೆಸಬೇಕು ಎಂದು ಎಂಬ ನಿಯಮವಿದೆ. ಆದರೆ ಇತ್ತೀಚೆಗೆ ಆದರೆ ಈ ಹಾಸ್ಟೆಲ್‌ಗಳ ಊಟದ ಹೊಣೆಯನ್ನು ಮಧ್ಯಪ್ರದೇಶದ ಏಜೆನ್ಸಿಯೊಂದಕ್ಕೆ ಟೆಂಡರ್‌ ನೀಡಿದ್ದಾರೆ. ಈ ಏಜೆನ್ಸಿಯು ಕಳಪೆ ಆಹಾರ ನೀಡುತ್ತಿದೆ. ಹಾಗಾಗಿ ಹಾಸ್ಟೆಲ್‌ಗಳಲ್ಲಿ ಸಮಸ್ಯೆ ಎದುರಾಗಿದೆ. ಈ ಹಿಂದೆ ಟೆಂಡರ್‌ ವ್ಯವಸ್ಥೆ ಇರಲಿಲ್ಲ. ಈಗಿನ ಕುಲಸಚಿವರು ಅದಕ್ಕೆ ಅವಕಾಶ ನೀಡಿರುವುದು ಸಮಸ್ಯೆಗೆ ಕಾರಣವಾಗಿದೆ’ ಎಂದು ನೌಕರರೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT