ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ವಿರುದ್ಧದ ಕಲ್ಲುತೂರಾಟ ಪ್ರಕರಣ ವಜಾ: ರಾಜನಾಥ್‌ ಘೋಷಣೆ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಅರುಣೋದಯವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರ ವಿರುದ್ಧ ಮಕ್ಕಳ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಭದ್ರತಾ ಪರಿಸ್ಥಿತಿಯ ಅವಲೋಕನಕ್ಕಾಗಿ ರಾಜನಾಥ್‌ ಅವರ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಭೇಟಿ ಗುರುವಾರ ಆರಂಭವಾಯಿತು. ‘ಮಕ್ಕಳನ್ನು ದಾರಿ ತಪ್ಪಿಸುವುದು ಬಹಳ ಸುಲಭ. ಈ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಹಾಗಾಗಿಯೇ ಮಕ್ಕಳ ವಿರುದ್ಧ ಇರುವ ಕಲ್ಲು ತೂರಾಟ ಪ್ರಕರಣಗಳನ್ನು ವಜಾ ಮಾಡಲಾಗುವುದು’ ಎಂದು ಹೇಳಿದರು.

‘ಮಕ್ಕಳು ಎಲ್ಲೆಡೆಯೂ ಒಂದೇ ರೀತಿ ಇರುತ್ತಾರೆ. ಕೆಲವು ಯುವಕರನ್ನು ಕೂಡ ಕಲ್ಲು ತೂರಾಟ ನಡೆಸುವಂತೆ ದಾರಿ ತಪ್ಪಿಸಲಾಗಿದೆ’ ಎಂದರು.

ಕಾಶ್ಮೀರದ ಫುಟ್‌ಬಾಲ್‌ ಆಟಗಾರ್ತಿ ಅಫ್ಸಾನ್‌ ಆಶಿಖ್‌ ಅವರ ಉದಾಹರಣೆಯನ್ನು ರಾಜನಾಥ್ ಉಲ್ಲೇಖಿಸಿದರು. ಫುಟ್‌ಬಾಲ್‌ ತಂಡ ಸೇರಿಕೊಳ್ಳುವ ಮೊದಲು ಅಫ್ಸಾನ್‌ ಅವರು ಕಲ್ಲು ತೂರಾಟ ನಡೆಸುವ ಯುವ ಪಡೆಯ ಭಾಗವಾಗಿದ್ದರು. ‘ಅಫ್ಸಾನ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೆ. ಆಟಗಾರ್ತಿಯಾಗುವ ಮೊದಲು ಕಲ್ಲು ತೂರಾಟ ನಡೆಸುತ್ತಿದ್ದುದಾಗಿ ಅವರು ಹೇಳಿದರು. ಆದರೆ, ಕ್ರೀಡೆಯ ಭಾಗವಾದ ಬಳಿಕ ಆಕೆಯ ಬದುಕೇ ಬದಲಾಗಿದೆ. ಕ್ರೀಡೆಯು ನಿಮ್ಮೆಲ್ಲರ ಜೀವನದಲ್ಲಿ ಬದಲಾವಣೆ ತರಬಲ್ಲುದು’ ಎಂದು ರಾಜನಾಥ್‌ ವಿವರಿಸಿದರು.

ಶ್ರೀನಗರ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾವಿರಾರು ಯುವ ಜನರು ಪ್ರೇಕ್ಷಕರಾಗಿದ್ದರು. ಇದನ್ನು ಕಂಡು ಖುಷಿಗೊಂಡ ರಾಜನಾಥ್‌ ತಮ್ಮ ಸಂತಸವನ್ನು ಅಡಗಿಸಲಿಲ್ಲ. ಹೊಸ ತಲೆಮಾರನ್ನು ಶ್ಲಾಘಿಸಿದರು, ಗಡಿ ರಾಜ್ಯದ ದಿಕ್ಕನ್ನೇ ಬದಲಿಸುವ ಶಕ್ತಿ ಯುವ ಜನರಲ್ಲಿ ಇದೆ ಎಂದರು.

ರಾಜನಾಥ್‌ ಅವರ ಮಾತನ್ನು ಯುವ ಜನರು ಭಾರಿ ಚಪ್ಪಾಳೆಯೊಂದಿಗೆ ಅನುಮೋದಿಸಿದಾಗ, ಅವರು ಮತ್ತು ಉಪಸ್ಥಿತರಿದ್ದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಖದಲ್ಲಿ ನಗು ಮೂಡಿತು.

ಕದನವಿರಾಮ ವಿಸ್ತರಣೆ?
ರಮ್ಜಾನ್‌ ಪ್ರಯುಕ್ತ ಕೇಂದ್ರ ಘೋಷಿಸಿದ ಕದನವಿರಾಮದ ಬಳಿಕ ಉಗ್ರರು ನಡೆಸಿದ ಹಲವು ದಾಳಿಗಳು ಮತ್ತು ಗಡಿಯಾಚೆಗಿನಿಂದ ಕದನವಿರಾಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯ ಅವಲೋಕನಕ್ಕಾಗಿ ರಾಜನಾಥ್‌ ಸಿಂಗ್‌ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

ಕದನ ವಿರಾಮ ವಿಸ್ತರಿಸುವ ಮತ್ತು ಪ್ರತ್ಯೇಕತಾವಾದಿಗಳ ಜತೆಗೆ ಮಾತುಕತೆ ನಡೆಸುವ ಸಾಧ್ಯತೆಗಳನ್ನು ಅವರು ಪರಿಶೀಲಿಸಲಿದ್ದಾರೆ.

**

ಕಾಶ್ಮೀರದ ಬಗ್ಗೆ ಮೋದಿ ಅವರ ಮನದಲ್ಲಿ ಅತೀವ ಪ್ರೀತಿ ಇದೆ. ರಾಜ್ಯ ಸರ್ಕಾರದ ನೆರವಿನೊಂದಿಗೆ ಈ ರಾಜ್ಯದ ಚಹರೆ ಮತ್ತು ದಿಕ್ಕನ್ನೇ ನಾವು ಬದಲಿಸುತ್ತೇವೆ
– ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT