ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ ಸರಿಯಲ್ಲ: ವಿಠ್ಠಲ ದೊಡ್ಡಮನಿ

Last Updated 8 ನವೆಂಬರ್ 2021, 16:13 IST
ಅಕ್ಷರ ಗಾತ್ರ

ಕಲಬುರಗಿ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಸಮುದಾಯದವರಿಗೆ ಕೊಟ್ಟಂತಹ ಕಾರ್ಯಕ್ರಮ, ಸ್ಥಾನಮಾನಗಳು ಇತಿಹಾಸ ಪುಟದಲ್ಲಿ ಬರೆದಿಡುವಂತದ್ದಾಗಿವೆ. ಇಂತಹವರ ವಿರುದ್ಧ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ’ ಎಂದು ಪರಿಶಿಷ್ಟ ಜಾತಿ ಮುಖಂಡ ವಿಠ್ಠಲ ದೊಡ್ಡಮನಿ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಯವರ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಸೇರಿದಂತೆ ಪಕ್ಷದ ನಾಯಕರು ನಡೆಸುತ್ತಿರುವ ಪ್ರತಿಭಟನೆಯನ್ನು ಖಂಡಿಸುತ್ತೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಬಿಜೆಪಿ ನಾಯಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪರಿಶಿಷ್ಟ ಜಾತಿಯವರ ಮೇಲೆ ಕಾಳಜಿ ಇದ್ದರೆ ಅವರ ಪರವಾದ ಕಾನೂನುಗಳನ್ನು ಮಾಡಿ ಈ ಮೂಲಕ ಅವರನ್ನು ಓಲೈಸುವ ಪ್ರಯತ್ನ ಮಾಡಬೇಕೇ ಹೊರತು ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗದವರ ಏಳಿಗೆಗಾಗಿ ದುಡಿದಿರುವ, ದುಡಿಯುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ಟೀಕಿಸುವುದು ಸರಿಯಲ್ಲ. ಮುಖ್ಯಮಂತ್ರಿಯಾದ 24 ಗಂಟೆ ಒಳಗೆ ಸಿದ್ದರಾಮಯ್ಯ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರಿಗೆ ಸಾಲಮನ್ನಾ ಮಾಡಿ ಅವರ ಬಾಳಿಗೆ ಬೆಳಕಾಗಿದ್ದಾರೆ’ ಎಂದರು.

‘ಐದು ವರ್ಷಗಳಲ್ಲಿ ₹88,395 ಕೋಟಿ ಅನುದಾನವನ್ನು ಪರಿಶಿಷ್ಟ ಜಾತಿಯವರಿಗಾಗಿ ಮೀಸಲಿಟ್ಟಿದ್ದಾರೆ. ದೇಶದ ಇತಿಹಾಸದಲ್ಲೇ ಕರ್ನಾಟಕದಲ್ಲಿ ಗುತ್ತಿಗೆ ಪಡೆಯಲು ಪರಿಶಿಷ್ಟ ಜಾತಿಯವರಿಗೂ ಮೀಸಲಾತಿ ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಿದ್ದಾರೆ. ಅವರ ಸಂಪುಟದಲ್ಲಿ ಬಸವಣ್ಣನವರ ಸಮಾನತೆಯು ಎದ್ದು ಕಾಣುತ್ತಿತ್ತು. ಪರಿಶಿಷ್ಟ ಜಾತಿಯವರು, ಹಿಂದುಳಿದವರು, ಅಲ್ಪಸಂಖ್ಯಾತ ವರ್ಗದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ನೀಡಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ಬಿಜೆಪಿಯವರು ಪರಿಶಿಷ್ಟ ಜಾತಿ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡುವಂತೆ ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿಯ ನಾಯಕರು ಒತ್ತಾಯಿಸಬೇಕಿದೆ. ಖಾಸಗಿಯವರಿಗೆ ಉತ್ತೇಜನ ನೀಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಗಿಸಿ ಮೀಸಲಾತಿ ಕಸಿಯುವ ಹುನ್ನಾರ ಮಾಡಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ 3 ವರ್ಷದಿಂದ ನೇಮಕಾತಿ ಮಾಡುತ್ತಿಲ್ಲ. ಪ್ರತಿ ವರ್ಷ ಆರು ಲಕ್ಷ ಉದ್ಯೋಗ ಭರ್ತಿ ಮಾಡಲು ಅವಕಾಶವಿದ್ದರೂ ಮಾಡಿಲ್ಲ. ಬಿಎಸ್‌ಎನ್‌ಎಲ್‌ ಮುಚ್ಚುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಸೊಲ್ಲೆತ್ತಿರಿ’ ಎಂದು ಒತ್ತಾಯಿಸಿದರು.

ಮುಖಂಡ ಎ.ಬಿ. ಹೊಸಮನಿ ಮಾತನಾಡಿ, ‘ದೆಹಲಿಯ ಜಂತರ್ ಮಂತರ್‌ನಲ್ಲಿ ದುಷ್ಕರ್ಮಿಗಳು ಸಂವಿಧಾನದ ಪ್ರತಿಯನ್ನು ಹರಿದು ಹಾಕಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಏನು ಮಾಡಿದರು? ಮಾಜಿ ಸಚಿವ ಅನಂತಕುಮಾರ ಹೆಗಡೆ ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದು ಬಹಿರಂಗ ಹೇಳಿಕೆ ಕೊಟ್ಟಾಗ ಬಿಜೆಪಿಯವರು ಏಕೆ ಹೋರಾಟ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನವರು ಅಂಬೇಡ್ಕರ್‌ ಅವರ ಅಂತ್ಯಸಂಸ್ಕಾರಕ್ಕೆ ರಾಜಘಾಟ್‌ನಲ್ಲಿ ಕಾಂಗ್ರೆಸ್ ಸರ್ಕಾರ ಜಾಗ ನೀಡಲಿಲ್ಲ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ಬಿಜೆಪಿಯವರು ಅಂಬೇಡ್ಕರ್‌ ಅವರಿಗಾಗಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಲಿ’ಎಂದರು.

ಮುಖಂಡರಾದ ಬಸಯ್ಯ ಗುತ್ತೇದಾರ, ಮಹಾಂತೇಶ ಕೌಲಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT