ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಅಲೆಮಾರಿಗಳಿಗೆ ನಿವೇಶನ ನೀಡಲು ಆಗ್ರಹಿಸಿ ಧರಣಿ

Last Updated 20 ನವೆಂಬರ್ 2019, 16:20 IST
ಅಕ್ಷರ ಗಾತ್ರ

ಕಲಬುರ್ಗಿ: ನೂತನ ತಾಲ್ಲೂಕು ಕೇಂದ್ರವಾಗಿರುವ ಕಮಲಾಪುರ ಹೊರವಲಯದಲ್ಲಿ ಸುಮಾರು 50 ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸವಾಗಿರುವ ಅಲೆಮಾರಿ ದಾಸ ಸಮುದಾಯಕ್ಕೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸರ್ವೆ ನಂ 49ರಲ್ಲಿ ಹಲವು ವರ್ಷಗಳಿಂದ 20 ಕುಟುಂಬಗಳು ವಾಸವಾಗಿದ್ದು, ಅಲ್ಲಿನ ಸರ್ಕಾರಿ ನಿವೇಶನಗಳನ್ನು ಮಂಜೂರು ಮಾಡಲು ಹಲವು ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾಯಂ ವಾಸಸ್ಥಳ ಇಲ್ಲದಿರುವುದರಿಂದ ಈ ಅಲೆಮಾರಿ ಕುಟುಂಬಗಳಿಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ವಾಸಸ್ಥಳ ಪ್ರಮಾಣಪತ್ರವೂ ದೊರೆತಿಲ್ಲ. ಅಗತ್ಯ ದಾಖಲೆಗಳು ಇಲ್ಲದ ಕಾರಣ ಈ ಕುಟುಂಬದ ಮಕ್ಕಳು ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಅಲೆಮಾರಿ ಸಮುದಾಯದವರು ಸಣ್ಣಪುಟ್ಟ ವ್ಯಾಪಾರ ಮಾಡುತ್ತ ಬದುಕುತ್ತಿದ್ದು, ರಾತ್ರಿ ಸಮಯದಲ್ಲಿ ಗುಡಿಸಲುಗಳಿಗೆ ಕಾಡುಹಂದಿಗಳು, ವಿಷಕಾರಿ ಪ್ರಾಣಿಗಳು ನುಗ್ಗುತ್ತವೆ. ಮಳೆ–ಗಾಳಿ ಬಂದಾಗ ಗುಡಿಸಲಿನ ಮೇಲೆ ಹೊದಿಕೆ ಇದ್ದ ಬಟ್ಟೆ ಹಾರಿ ಹೋಗುವುದರಿಂದ ಚಳಿಯಲ್ಲಿಯೇ ರಾತ್ರಿ ಕಳೆಯಬೇಕಾಗಿದೆ. ಬಡವರ ಪರವಾಗಿ, ಸೂರು ಇಲ್ಲದವರ ಪರವಾಗಿ ಹಲವು ಯೋಜನೆಗಳಿದ್ದರೂ ಈ ಸಮುದಾಯ ಅಂತಹ ಯೋಜನೆಯಗಳಿಂದ ವಂಚಿತವಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಟೀಕಿಸಿದರು.

ಖಾಲಿ ಇರುವ ಜಮೀನಿನಲ್ಲಿ ಈ ಕುಟುಂಬಗಳಿಗೆ ಎರಡು ಎಕರೆಯನ್ನು ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಶರಣು ಜೆ.ಡಿ., ದೇವಿಂದ್ರ ಕಲಬಂಡೆ, ಜಿಲ್ಲಾ ಖಜಾಂಚಿ ಸೂರ್ಯಕಾಂತ ಆಜಾದಪೂರ, ನಗರ ಸಂಚಾಲಕ ಶಿವುಕುಮಾರ ಕೋರಳ್ಳಿ, ಜೇವರ್ಗಿ ತಾಲ್ಲೂಕು ಸಂಚಾಲಕ ಮಹೇಶ ಕೋಕಿಲೆ, ಕಲಬುರ್ಗಿ ಜಿಲ್ಲಾ ಸಂಚಾಲಕ ಸಂತೋಷ ಗದ್ದಿ, ಯಾದಗಿರಿ ಜಿಲ್ಲಾ ಸಂಘಟನಾ ಸಂಚಾಲಕ ಅಜೀಜಸಾಬ್‌ ಐಕೂರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT