ಮಂಗಳವಾರ, ಜನವರಿ 28, 2020
19 °C
ಮಾನಸಿಕ ಕಿರುಕುಳದಿಂದ ಕೋಗನೂರ ಗ್ರಾ.ಪಂ. ಡೇಟಾ ಎಂಟ್ರಿ ಆಪರೇಟರ್ ಸಾವು ಆರೋಪ

ಪಿಡಿಒ ವಜಾಕ್ಕೆ ಒತ್ತಾಯಿಸಿ ಶವ ಇಟ್ಟು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಕೋಗನೂರ ಗ್ರಾಮದಲ್ಲಿ ಬುಧವಾರ ಮೃತಪಟ್ಟ ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ಜಾಲಿಂದ್ರನಾಥ ಜಮಾದಾರ ಅವರು ಪಿಡಿಒ ಸಿದ್ದಾರಾಮ ಬಬಲೇಶ್ವರ ನೀಡಿದ ಮಾನಸಿಕ ಚಿತ್ರಹಿಂಸೆಯಿಂದ ಸಾವಿಗೀಡಾಗಿದ್ದು, ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶವವನ್ನು ಗ್ರಾ.‍ಪಂ. ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ಮಾನಸಿಕ ಚಿತ್ರಹಿಂಸೆಯಿಂದಲೇ ರಕ್ತದೊತ್ತಡ ಉಂಟಾಗಿ ಸಾವು ಸಂಭವಿಸಿದೆ ಎಂದು ಆರೋಪಿಸಿದ ರಾಜ್ಯ ಗ್ರಾಮ ಪಂಚಾಯತ್ ಕ್ಲರ್ಕ್ ಕಂ. ಡಾಟಾ ಎಂಟ್ರಿ ಆಪರೇಟರ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಮೃತರ ಕುಟುಂಬಕ್ಕೆ ₹ 20 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರತಿಭಟನಾಕಾರರು ಸ್ಥಳಕ್ಕೆ ಬಂದ ಪ್ರೊಬೇಷನರಿ ಐಎಎಸ್‌ ಅಧಿಕಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲಕಯ್ಯ ಎಂ.ಹಿರೇಮಠ ಮಾತನಾಡಿ, ಜಾಲಿಂದ್ರನಾಥ ಜಮಾದಾರ ಅವರಿಗೆ ಸಿದ್ದಾರಾಮ ಬಬಲೇಶ್ವರ ಮಾನಸಿಕ ಚಿತ್ರಹಿಂಸೆ ನೀಡಿದ್ದಲ್ಲದೆ 36 ತಿಂಗಳಿಂದ ವೇತನ ನೀಡಲು ಸಹಕರಿಸಿಲ್ಲ. ಅಲ್ಲದೇ ಗ್ರಾ.ಪಂ. ಕಂಪ್ಯೂಟರ್‌ ಪಾಸ್‌ವರ್ಡ್ ನೀಡಿಲ್ಲ. ಉದ್ದೇಶಪೂರ್ವಕವಾಗಿ ಪಂಚತಂತ್ರದಲ್ಲಿ ಹೆಸರು ತೆಗೆದು ಅಮಾನವೀಯ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಬಿ.ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಈಗಾಗಲೇ ಪಿಡಿಒ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಮೃತರ ಬಾಕಿ ಇರುವ ಸಂಬಳ ಹಾಗೂ ಅನುಕಂಪದ ಆಧಾರದ ಮೇಲೆ ಕುಟುಂಬದ ಒಬ್ಬರನ್ನು ಸೇವೆಗೆ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು

ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಭರವಸೆ ನೀಡಿದರು. ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಸಿಪಿಐ ಮಹಾದೇವ ಪಂಚಮುಖಿ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಜಿಲ್ಲಾಧಿಕಾರಿ ಅವರೇ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಿ ರಾತ್ರಿಯವರೆಗೂ ಶವವನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಇಡಲಾಗಿತ್ತು. ಹಿಂದುಳಿದ ವರ್ಗಗಳ ಇಲಾಖೆ (ಬಿಸಿಎಂ) ಜಿಲ್ಲಾ ಅಧಿಕಾರಿ ರಮೇಶ ತಂಗಾ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು